Advocate P Balasubramanian Menon
Advocate P Balasubramanian Menon 
ಸುದ್ದಿಗಳು

ನಿವೃತ್ತಿ ಬಗ್ಗೆ ಯೋಚಿಸಿಯೇ ಇಲ್ಲ: ಸುದೀರ್ಘ ಸೇವೆಗಾಗಿ ಗಿನ್ನೆಸ್ ದಾಖಲೆ ಬರೆದ ವಕೀಲ ಮೆನನ್ ಮಾತು

Bar & Bench

“ನನಗೆಷ್ಟು ಸಾಧ್ಯವಾಗುತ್ತದೋ ಅಷ್ಟೂ ಕೆಲಸ ಮಾಡುತ್ತೇನೆ. ಈಗ ನನಗೆ 98 ವರ್ಷ. ನಿವೃತ್ತಿ ಬಗ್ಗೆ ಯೋಚಿಸಿಯೇ ಇಲ್ಲ. ಈಗಲೂ ಕೆಲಸ ಮಾಡಿ ಜೀವನೋಪಾಯ ನಡೆಸುತ್ತೇನೆ ಎಂದರು ವಕೀಲ ಪಿ ಬಾಲಸುಬ್ರಮಣಿಯನ್ ಮೆನನ್.

ವೃತ್ತಿಯಲ್ಲಿ 73 ವರ್ಷ, 60 ದಿನಗಳನ್ನು ಪೂರೈಸಿರುವ ಮೆನನ್ ಜಗತ್ತಿನಲ್ಲಿಯೇ ಅತಿ ದೀರ್ಘಾವಧಿಗೆ ವಕೀಲರಾಗಿರುವುದಕ್ಕಾಗ ಗಿನ್ನೆಸ್‌ ವಿಶ್ವ ದಾಖಲೆ ಬರೆದಿದ್ದಾರೆ. ಜಿಬ್ರಾಲ್ಟರ್‌ನ ಸರ್ಕಾರಿ ವಕೀಲ ಲೂಯಿಸ್ ಟ್ರೈಯ್ ಅವರ ದಾಖಲೆಯನ್ನು ಮೆನನ್‌ ಮುರಿದಿದ್ದಾರೆ. ಟ್ರೈಯ್ ಅವರು 70 ವರ್ಷ 311 ದಿನಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್ಸ್‌ ಸೇರಿದ ಕೆಲವು ದಿನಗಳ ಬಳಿಕ ಮೆನನ್‌ ಗಿನ್ನೆಸ್‌ ಬುಕ್‌ನಲ್ಲಿಯೂ ತಮ್ಮ ಹೆಸರು ಮೂಡಿಸಿದ್ದಾರೆ.

Guiness World Record Holder

ಈ ಸಾಧನೆಯ ಹಿನ್ನೆಲೆಯಲ್ಲಿ ʼಬಾರ್‌ ಅಂಡ್‌ ಬೆಂಚ್‌ʼಸಾರಾ ಸೂಸಾನ್‌ ಜೀಜಿ ಅವರು ಕೇರಳದ ಪಾಲಕ್ಕಾಡ್‌ನಲ್ಲಿ ಮೆನನ್‌ ಅವರ ಸಂದರ್ಶನ ನಡೆಸಿದರು. ಅದರ ಪ್ರಮುಖಾಂಶಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.

ಗಿನ್ನೆಸ್‌ ವಿಶ್ವ ದಾಖಲೆಗೆ ಸೇರ್ಪಡೆಯಾಗುತ್ತೇನೆ ಎಂದು ಕನಸಿನಲ್ಲಿಉಯೂ ಎಣಿಸಿರಲಿಲ್ಲ ಎಂದು ಮಾತು ಆರಂಭಿಸಿದ ಅವರು ವಕೀಲ ವೃತ್ತಿ ಆರಂಭಿಸಿದ್ದು 1950ರಲ್ಲಿ. ಸಿವಿಲ್‌ ಕಾನೂನು ಕ್ಷೇತ್ರದಲ್ಲಿ ಹೆಚ್ಚು ಕೃಷಿ ಮಾಡಲಾರಂಭಿಸಿದ್ದು 1952ರಿಂದ.

