BJP MLA Madal Virupakshappa and Karnataka HC
BJP MLA Madal Virupakshappa and Karnataka HC 
ಸುದ್ದಿಗಳು

ಮಾಡಾಳ್‌ ಪ್ರಕರಣ: ಸಿನಿಮಾ ಮಾದರಿಯಲ್ಲಿ ವಿಚಾರಣೆ ನಡೆಸುತ್ತೀರಾ ಎಂದು ಲೋಕಾಯುಕ್ತಕ್ಕೆ ಪ್ರಶ್ನಿಸಿದ ಹೈಕೋರ್ಟ್

Bar & Bench

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ (ಕೆಎಸ್‌ಡಿಎಲ್) ಕಚ್ಚಾ ತೈಲ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶಾಸಕ ಕೆ ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶ ಕಾಯ್ದಿರಿಸಿದೆ.

ಲೋಕಾಯುಕ್ತ ಪೊಲೀಸರಿಂದ ಬಂಧನ ಭೀತಿಯ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಅರ್ಜಿದಾರರು ಹಾಗೂ ಲೋಕಾಯುಕ್ತ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ಪೀಠವು ಆದೇಶ ಕಾಯ್ದಿರಿಸಿತು.

ಇದಕ್ಕೂ ಮುನ್ನ, ನಿರೀಕ್ಷಣಾ ಜಾಮೀನು ಅರ್ಜಿಗೆ ಲೋಕಾಯುಕ್ತ ಪೊಲೀಸರ ಪರ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು ಆಕ್ಷೇಪಣೆ ಸಲ್ಲಿಸಿ, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ತನಿಖೆಗೆ ಅನುಕೂಲವಾಗುತ್ತದೆ. ಆದ್ದರಿಂದ, ಅವರಿಗೆ ಜಾಮೀನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ವಿರೂಪಾಕ್ಷಪ್ಪ ಪರ ವಕೀಲರು, ಅರ್ಜಿದಾರರು ಪ್ರತಿದಿನವೂ ಲೋಕಾಯುಕ್ತ ಪೊಲೀಸರ ತನಿಖೆಗೆ ಹಾಜರಾಗಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ತನಿಖೆಯೇ ಮುಕ್ತಾಯದ ಹಂತದಲ್ಲಿರುವಾಗ ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆದ್ದರಿಂದ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು ಇಂದಿನ ದಿನಗಳಲ್ಲಿ ಲಂಚವನ್ನು ನೇರವಾಗಿ ಪಡೆಯುವುದಿಲ್ಲ. ಬೇರೊಬ್ಬರ ಮೂಲಕ ಹಣ ಸ್ವೀಕರಿಸುತ್ತಾರೆ. ಇಲ್ಲೂ ಸಹ ಅದೇ ರೀತಿಯಾಗಿದ್ದು, ಪುತ್ರನ ಮೂಲಕ ಲಂಚವನ್ನು ಪಡೆದಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.

ತಂದೆ ಹಾಗೂ ಮಗ ಒಂದೇ ಮನೆಯಲ್ಲಿ ವಾಸವಾಗಿದ್ದರೇ ಎಂಬ ಪೀಠದ ಪ್ರಶ್ನೆಗೆ ಉತ್ತರಿಸಿದ ಹಾರನಹಳ್ಳಿ ಅವರು ಬೆಂಗಳೂರಿನಲ್ಲಿ ಇರುವಾಗ ವಿರೂಪಾಕ್ಷಪ್ಪ ಮಗನ ಮನೆಯಲ್ಲಿ ಇರುತ್ತಿದ್ದರು. ವಿರೂಪಾಕ್ಷಪ್ಪ ಬಳಸುತ್ತಿದ್ದ ಬೆಡ್ ರೂಮ್‌ನಿಂದಲೂ ಹತ್ತು ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಆ ಬೆಡ್ ರೂಮ್ ಅನ್ನು ಮಾವ ಬಳಸುತ್ತಿದ್ದಾರೆ ಎಂದು ಅರ್ಜಿದಾರರ ಸೊಸೆಯ ಹೇಳಿಕೆ ಇದೆ. ಜೊತೆಗೆ, ವಿರೂಪಾಕ್ಷಪ್ಪ ಅವರ ಸೂಚನೆ ಮೇರೆಗೇ ದೂರುದಾರರು ಅವರ ಪುತ್ರನನ್ನು ಭೇಟಿಯಾಗಿದ್ದರು. ಅಲ್ಲಿ ಬಿಲ್ ಪಾವತಿಗೆ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. ಈ ಸಂಭಾಷಣೆಯನ್ನು ದೂರುದಾರರು ರೆಕಾರ್ಡ್ ಸಹ ಮಾಡಿಕೊಂಡಿದ್ದಾರೆ ಎಂದರು.

