“ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಪ್ರೀತಿ-ಪ್ರೇಮದ ಪ್ರಕರಣಗಳನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ಶಾಸನದಲ್ಲಿ ಬದಲಾವಣೆಯಾಗಬೇಕಿದೆ” ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಬಿ ವೀರಪ್ಪ ಹೇಳಿದರು.
ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಯೂನಿಸೆಫ್ ಮತ್ತು ಎನ್‌ಫೋಲ್ಡ್ ಪ್ರೊ ಆಕ್ಟೀವ್ ಹೆಲ್ತ್ ಟ್ರಸ್ಟ್ ಸಹಯೋಗದಲ್ಲಿ ಹೈಕೋರ್ಟ್‌ನ ಬಾಲ ನ್ಯಾಯ ಸಮಿತಿಯು ಇಂದು ಆಯೋಜಿಸಿದ್ದ ಪೋಕ್ಸೊ ಕಾಯಿದೆ-2012ಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದ ಸಮಾಲೋಚನಾ ಸಮಾವೇಶದಲ್ಲಿ ಅವರು ಮಾತನಾಡಿದರು.
“ಮಕ್ಕಳ ಕಸ್ಟಡಿ ಕುರಿತ ಪ್ರಕರಣಗಳಲ್ಲಿ ವಿದ್ಯಾವಂತ ತಂದೆ-ತಾಯಿಯು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಸನದ ಅಗತ್ಯವಿದ್ದು, ತಂದೆ-ತಾಯಿಯನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳನ್ನಾಗಿ ಮಾಡಬೇಕಿದೆ. ಹೀಗೆ ಮಾಡುವುದರಿಂದ ಮಕ್ಕಳ ಮೇಲಿನ ಬಹುತೇಕ ದೌರ್ಜನ್ಯ ತಪ್ಪಲಿದೆ. ವೈಯಕ್ತಿಕ ಅಹಂಕಾರದಿಂದ ವಿದ್ಯಾವಂತ ತಂದೆ-ತಾಯಿ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಮಕ್ಕಳ ಭವಿಷ್ಯ ಹಾಳಾಗುವುದನ್ನು ತಪ್ಪಿಸಬೇಕಿದೆ” ಎಂದು ಕಳಕಳಿ ವ್ಯಕ್ತಪಡಿಸಿದರು.
“ಕರ್ನಾಟಕದಲ್ಲಿ ಪೋಕ್ಸೊ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸವಾಗುತ್ತಿದೆ. ಕೆಎಸ್‌ಎಲ್‌ಎಸ್‌ಎಯು ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಕಾನೂನು ನೆರವು ಅರಿವು ಕಾರ್ಯ ನಡೆಸಲು ನಿರ್ದೇಶಿಸಿದೆ. ಪೋಕ್ಸೊ ಕಾಯಿದೆಯ ಸೆಕ್ಷನ್ 40ರ ಪ್ರಕಾರ ಸಂತ್ರಸ್ತ ಮಕ್ಕಳು ತಮ್ಮ ಇಚ್ಛೆಯಂತೆ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ. ಇಲ್ಲವಾದಲ್ಲಿ ಕೆಎಸ್‌ಎಲ್‌ಎಸ್‌ಎಯು ಸಂತ್ರಸ್ತೆ ಮತ್ತು ಅವರ ಕುಟುಂಬದವರಿಗೆ ಪ್ಯಾನಲ್ ವಕೀಲರ ನೆರವು ಕಲ್ಪಿಸಿಕೊಡಲಿದೆ” ಎಂದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು “ಕರ್ನಾಟಕದಲ್ಲಿ ಈಗಾಗಲೇ 28 ವಿಶೇಷ ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಹೆಸರಿಸಲಾಗಿರುವ 18 ಮಕ್ಕಳ ಸ್ನೇಹಿ ನ್ಯಾಯಾಲಯಗಳಿದ್ದು, ವಿಚಾರಣೆಯ ಸಂದರ್ಭದಲ್ಲಿ ಸಂತ್ರಸ್ತರು ಆರೋಪಿಗಳ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಇವುಗಳನ್ನು ರೂಪಿಸಲಾಗಿದೆ. ಮಕ್ಕಳ ಸ್ನೇಹಿ ನ್ಯಾಯಾಲಯಗಳಿಗಾಗಿ ರಾಜ್ಯ ಸರ್ಕಾರವು ಮಾರ್ಗಸೂಚಿಯನ್ನೂ ರೂಪಿಸಿದೆ” ಎಂದರು.
“ಪೋಕ್ಸೊ ಕಾಯಿದೆ ಜಾರಿಗೆ ಸಂಬಂಧಿಸಿದಂತೆ ಇರುವ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸಲಹೆ ನೀಡುವ ಸಂಬಂಧ ಬಾಲ ನ್ಯಾಯ ಮಂಡಳಿ ಸಮಿತಿಯ ಮುಖ್ಯಸ್ಥರಾದ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರು ಸಲಹೆಗಳನ್ನು ನೀಡುವಂತೆ ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಸಮಾಲೋಚನ ಸಭೆ ನಡೆಯಲಿದೆ” ಎಂದರು.
ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಅಲೋಕ್ ಅರಾಧೆ, ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್, ಬಾಲ ನ್ಯಾಯ ಸಮಿತಿ ಅಧ್ಯಕ್ಷೆ ನ್ಯಾಯಮೂರ್ತಿ ಕೆ ಎಸ್ ಮುದುಗಲ್ ಮತ್ತಿತರರು ಉಪಸ್ಥಿತರಿದ್ದರು.