ಮಹುವಾ ಮೊಯಿತ್ರಾ 
ಸುದ್ದಿಗಳು

ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಲೋಕಪಾಲ್ ಆದೇಶ

ಆರೋಪಗಳು ಗಂಭೀರವಾಗಿದ್ದು ಬಲವಾದ ಪುರಾವೆಗಳಿವೆ ಎಂದು ಲೋಕಪಾಲ್ ತಿಳಿಸಿದೆ.

Bar & Bench

ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯಡಿ (ಪಿಸಿಎ) ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಲೋಕಪಾಲ್ ಮಂಗಳವಾರ ಸಿಬಿಐಗೆ ನಿರ್ದೇಶನ ನೀಡಿದೆ.

ಆರೋಪಗಳು ಗಂಭೀರವಾಗಿದ್ದು ಬಲವಾದ ಪುರಾವೆಗಳಿವೆ ಎಂದು ನ್ಯಾಯಾಂಗ ಸದಸ್ಯೆ ನ್ಯಾ. ಅಭಿಲಾಷಾ ಕುಮಾರಿ, ಸದಸ್ಯರಾದ ಅರ್ಚನಾ ರಾಮಸುಂದರಂ ಹಾಗೂ ಮಹೇಂದರ್ ಸಿಂಗ್ ಅವರನ್ನೊಳಗೊಂಡ ಲೋಕಪಾಲ್‌ ಪೀಠ ತಿಳಿಸಿದೆ.

ಲೋಕಪಾಲ್‌ ನಿರ್ದೇಶನದ ಪ್ರಮುಖಾಂಶಗಳು

  • ದಾಖಲೆಯಲ್ಲಿ ಲಭ್ಯವಿರುವ ಇಡೀ ಸಾಕ್ಷ್ಯವನ್ನು ಎಚ್ಚರಿಕೆಯಿಂದ ಪರಿಶೀಲಿಸದ ಬಳಿಕ ಮಹುವಾ ಅವರ ವಿರುದ್ಧ ಮಾಡಲಾದ ಆರೋಪಗಳಿಗೆ ಬಲವಾದ ಸಾಕ್ಷ್ಯಗಳಿರುವುದು ಕಂಡುಬಂದಿದೆ.

  • ಆರೋಪ ಅತ್ಯಂತ ಗಂಭೀರ ಸ್ವರೂಪದ್ದು ಎಂಬ ಬಗ್ಗೆ ಯಾವುದೇ ಸಂದೇಹ ಇಲ್ಲ. ಹಾಗಾಗಿ ಸತ್ಯ ಸಾಬೀತಿಗಾಗಿ ಆಳವಾದ ತನಿಖೆ ನಡೆಸುವ ಅಗತ್ಯವಿದೆ.

  • ಸಿಬಿಐ ಸಲ್ಲಿಸಿದ ವರದಿ ಪ್ರಕಾರ, ಮಹುವಾ ತಮ್ಮ ಲಾಗಿನ್‌ ವಿವರಗಳನ್ನು ಹಾಗೂ ಲೋಕಸಭಾ ಆನ್‌ಲೈನ್‌ ವೇದಿಕೆಯ ಸದಸ್ಯರ ಪಾಸ್‌ವರ್ಡ್‌ಅನ್ನು ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂಬ ಮೊದಲ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ.

  • ಪ್ರಶ್ನೆಗಳನ್ನು ಆನ್‌ಲೈನ್‌ ವೇದಿಕೆಯಲ್ಲಿ ಪ್ರಕಟಿಸಲು ಅನುವು ಮಾಡಿಕೊಡುವ ಸಲುವಾಗಿ ಮಹುವಾ ಅವರು ತನ್ನೊಂದಿಗೆ ಆನ್‌ಲೈನ್‌ ವೇದಿಕೆಯ ಪಾಸ್‌ವರ್ಡ್‌ ಹಂಚಿಕೊಂಡಿರುವುದಾಗಿ ವಿಚಾರಣೆ ವೇಳೆ ದರ್ಶನ್‌ ಅವರು ತಿಳಿಸಿದ್ದಾರೆ.

