CJI DY Chandrachud  
ಸುದ್ದಿಗಳು

ತಡರಾತ್ರಿಯವರೆಗೆ ಕೆಲಸ, ಹಣಕಾಸಿನ ಚಿಂತೆ ವಕೀಲರ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣ: ಸಿಜೆಐ ಚಂದ್ರಚೂಡ್

ಇದೇ ವೇಳೆ ಅವರು ವಕೀಲ ವೃತ್ತಿ ಎಂಬುದು ಊಳಿಗಮಾನ್ಯ ಮನಸ್ಥಿತಿಯಿಂದ ಕೂಡಿದ್ದು ಮಹಿಳೆಯರಿಗೆ, ಜನಾಂಗೀಯ ತಾರತಮ್ಯ ಎದುರಿಸುತ್ತಿರುವವರಿಗೆ ಸ್ವಾಗತಾರ್ಹವಾಗಿಲ್ಲ ಎಂದು ಹೇಳಿದರು.

Bar & Bench

ವಕೀಲರು ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ಸಮಯ ವ್ಯಯಿಸುವುದು ಅವರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಬೇಸರ ವ್ಯಕ್ತಪಡಿಸಿದರು.

ತಾನು ಅಧ್ಯಯನ ಮಾಡಿದ್ದ ಅಮೆರಿಕದ ಪ್ರತಿಷ್ಠಿತ ಕಾನೂನು ಶಿಕ್ಷಣ ಸಂಸ್ಥೆಯಾದ ಹಾರ್ವರ್ಡ್‌ ಲಾ ಸ್ಕೂಲ್‌ನಿಂದ ಬುಧವಾರ ವರ್ಚುವಲ್‌ ವಿಧಾನದಲ್ಲಿ ಸೆಂಟರ್ ಆನ್ ದಿ ಲೀಗಲ್ ಪ್ರೊಫೆಷನ್ ಅವಾರ್ಡ್ ಫಾರ್ ಗ್ಲೋಬಲ್ ಲೀಡರ್‌ಶಿಪ್  (ಕಾನೂನು ವೃತ್ತಿಯಲ್ಲಿನ ಜಾಗತಿಕ ನಾಯಕತ್ವಕ್ಕಾಗಿ ನೀಡುವ ಪ್ರಶಸ್ತಿ) ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ವಕೀಲರ ಮಾನಸಿಕ ಆರೋಗ್ಯ ಸಮಸ್ಯೆಗೆ ಕೆಲಸದ ಹೊರೆ ಹಾಗೂ ಹಣಕಾಸಿನ ಚಿಂತೆ ಸೇರಿದಂತೆ ಹಲವು ಕಾರಣಗಳಿವೆ ಎಂದು ಅವರು ಹೇಳಿದರು. ಇದೇ ವೇಳೆ ವಕೀಲ ವೃತ್ತಿ ಎಂಬುದು ಊಳಿಗ ಮಾನ್ಯ ವಕೀಲ ವೃತ್ತಿ ಎಂಬುದು ಊಳಿಗಮಾನ್ಯ ಮನಸ್ಥಿತಿಯಿಂದ ಕೂಡಿದ್ದು ಮಹಿಳೆಯರಿಗೆ, ಜನಾಂಗೀಯ ತಾರತಮ್ಯ ಎದುರಿಸುತ್ತಿರುವವರಿಗೆ ಸ್ವಾಗತಾರ್ಹವಾಗಿಲ್ಲ ಎಂದು ಹೇಳಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಹೆಚ್ಚು ಕೆಲಸ ಮಾಡುವ ಬಗ್ಗೆ ವಕೀಲರು ಹೆಮ್ಮೆಪಡುತ್ತಾರೆ. ಆದರೆ ಅದು ಒತ್ತಡ ಉಂಟುಮಾಡುತ್ತದೆ. ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ದೀರ್ಘಾವಧಿಯಲ್ಲಿ ಕಾರ್ಯಕ್ಷಮತೆ ಸುಧಾರಿಸುತ್ತದೆ. ಶ್ರೇಷ್ಠತೆ ಎನ್ನುವುದು ಇತರೆ ಸಂಗತಿಗಳನ್ನು ಬದಿಗೆ ಸರಿಸುವುದರಿಂದ ಮೂಡುತ್ತದೆ ಎನ್ನುವ ಕಲ್ಪನೆಯ ವ್ಯವಸ್ಥೆಯನ್ನು ನಾವು ಬೆಳೆಸಿಕೊಂಡು ಬಂದಿದ್ದೇವೆ.

