<div class="paragraphs"><p>[From L to R] Justice Sanjay Kishan Kaul and Justice MM Sundresh</p><p></p></div>

[From L to R] Justice Sanjay Kishan Kaul and Justice MM Sundresh

 
ಸುದ್ದಿಗಳು

ದೂರು ನೈಜವಾಗಿದ್ದರೂ ನೇಮಕಾತಿ ಪ್ರಕ್ರಿಯೆ ಕುರಿತ ಅರ್ಜಿ ಸಲ್ಲಿಕೆಯಲ್ಲಿ ದೀರ್ಘ ವಿಳಂಬವಾದರೆ ತಿರಸ್ಕಾರಾರ್ಹ: ಸುಪ್ರೀಂ

Bar & Bench

ನೇಮಕಾತಿ ಪ್ರಕ್ರಿಯೆಗೆ ಮುಕ್ತಾಯ ಅಗತ್ಯವಿರುವುದರಿಂದ ಅಂತಹ ಪ್ರಕ್ರಿಯೆಯಲ್ಲಿ, ಅಭ್ಯರ್ಥಿಯು ಒಂದು ನಿರ್ದಿಷ್ಟ ಅವಧಿ ಮೀರಿ ತನ್ನ ಅಹವಾಲಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು ಅನುಮತಿಸಲಾಗದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ [ಶಂಕರ್ ಮೊಂಡಲ್ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಹಾರ ಕೋರಿ ಮೂಲ ಅರ್ಜಿ (ಒಎ) ಸಲ್ಲಿಸುವಲ್ಲಿ ದೀರ್ಘ ವಿಳಂಬ ಉಂಟಾದರೆ ಅದೇ ಸ್ವತಃ ಮೇಲ್ಮನವಿದಾರನನ್ನು ದಾವೆ ಹೂಡದಂತೆ ತಡೆಯುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ವಿಭಾಗೀಯ ಪೀಠ ವಿವರಿಸಿದೆ.

“1999ರ ಜಾಹಿರಾತಿಗೆ ಸಂಬಂಧಿಸಿದಂತೆ, ನೇಮಕಾತಿ ಪತ್ರ ಪಡೆಯಲು ಅರ್ಜಿದಾರರು ಏಳು ವರ್ಷ ಸುದೀರ್ಘ ಅವಧಿಯವರೆಗೆ ಕಾದು ಕೂತಿದ್ದು ನಂತರ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಮೂಲ ಅರ್ಜಿ ಸಲ್ಲಿಸಿದೆ ಎಂದು ವಾದಿಸಲು ಅನುಮತಿಸಲಾಗದು ” ಎಂದ ಪೀಠ ಪ್ರಕರಣವನ್ನು ವಜಾಗೊಳಿಸಿತು.

ಮೇಲ್ಮನವಿದಾರ ಸಲ್ಲಿಸಿದ್ದ ಮೂಲ ಅರ್ಜಿಯನ್ನು ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಈ ಹಿಂದೆ ವಜಾಗೊಳಿಸಿತ್ತು. ಈ ಆದೇಶವನ್ನು ಕಲ್ಕತ್ತಾ ಹೈಕೋರ್ಟ್‌ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಅರ್ಜಿದಾರ ಪೊಲೀಸ್‌ ಪರಿಶೀಲನಾ ವರದಿಯನ್ನು ಬಿಟ್ಟುಬಿಡಲು ನಿರ್ದೇಶನ ನೀಡಬೇಕೆಂದು ಕೋರಿದ್ದರು.

1999ರಲ್ಲಿ, ಉಪ-ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆ ನೇಮಕಾತಿಗಾಗಿ ಜಾಹೀರಾತು ನೀಡಲಾಗಿತ್ತು, ಮೇಲ್ಮನವಿ ಸಲ್ಲಿಸಿದವರು ದೈಹಿಕ ಕ್ಷಮತೆ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಪೊಲೀಸ್ ಪರಿಶೀಲನಾ ವರದಿ ಸಲ್ಲಿಸದ ಕಾರಣ ಅವರ ನೇಮಕಾತಿ ನಡೆದಿರಲಿಲ್ಲ. ಇತ್ತ ಲೋಕೋಪಯೋಗಿ ಇಲಾಖೆ ತನಗೆ ಪೊಲೀಸ್‌ ಪರಿಶೀಲನಾ ವರದಿ ಅಗತ್ಯ ಎಂದಿತು.

ಎರಡನೇ ಮೂಲ ಅರ್ಜಿ ಸಲಿಸಿದ ಮೇಲ್ಮನವಿದಾರ ಎಂಟು ವರ್ಷಗಳಿಂದ ದೊರೆಯದ ಪೊಲೀಸ್‌ ಪರಿಶೀಲನಾ ವರದಿಯನ್ನು ದೊರಕಿಸಿಕೊಡುವಂತೆ ಕೋರಿದರು. ಆದರೆ ಪೊಲೀಸ್‌ ಪರಿಶೀಲನಾ ವರದಿಯ ಸ್ಥಿತಿಗತಿ ತಿಳಿಯಲು ಅರ್ಜಿದಾರರು ಯಾವುದೇ ಮನವಿ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ನ್ಯಾಯಮಂಡಳಿ ಅರ್ಜಿಯನ್ನು ತಿರಸ್ಕರಿಸಿತು. ಮೇಲ್ಮನವಿದಾರ ಬಾಂಗ್ಲಾದೇಶದ ಪ್ರಜೆ ಎಂಬ ಕಾರಣಕ್ಕೆ ಅವರ ಅರ್ಜಿ ಕಲ್ಕತ್ತಾ ಹೈಕೋರ್ಟ್‌ನಲ್ಲೂ ತಿರಸ್ಕೃತವಾಯಿತು. ಈಗ ಸುಪ್ರೀಂ ಕೋರ್ಟ್‌ ಕೂಡ ಅರ್ಜಿ ತಿರಸ್ಕರಿಸಿದ್ದು 24 ವರ್ಷದಷ್ಟು ದೀರ್ಘಾವಧಿಯೇ ಮೇಲ್ಮನವಿದಾರನಿಗೆ ಪರಿಹಾರ ಒದಗಿಸಲು ಅಡಚಣೆಯಾಗಿ ಪರಿಣಮಿಸಿದೆ ಎಂದಿದೆ. ರಾಜ್ಯ ಆಡಳಿತ ನ್ಯಾಯಮಂಡಳಿ ಮುಂದೆ ಮೂಲ ಅರ್ಜಿ ಸಲ್ಲಿಸಲು ಮೇಲ್ಮನವಿದಾರರಿಗೆ ಏಳು ವರ್ಷಗಳ ಕಾಲ ಹಿಡಿಯಿತು ಎಂದು ಸುಪ್ರೀಂಕೋರ್ಟ್‌ ಒತ್ತಿ ಹೇಳಿದೆ.