K Madalu Virupakshappa and Prashant Madal 
ಸುದ್ದಿಗಳು

ಮಾಡಾಳ್‌ ಲಂಚ ಪ್ರಕರಣ: ಕರ್ನಾಟಕ ಅರೋಮಾಸ್‌ ಕಂಪೆನಿಯ ಪಾಲುದಾರರು, ವ್ಯವಸ್ಥಾಪಕರಿಗೆ ನಿರೀಕ್ಷಣಾ ಜಾಮೀನು ಮಂಜೂರು

ಆರೋಪಿಗಳು ಐದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಒಂದು ಭದ್ರತೆ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

Bar & Bench

ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ಗೆ ಲಂಚ ನೀಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಕರ್ನಾಟಕ ಅರೋಮಾಸ್‌ ಕಂಪೆನಿಯ ಪಾಲುದಾರರಾದ‌ ಕೈಲಾಶ್‌ ಎಸ್‌. ರಾಜ್‌, ವಿನಯ್‌ ಎಸ್‌. ರಾಜ್‌ ಮತ್ತು ಚೇತನ್‌ ಮರೈಚಾ ಹಾಗೂ ಕಂಪೆನಿಯ ವ್ಯವಸ್ಥಾಪಕ ದೀಪಕ್‌ ಡಿ. ಜಾಧವ್ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕೈಲಾಶ್‌ ಎಸ್‌. ರಾಜ್‌, ವಿನಯ್‌ ಎಸ್‌. ರಾಜ್‌ ಮತ್ತು ಚೇತನ್‌ ಮರೈಚಾ ಹಾಗೂ ಕಂಪೆನಿಯ ವ್ಯವಸ್ಥಾಪಕ ದೀಪಕ್‌ ಡಿ. ಜಾಧವ್ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ ಭಟ್‌ ಅವರು ಮಾನ್ಯ ಮಾಡಿದ್ದಾರೆ.

ಆರೋಪಿಗಳು ಐದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಒಂದು ಭದ್ರತೆ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಅವರು 45 ಲಕ್ಷ ರೂಪಾಯಿ ಲಂಚ ಪಡೆಯುವಾಗ ನಡೆದ ಟ್ರ್ಯಾಪ್‌ ವೇಳೆ ಕರ್ನಾಟಕ ಅರೋಮಾಸ್‌ ಕಂಪೆನಿಯ ಇಬ್ಬರು ಉದ್ಯೋಗಿಗಳು ಇದ್ದರು. ಇವರನ್ನು ಈಗಾಗಲೇ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲಂಚದ ಹಣವು ಕರ್ನಾಟಕ ಆರೋಮಾಸ್‌ ಕಂಪೆನಿಗೆ ಸೇರಿದ್ದು, ಅದನ್ನು ಬಂಧಿತ ತಮ್ಮ ಸಂಸ್ಥೆಯ ಇಬ್ಬರು ಉದ್ಯೋಗಿಗಳ ಮೂಲಕ ದೀಪಕ್‌ ಜಾಧವ್‌ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜಾಧವ್‌ ಅವರನ್ನು ನಾಲ್ಕನೇ ಆರೋಪಿಯನ್ನಾಗಿಸಲಾಗಿದೆ.

ಅಲ್ಲದೇ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಯಿಂದ ಟೆಂಡರ್‌ ಪಡೆದು ಮತ್ತು ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಆರೋಪಿಗಳು ಕ್ರಿಮಿನಲ್‌ ಪಿತೂರಿ ನಡೆಸಿದ್ದಾರೆ ಎಂಬ ಆರೋಪವು ಕರ್ನಾಟಕ ಅರೋಮಾಸ್‌ ಕಂಪೆನಿಯ ಪಾಲುದಾರರ ಮೇಲಿದೆ.