ಗುರುತರ ಆರೋಪ ಎದುರಿಸುತ್ತಿರುವ ಆರೋಪಿಯೊಬ್ಬ ದೀರ್ಘಾವಧಿಯವರೆಗೆ ವಿಚಾರಣಾಧೀನ ಕೈದಿಯಾಗಿ ಬಂಧನದಲ್ಲಿದ್ದಾನೆ ಎಂದ ಮಾತ್ರಕ್ಕೆ ಆತನಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಮಲಯಾಳಂ ಸಿನಿಮಾ ನಟ ದಿಲೀಪ್ ಆರೋಪಿಯಾಗಿರುವ ಬಹುಭಾಷಾ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಸುಮಾರು ಆರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಪಲ್ಸರ್ ಸುನಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್ ವಜಾಗೊಳಿಸಿದ್ದಾರೆ.
“ಈ ಪ್ರಕರಣದಲ್ಲಿ ಸಂತ್ರಸ್ತೆ ನೀಡಿದ ಸಾಕ್ಷ್ಯಾಧಾರದ ಮೇಲೆ ಪ್ರಾಸಿಕ್ಯೂಷನ್ ವಾದವನ್ನು ಅರ್ಥಮಾಡಿಕೊಂಡ ನಂತರ, ಅರ್ಜಿದಾರ/ಆರೋಪಿ ಸುಮಾರು ಆರು ವರ್ಷಗಳಿಂದ ಜೈಲಿನಲ್ಲಿದ್ದರೂ ಜಾಮೀನಿಗೆ ಅರ್ಹರಲ್ಲ ಎಂದು ನಾನು ಪರಿಗಣಿಸಿದ್ದೇನೆ. ಪ್ರಾಸಿಕ್ಯೂಷನ್ ವಾದ ತುಂಬಾ ಗಂಭೀರವಾಗಿದೆ. ಸಂತ್ರಸ್ತೆ ಸಿನಿಮಾ ಕಲಾವಿದರೋ, ಅಲ್ಲವೋ ಅನ್ನೋದು ಎಳ್ಳಷ್ಟೂ ಮುಖ್ಯವಲ್ಲ... ವಿಚಾರಣೆ ನಂತರ ಸತ್ಯ ಹೊರಬರಬೇಕಿದೆ. ಅರ್ಜಿದಾರರ/ಆರೋಪಿ ಆರು ವರ್ಷಗಳ ಕಾಲ ಜೈಲಿನಲ್ಲಿದ್ದಾನೆ ಎಂಬುದು ಇಂತಹ ಗಂಭೀರ ಪ್ರಕರಣದಲ್ಲಿ ಅವರನ್ನು ಬಿಡುಗಡೆ ಮಾಡಲು ಕಾರಣವಾಗದು” ಎಂದು ನ್ಯಾಯಾಲಯ ವಿವರಿಸಿದೆ.
"ಸಂತ್ರಸ್ತ ಮಹಿಳೆ ಸಿನಿ ಕಲಾವಿದೆ ಅಥವಾ ಇಲ್ಲವೇ ಎಂಬುದು ಯಾವುದೇ ಅಂಶವಲ್ಲ. ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿದೆ. ವಿಚಾರಣೆಯ ನಂತರ ಸತ್ಯ ಹೊರಬರಬೇಕಾಗಿದೆ," ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಾಸಿಕ್ಯೂಷನ್ ಮತ್ತು ವಿಚಾರಣಾ ನ್ಯಾಯಾಲಯವು ವಿಚಾರಣೆಯನ್ನು ತ್ವರಿತವಾಗಿ ಮುಗಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಸುಪ್ರೀಂ ಕೋರ್ಟ್ ಕೂಡ ವಿಚಾರಣೆಯನ್ನು ಗಮನಿಸುತ್ತಿದ್ದು, ವಿಚಾರಣೆ ಪೂರ್ಣಗೊಳಿಸಲು ಕಾಲಾವಕಾಶ ನೀಡಿದೆ ಎಂದು ನ್ಯಾಯಾಲಯ ವಿವರಿಸಿದೆ.
ವಿಚಾರಣಾ ನ್ಯಾಯಾಲಯವು ಈಗ ಸೆಷನ್ಸ್ ಪ್ರಕರಣವನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡಬಹುದು ಎಂದು ಹೇಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯ ಜಾಮೀನು ಅರ್ಜಿಯನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ನಂಬುವುದಾಗಿ ನ್ಯಾಯಾಲಯ ಹೇಳಿದೆ.
ಪ್ರಾಸಿಕ್ಯೂಷನ್ ಯಶಸ್ವಿಯಾಗುತ್ತದೆಯೇ ಅಥವಾ ಪ್ರತಿವಾದವು ಯಶಸ್ವಿಯಾಗುತ್ತದೆಯೇ ಎಂಬುದು ಈ ರೀತಿಯ ಪ್ರಕರಣಗಳಲ್ಲಿ ಜಾಮೀನು ನೀಡಲು ಮಾನದಂಡವಾಗುವುದಿಲ್ಲ ಎಂದು ನ್ಯಾಯಾಲಯ ಒತ್ತಿಹೇಳಿದೆ.
" ಆರೋಪಿಯ ವಿರುದ್ಧ ಸಮಾಜದ ಆತ್ಮಸಾಕ್ಷಿಯ ಮೇಲೆ ಪರಿಣಾಮ ಬೀರುವಂತಹ ಗಂಭೀರ ಆರೋಪ ಇದ್ದಾಗ, ಈ ನ್ಯಾಯಾಲಯವು ಕೇವಲ ವೈಯಕ್ತಿಕ ಸ್ವಾತಂತ್ರ್ಯದ ಆಧಾರದ ಮೇಲೆ ಜಾಮೀನು ಅರ್ಜಿಗೆ ಅನುಮತಿಸುವುದಿಲ್ಲ" ಎಂದು ಅದು ಹೇಳಿದೆ. ಪಲ್ಸರ್ ಸುನಿ ಅಲಿಯಾಸ್ ಸುನಿಲ್ ಎನ್ ಎಸ್ ಪ್ರಕರಣದ ಮೊದಲ ಆರೋಪಿಯಾಗಿದ್ದು ಆತನ ವಿರುದ್ಧ ಐಪಿಸಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.