ಒಡಹುಟ್ಟಿದವರು ಎಂಜಿನಿಯರಿಂಗ್‌, ವೈದ್ಯಕೀಯ ಕ್ಷೇತ್ರ ಆಯ್ದುಕೊಂಡಿದ್ದರಿಂದ ಕಾನೂನಿನಲ್ಲಿ ವೃತ್ತಿಜೀವನ ಆರಂಭಿಸುವಂತೆ ಅವರನ್ನು ಅವರ ಪೋಷಕರು ಸೂಚಿಸಿದರಂತೆ. ಅಡ್ವೊಕೇಟ್‌ ಜನರಲ್‌ ಅವರ ಕಿರಿಯರಾಗಿ ಎರಡು ವರ್ಷ ಸೇವೆ ಸಲ್ಲಿಸಿ ಬಳಿಕ ಪೋಷಕರ ಒತ್ತಾಯದಂತೆ ಪಾಲಕ್ಕಾಡ್‌ಗೆ ಮೆನನ್‌ ಮರಳಿದರು. ಕೊಚ್ಚಿ ಬಂದರು ಪ್ರಕರಣದ ವಿಚಾರಣೆ ವೇಳೆ ನ್ಯಾಯಾಧೀಶರೊಬ್ಬರು ಸಿವಿಲ್‌ ಕಾನೂನಿನಲ್ಲಿ ಪರಿಣತಿ ಪಡೆಯುವಂತೆ ಪ್ರೇರೇಪಿಸಿದ್ದು ತಮ್ಮ ಬದುಕಿನ ಮಹತ್ವದ ತಿರುವು ಎನ್ನುತ್ತಾರೆ ಅವರು.

Adv PB Menon

ಮೆನನ್‌ ಅವರ ಪಾಲಿಗೆ ಕಾನೂನು ವ್ಯವಹಾರವಲ್ಲ ಬದಲಿಗೆ ಸಮರ್ಪಿತ ವೃತ್ತಿಯಾಗಿದೆ. “ಇದು ನನ್ನ ವೃತ್ತಿ, ವ್ಯಾಪಾರವಲ್ಲ. ನಾನು ಇಂದಿಗೂ ನನ್ನ ವೃತ್ತಿ ಮತ್ತು ನೀತಿಗೆ ನಿಷ್ಠನಾಗಿದ್ದೇನೆ. ಪರಿಣಾಮವಾಗಿ, ಕಾನೂನು ಅಭಿಪ್ರಾಯಗಳನ್ನು ಪಡೆಯಲು ಬಹಳಷ್ಟು ಜನ ನನ್ನನ್ನು ಸಂಪರ್ಕಿಸುತ್ತಾರೆ. ಅವರನ್ನು ಎಂದಿಗೂ ದಾರಿ ತಪ್ಪಿಸುವುದಿಲ್ಲ. ಸೂಕ್ತ ಅಭಿಪ್ರಾಯ ನೀಡುತ್ತೇನೆ” ಎನ್ನುತ್ತಾರೆ ಅವರು. ನ್ಯಾಯವನ್ನು ನಿಜವಾಗಿಯೂ ಬೇಡಿ ಬಂದ ಕಕ್ಷಿದಾರರಿಗೆ ಸಹಾಯ ಮಾಡುವುದರತ್ತ ಅವರ ಒಲವು.

ಈ ವಯಸ್ಸಿನಲ್ಲೂ ಕಾನೂನು ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳನ್ನು ಅವರು ಕೈಬರಹದ ಮೂಲಕವೇ ದಾಖಲಿಸಿಕೊಳ್ಳುತ್ತಾರಂತೆ. ವರ್ಷುವಲ್‌ ವಿಚಾರಣೆ, ಇ ಫೈಲಿಂಗ್‌ಗೆ ಹೊಂದಿಕೊಳ್ಳುವುದು ಅವರಿಗೆ ಕಷ್ಟಕರವಾಗಿದೆಯಂತೆ. ಕಾನೂನಿನ ವಿಷಯಕ್ಕೆ ಬಂದಾಗ ಸಾಂಪ್ರದಾಯಿಕ ವಿಧಾನಕ್ಕೇ ಅವರು ಒತ್ತು ನೀಡುತ್ತಾರೆ. ಆದರೆ ಹೈ ಕೋರ್ಟ್‌ಗಳು ಸ್ಪಷ್ಟ ಉತ್ತರ ನೀಡದ ವಲಯಗಳಲ್ಲಿ ತಮ್ಮ ಒಳನೋಟವುಳ್ಳ ಲೇಖನಗಳನ್ನು ಬರೆಯುತ್ತಾ ಕಾನೂನು ಜ್ಞಾನ ಹರಡುವುದಕ್ಕೆ ತಮ್ಮನ್ನು ಮುಡಿಪಾಗಿಟ್ಟಿದ್ದಾರೆ ಮೆನನ್.