  • ಮಹುವಾ ಅವರು ಕೇಳಿದ ಎಲ್ಲಾ 58 ಆನ್‌ಲೈನ್‌ ಪ್ರಶ್ನೆಗಳನ್ನು ತಾನು ಟೈಪ್‌ ಮಾಡಿದ್ದಾಗಿ ವಿಚಾರಣೆ ವೇಳೆ ದರ್ಶನ್‌ ದೃಢಪಡಿಸಿದ್ದಾರೆ.

  • ದುಬೈ, ಬೆಂಗಳೂರು ಹಾಗೂ ಅಮೆರಿಕದಿಂದ ವಿಪಿಎನ್‌ ಬಳಸಿ ಲಾಗಿನ್‌ ಆಗಿದ್ದು ಈ ಎಲ್ಲಾ ಪ್ರಶ್ನೆಗಳ ವಿವರಗಳನ್ನು ಪ್ರಾಥಮಿಕ ವಿಚಾರಣಾ ವರದಿಯಲ್ಲಿ ನೀಡಲಾಗಿದೆ ಎಂದು ದರ್ಶನ್‌ ದೃಢಪಡಿಸಿದ್ದಾರೆ.

  • ಪ್ರಶ್ನೆ ಕೇಳುವುದಕ್ಕಾಗಿ ಉಡುಗೊರೆ ಪಡೆಯಲಾಗಿದೆಯೇ ಎಂಬ ಬಗ್ಗೆ ಆಳವಾದ ತನಿಖೆ ನಡೆಸುವ ಅಗತ್ಯವಿದೆ.

  • ಸಿಬಿಐ ವರದಿಯ ಪ್ರಕಾರ, ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಲಾಜಿಸ್ಟಿಕ್ಸ್ ಇಲ್ಲವೇ ಪ್ರಯಾಣ ವೆಚ್ಚ ಅಥವಾ ಉಡುಗೊರೆಗಳಿಗಾಗಿ ಮಹುವಾ ಬೇಡಿಕೆ ಇಟ್ಟಿದ್ದರು ಮತ್ತು ಆಕೆಯ ಅಧಿಕೃತ ಬಂಗಲೆಯನ್ನು ನವೀಕರಿಸಲು ದರ್ಶನ್‌ ನೆರವು ನೀಡಿರುವುದಕ್ಕೆ ಸಂಬಂಧಿಸಿದಂತೆ ಮೂರನೇ ಮತ್ತು ನಾಲ್ಕನೇ ಆರೋಪಗಳು ದೃಢಪಟ್ಟಿವೆ.

  • ದೂರಿನಲ್ಲಿ ಮಾಡಲಾದ ಸಮಗ್ರ ಆರೋಪಗಳ ಬಗ್ಗೆ ಎಲ್ಲಾ ಆಯಾಮಗಳಿಂದ ಸಿಬಿಐ ತನಿಖೆ ನಡೆಸಬೇಕು. ಆದೇಶ ಸ್ವೀಕರಿಸಿದ ದಿನದಿಂದ ಆರು ತಿಂಗಳೊಳಗೆ ತನಿಖಾ ವರದಿಯನ್ನು ಸಲ್ಲಿಸಬೇಕು.

  • ತನಿಖೆಯ ಸ್ಥಿತಿಗತಿ ಬಗ್ಗೆ ಸಿಬಿಐ ಪ್ರತಿ ತಿಂಗಳು ನಿಯಮಿತ ವರದಿಗಳನ್ನು ಕೂಡ ಸಲ್ಲಿಸಬೇಕು.

ಉದ್ಯಮಿ ದರ್ಶನ್‌ ಜೊತೆ ಪಾಸ್‌ವರ್ಡ್‌ ಹಂಚಿಕೊಂಡದ್ದಕ್ಕೆ ಸಂಬಂಧಿಸಿದಂತೆ ಮಹುವಾ ಅವರ ವಿರುದ್ಧ ವಕೀಲ ಜೈ ಅನಂತ್ ದೆಹದ್ರಾಯ್ ಗಂಭೀರ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಸಂಸತ್‌ ಸದಸ್ಯರೊಬ್ಬರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಲೋಕಪಾಲ್‌ ಈ ನಿರ್ದೇಶನಗಳನ್ನು ನೀಡಿದೆ.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Lokpal of India.pdf
Preview