ಬಂಧಿಸುವ ಅಗತ್ಯವಿದೆಯೇ?

ಕೆಎಸ್‌ಡಿಎಲ್ ಅಧ್ಯಕ್ಷರೇ ಲಂಚಕ್ಕೆ ಬೇಡಿಕೆ ಇಟ್ಟಿದ್ದರೇ? ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಹಾಗೂ ಪಡೆದಿದ್ದಕ್ಕೆ ಸಾಕ್ಷ್ಯವಿದೆಯೇ? ಪ್ರಕರಣದಲ್ಲಿ ಅರ್ಜಿದಾರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಅಗತ್ಯವೇನಿದೆ? ಸಿನಿಮಾ ಮಾದರಿಯಲ್ಲಿ ಕುರ್ಚಿಗೆ ಕೈ ಕಟ್ಟಿ ವಿಚಾರಣೆಗೆ ಒಳಪಡಿಸುತ್ತೀರಾ? ಇದಾಗಲೇ ಪ್ರತಿ ದಿನ ವಿಚಾರಣೆಗೆ ಹಾಜರಾಗಿ, ತನಿಖೆಗೊಳಗಾಗಿದ್ದಾರೆ. ಹೀಗಿರುವಾಗ ಬಂಧಿಸಿ, ವಿಚಾರಣೆಗೆ ಒಳಪಡಿಸುವ ಅಗತ್ಯವೇನಿದೆ? ಎಂದು ಪೀಠ ಪ್ರಶ್ನಿಸಿತು.

ಆಗ ಹಾರನಹಳ್ಳಿ ಅವರು ಈ ಮಾನದಂಡ ಅನುಸರಿಸಿದರೆ ಎಲ್ಲ ಪ್ರಕರಣಗಳಲ್ಲೂ ನಿರೀಕ್ಷಣಾ ಜಾಮೀನು ನೀಡಬೇಕಾಗುತ್ತದೆ. ಬಂಧಿಸಿ ವಿಚಾರಣೆಗೊಳಪಡಿಸಿದಾಗ ತನಿಖಾಧಿಕಾರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿ ವಿರೂಪಾಕ್ಷಪ್ಪ ವಿರುದ್ಧ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಸ್ವಯಂಪ್ರೇರಿತ ಹೇಳಿಕೆ ದಾಖಲಿಸಿದ್ದಾರೆ. ಎರಡನೇ ಆರೋಪಿಯಾಗಿರುವ ಪ್ರಶಾಂತ್ ಅವರು ಕೆಎಸ್‌ಡಿಎಲ್ ಎಂಡಿಯೊಂದಿಗೆ ಟೆಂಡರ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ವಿರೂಪಾಕ್ಷಪ್ಪ ಅವರ ಹೆಸರೂ ಪ್ರಸ್ತಾಪವಾಗಿದೆ. ವಿರೂಪಾಕ್ಷಪ್ಪ ಪ್ರತಿದಿನ ನೋಟ್ಸ್ ಬರೆದುಕೊಂಡು ಬಂದು ಪೊಲೀಸರ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ, ಅವರನ್ನು ಬಂಧಿಸಿ ವಿಚಾರಣೆ ನಡೆಸಿದರೆ ತನಿಖೆಗೆ ಅನುಕೂಲವಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.