Advocate Menon in his earlier days

ನುರಿತ ಸಿವಿಲ್ ವಕೀಲರ ಕೊರತೆ  ಇದೆ ಎಂಬುದು ಅವರ ಅಭಿಪ್ರಾಯ. ಸಿವಿಲ್‌ ಕಾನೂನಿನಲ್ಲಿ ವಕೀಲರಾಗಲು ಯಾರೂ ಬಯಸುವುದಿಲ್ಲ. ಅದು ಬಹಳಷ್ಟು ಕೆಲಸ ಒಳಗೊಂಡಿರುತ್ತದೆ. ಕ್ರಿಮಿನಲ್‌ ವಕೀಲರಾದರೆ ಕೂಡಲೇ ಹಣ ದೊರೆಯುತ್ತದೆ ಕೆಲಸವೂ ಕಡಿಮೆ ಇರುತ್ತದೆ ಎಂದವರು ಹೇಳುತ್ತಾರೆ.

ಸಿವಿಲ್ ಪ್ರಕ್ರಿಯಾ ಸಂಹಿತೆ ಬಗ್ಗೆ 2002ರಲ್ಲಿ ಮಾಡಿದ ಬದಲಾವಣೆಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು ವಿಚಾರಣಾ ನ್ಯಾಯಾಲಯದ ಕೆಲಸದ ಪರಿಚಯವಿಲ್ಲದ ಕಾರಣ ಈ ರೀತಿ ಆಗಿದೆ ಎಂದರು.

ಮೆನನ್ ಅವರು ಮಧ್ಯಸ್ಥಿಕೆಯಂತಹ ಪರ್ಯಾಯ ವಿವಾದ ಪರಿಹಾರ ವಿಧಾನಗಳನ್ನು ಸಂಪೂರ್ಣವಾಗಿ ಬೆಂಬಲಿಸುವುದಿಲ್ಲ, ಏಕೆಂದರೆ ಅಂತಹ ಪ್ರಕರಣಗಳಲ್ಲಿ ಪ್ರಾಮಾಣಿಕ ದಾವೆದಾರರಿಗೆ ನ್ಯಾಯ ಸಿಗುವುದಿಲ್ಲ ಎಂಬುದು ಅವರ ಭಾವನೆ.

ನ್ಯಾಯಾಂಗದ ಬಗ್ಗೆ ತಮಗೆ ಅಪಾರ ನಂಬಿಕೆ ಇದ್ದರೂ ನ್ಯಾಯಾಲಯ ತಪ್ಪು ಮಾಡಿದೆ ಎನಿಸಿದಾಗ ತೀರ್ಪುಗಳನ್ನು ಪ್ರಶ್ನಿಸಲು ತಾನು ಹೆದರುವುದಿಲ್ಲ. ನ್ಯಾಯಾಧೀಶರಿಗೆ ಭಾರೀ ಕೆಲಸದ ಒತ್ತಡ ಇರುವುದರಿಂದ ಆಗಾಗ ತೀರ್ಪುಗಳಲ್ಲಿ ದೋಷ ಕಂಡುಬರುತ್ತವೆ ಎನ್ನುತ್ತಾರೆ ಅವರು.

Menon's office

"ಹಲವು ಪ್ರಕರಣಗಳಿವೆ, ಅವರಿಗೆ ಸಮಯ ಇರುವುದಿಲ್ಲ, ಎಷ್ಟೇ ನ್ಯಾಯಾಧೀಶರು ಇದ್ದರೂ, ನಾನು ಅವರನ್ನು ದೂಷಿಸುವುದಿಲ್ಲ, ನಾನು ಸದಾ ನ್ಯಾಯಾಲಯವನ್ನು ಗೌರವಿಸುತ್ತೇನೆ, ಎಂದಿಗೂ ನ್ಯಾಯಾಧೀಶರನ್ನು ಟೀಕಿಸುವುದಿಲ್ಲ ಬದಲಿಗೆ ಅವರ ತೀರ್ಪುಗಳನ್ನು ಟೀಕಿಸುತ್ತೇನೆ. ನಾನು  ನ್ಯಾಯಾಲಯಕ್ಕೆ ಸಂಪೂರ್ಣ ಗೌರವ ತೋರುತ್ತೇನೆ.  ಅವರು ಏನಾದರೂ ತಪ್ಪು ತೀರ್ಪು ನೀಡಿದರೆ ಟೀಕಿಸುತ್ತೇನೆ ಎಂದು ಅವರು ಹೇಳುತ್ತಾರೆ.

ವೃತ್ತಿಯಲ್ಲಿ ಸಾಕಷ್ಟು ಮಾಗಿರುವ ಮೆನನ್‌, ಯುವ ಪೀಳಿಗೆಯ ನ್ಯಾಯವಾದಿಗಳಿಗೆ ಹೇಳುವುದಿಷ್ಟು: ʼಕಷ್ಟಪಟ್ಟು ಕೆಲಸ ಮಾಡಿ ಮತ್ತೇನೂ ಇಲ್ಲ.ʼ