ಆನ್‌ಲೈನ್ ಗೇಮ್ ಆದ 'ಲುಡೊ' ಒಂದು ಅವಕಾಶದ ಆಟವೇ ವಿನಾ ಅದು ಕೌಶಲಕ್ಕೆ ಸಂಬಂಧಿಸಿದ ಆಟವಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಗೆ ಪ್ರತಿಕ್ರಿಯಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
“ಲುಡೊ ಸುಪ್ರೀಂ ಅಪ್ಲಿಕೇಶನ್” ಜೂಜಾಟಕ್ಕೆ ಆಸ್ಪದ ನೀಡುತ್ತಿರುವ ಹಿನ್ನೆಲೆಯಲ್ಲಿ ಇದರ ಒಡೆತನದ ಸಂಸ್ಥೆ ಕ್ಯಾಷ್‌ಗ್ರೈಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ದೂರು ದಾಖಲಿಸುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಹಿರಿಯ ಪದಾಧಿಕಾರಿ ಕೇಶವ್ ರಮೇಶ್ ಮುಲೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಅಭಯ್ ಅಹುಜಾ ಅವರಿದ್ದ ವಿಭಾಗೀಯ ಪೀಠವು ಜೂನ್ 22ರೊಳಗೆ ನೋಟಿಸ್‌ಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ಹಣಕ್ಕಾಗಿ ಈ ಗೇಮ್ ಆಡಿದರೆ ಅದಕ್ಕೆ ಮಹಾರಾಷ್ಟ್ರ ಜೂಜಾಟ ನಿಯಂತ್ರಣ ಕಾಯಿದೆ (ಎಂಪಿಜಿಎ) ಅನ್ವಯಿಸುತ್ತದೆ. ಮೂರು ವರ್ಷದ ಮಗು ಆಟದಲ್ಲಿ ವಿಜೇತನಾಗುವುದನ್ನು ಅಲ್ಲಗಳೆಯಲಾಗದು ಎಂದಿರುವ ಅರ್ಜಿದಾರರು, ಹೀಗಾಗಿ ಲುಡೊ ಕೇವಲ ಕೌಶಲಕ್ಕೆ ಸಂಬಂಧಿಸಿದ ಆಟ ಎಂದು ಪರಿಗಣಿಸಲಾಗದು. ಅದು ಒಂದು ಅವಕಾಶದ ಆಟವೂ ಹೌದು ಎಂದಿದ್ದಾರೆ.
ಕ್ಯಾಷ್‌ಗ್ರೈಲ್ ಸಂಸ್ಥೆಯ ವಿರುದ್ಧ ಗಿರಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಲೆ ಮುಂದಾಗಿದ್ದರು. ಆದರೆ, ಪೊಲೀಸರು ಅದಕ್ಕೆ ಒಪ್ಪದ ಹಿನ್ನಲೆಯಲ್ಲಿ ಅರ್ಜಿದಾರರು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 156(3)ರ ಅಡಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಎದುರು ದಾವೆ ಹೂಡಿ, ತನಿಖೆಗೆ ಆದೇಶಿಸುವಂತೆ ಕೋರಿದ್ದರು.
“ಲುಡೊ ಆಟವು ಕೌಶಲಕ್ಕೆ ಸಂಬಂಧಿಸಿದ್ದು, ಅದು ಅವಕಾಶದ ಆಟವಲ್ಲ” ಹೀಗಾಗಿ ಇಲ್ಲಿ ಎಂಪಿಜಿ ಕಾಯಿದೆ ಅನ್ವಯಿಸುವುದಿಲ್ಲ ಎಂದು ಎಸಿಎಂಎಂ ಮುಲೆ ಅವರ ಮನವಿಯನ್ನು ವಜಾಗೊಳಿಸಿದ್ದರು. ಬಳಿಕ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.