Rahul gandhi 
ಸುದ್ದಿಗಳು

ಭಾರತೀಯ ಸೇನೆಯ ಅವಹೇಳನ ಆರೋಪ: ರಾಹುಲ್ ಗಾಂಧಿಗೆ ಲಖನೌ ನ್ಯಾಯಾಲಯ ಸಮನ್ಸ್

2022ರಲ್ಲಿ ಭಾರತ ಮತ್ತು ಚೀನಾದ ಪಡೆಗಳ ನಡುವಿನ ಘರ್ಷಣೆಯ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಗಳು ಅವಹೇಳನಕಾರಿ ಮತ್ತು ಮಾನಹಾನಿಕರ ಎಂದು ದೂರಲಾಗಿದೆ.

Bar & Bench

ಮೂರು ವರ್ಷಗಳ ಹಿಂದೆ ಅಂದರೆ 2022ರಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯನ್ನು ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಲಖನೌ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಮಾರ್ಚ್ 24 ರಂದು ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ ಅವರಿಗೆ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಅಲೋಕ್ ವರ್ಮಾ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.

ಸೇನಾ ಕರ್ನಲ್ ಹುದ್ದೆಗೆ ಸಮನಾದ ಹುದ್ದೆ ಹೊಂದಿದ್ದ ಬಾರ್ಡರ್‌ ರೋಡ್‌ ಆರ್ಗನೈಸೇಷನ್‌ ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಎಂಬುವರ ಪರವಾಗಿ ವಕೀಲ ವಿವೇಕ್ ತಿವಾರಿ ಅವರು ದೂರು ದಾಖಲಿಸಿದ್ದಾರೆ.

ಭಾರತ- ಚೀನಾ ಸೇನೆಗಳ ನಡುವಿನ ಘರ್ಷಣೆಯ ಕುರಿತು ಡಿಸೆಂಬರ್ 16, 2022 ರಂದು ರಾಹುಲ್‌ ಡಿಸೆಂಬರ್ 9, 2022ರಂದು ನೀಡಿದ ಹೇಳಿಕೆಗಳು ಭಾರತೀಯ ಸೇನೆಯನ್ನು ಅವಹೇಳನ ಮಾಡುವಂತಿದ್ದು, ಮಾನಹಾನಿಕರವಾಗಿವೆ ಎಂದು ತಿವಾರಿ ಆರೋಪಿಸಿದ್ದಾರೆ.

"ಅರುಣಾಚಲ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತೀಯ ಸೇನಾ ಸಿಬ್ಬಂದಿಯನ್ನು ಥಳಿಸುತ್ತಿದ್ದಾರೆ" ಎಂಬ ರಾಹುಲ್‌ ಅವರ ಹೇಳಿಕೆಯು ವ್ಯಾಪಕ ಚರ್ಚೆ ಮತ್ತು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾ ನಡೆಸಿದ್ದ ಕೃತ್ಯಗಳನ್ನು ಮುಂದೆ ಮಾಡಿ ಕೇಂದ್ರ ಸರ್ಕಾರವನ್ನು ರಾಹುಲ್‌ ಟೀಕಿಸಿದ್ದರು.

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮಾಜಿ ಅಧ್ಯಕ್ಷ ಅಮಿತ್ ಶಾ ಅವರನ್ನು ಕೊಲೆ ಆರೋಪಿ ಎಂದು ಕರೆದಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಜನವರಿಯಲ್ಲಿ ಸುಪ್ರೀಂ ಕೋರ್ಟ್ ತಡೆಹಿಡಿದಿದ್ದನ್ನು ಇಲ್ಲಿ ನೆನೆಯಬಹುದು.

ಜಾರ್ಖಂಡ್‌ನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಮಾರ್ಚ್ 18, 2018ರಂದು ಬಿಜೆಪಿಯನ್ನು ಟೀಕಿಸುವ ಭಾಷಣವನ್ನು ಗಾಂಧಿ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡನ ನವೀನ್‌ ಝಾ ದೂರು ದಾಖಲಿಸಿದ್ದರು. ಭಾಷಣದ ವೇಳೆ ಅಂದಿನ ಗೃಹ ಸಚಿವ ಅಮಿತ್‌ ಶಾ ಅವರು ಕೊಲೆ ಆರೋಪಿ ರಾಹುಲ್‌ ಹೇಳಿದ್ದರು ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿತ್ತು