  • ಅತಿಹೆಚ್ಚು ಕೆಲಸ ಮಾಡುವುದರ ಬಗೆಗಿನ ವೈಭವೀಕರಣವನ್ನು ನಾವು ನಿಲ್ಲಿಸಬೇಕಿದೆ. ಸಮಗ್ರ ಕೆಲಸದ ಬಗ್ಗೆ ಆದ್ಯತೆ ನೀಡಬೇಕಿದೆ. ವೃತ್ತಿಯ ಸುತ್ತಲೂ ಇರುವ ಮಾನಸಿಕ ಆರೋಗ್ಯ ಸಮಸ್ಯೆ ಬಗೆಗಿನ ಕಳಂಕವನ್ನು ಹೋಗಲಾಡಿಸಬೇಕಿದೆ.

  • ಕಾರ್ಪೊರೇಟ್‌ ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡುವವರ ಹೊರತಾಗಿ ಉಳಿದ ವಕೀಲರಿಗೆ ಸೂಕ್ತ ವೇತನ ದೊರೆಯುತ್ತಿಲ್ಲ. ಅವರಿಗೆ ಯೋಗ್ಯ ವೇತನ ದೊರಕಿಸಿಕೊಡುವ ಕುರಿತಂತೆ ಆಲೋಚಿಸಬೇಕಿದೆ.

  • ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಕಾನೂನು ಈಗಲೂ ಊಳಿಗಮಾನ್ಯ ವೃತ್ತಿಯಾಗಿದೆ. ಅಲ್ಲಿ ಬಹಿಷ್ಕರಿಸುವಿಕೆ ಅಸ್ತಿತ್ವದಲ್ಲಿದ್ದು ಅಲ್ಪಸಂಖ್ಯಾತರು, ಶೋಷಿತರು ಮಹಿಳೆಯರಿಗೆ ವೃತ್ತಿ ಕಷ್ಟಕರವಾಗಿದೆ. ಜನಾಂಗೀಯವಾಗಿ ಅನನುಕೂಲಕರವಾಗಿದೆ.

  • ವೃತ್ತಿಯಲ್ಲಿ ಅರ್ಹತೆಯ ಪರಿಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಬೇಕಾಗಿದೆ. ಸಕಾರಾತ್ಮಕ ಕ್ರಿಯೆ ಎಂಬುದು ಅರ್ಹತೆಯನ್ನು ಪೋಷಿಸಬೇಕು, ಅದನ್ನು ಹೊರಗಿರಿಸಬಾರದು. ಯಾರ ಬಗ್ಗೆ ಏಕರೂಪ ಪೂರ್ವಗ್ರಹಗಳಿವೆಯೋ ಅವರನ್ನು ಒಳಗೊಳ್ಳಬೇಕು.

  • ತಂತ್ರಜ್ಞಾನದ ಬಳಕೆ, ಜನಾಂಗೀಯ ತಾರತಮ್ಯ ತಡೆ ಕಾನೂನು ಶಾಲೆಗಳಿಂದಲೇ ಆರಂಭವಾಗಬೇಕು. ಇದರಿಂದ ಸಮಾಜದ ಒಳಗೊಳ್ಳುವಿಕೆ ಸಾಧ್ಯ.