Karnataka High Court 
ಸುದ್ದಿಗಳು

ರಾಜ್ಯ ವಕೀಲರ ಗುಮಾಸ್ತರ ಸಂಘಕ್ಕೆ ಆಡಳಿತಾಧಿಕಾರಿಯಾಗಿ ಮಾಧವ ರೆಡ್ಡಿ ನೇಮಕ

ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠವು ಚಿಕ್ಕಣ್ಣ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಆದೇಶಿಸಿತ್ತು.

Bar & Bench

ಕರ್ನಾಟಕ ಹೈಕೋರ್ಟ್‌ ಆದೇಶದ ಅನುಸಾರ ಕರ್ನಾಟಕ ರಾಜ್ಯ ಮಟ್ಟದ ವಕೀಲರ ಗುಮಾಸ್ತರ ಸಂಘಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಕೆ ವಿ ಮಾಧವ ರೆಡ್ಡಿ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಆಡಳಿತಾಧಿಕಾರಿಯು ಕೂಡಲೇ ಸಂಘದ ಪ್ರಭಾರ (ಹೆಚ್ಚುವರಿ ಜವಾಬ್ದಾರಿ) ವಹಿಸಿಕೊಂಡು ಹೈಕೋರ್ಟ್‌ ನೀಡಿರುವ ನಿರ್ದೇಶನಗಳ ಅನುಸಾರ ಕ್ರಮ ಕೈಗೊಳ್ಳಬೇಕು. ಸಂಘದಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ಅಕ್ಟೋಬರ್ 1ರಂದು ಆದೇಶಿಸಿದ್ದಾರೆ.

ಸಂಘದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದಡಿ ಸಂಘದ ಸದಸ್ಯತ್ವದಿಂದ ಎಚ್‌ ಬಿ ಚಿಕ್ಕಣ್ಣ ಅವರನ್ನು ಅಮಾನತು ಮಾಡಲಾಗಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಚಿಕ್ಕಣ್ಣ, ಕರ್ನಾಟಕ ರಾಜ್ಯಮಟ್ಟದ ವಕೀಲರ ಕ್ಲರ್ಕ್‌ ಅಸೋಸಿಯೇಷನ್’ಗೆ (ಕೆಎಸ್‌ಎಲ್‌ಎಸಿಎ) 2013ರಿಂದ ಚುನಾವಣೆ ನಡೆದಿಲ್ಲ. ವಾರ್ಷಿಕವಾಗಿ ಸಾಮಾನ್ಯ ಸಭೆ ನಡೆಸುವುದಾಗಲೀ, ಸದಸ್ಯರಿಗೆ ಹೊಸ ಗುರುತಿನ ಚೀಟಿ ನೀಡುವುದಾಗಲೀ, ಲೆಕ್ಕಪತ್ರ ನಿಗಾ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದನ್ನಾಗಲೀ ಮಾಡದೆ ಬೈ–ಲಾ ಉಲ್ಲಂಘನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸಲ್ಲಿಸಲಾದ ಯಾವುದೇ ಮನವಿಗಳನ್ನು ಸಂಘವು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠವು ಚಿಕ್ಕಣ್ಣ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಆದೇಶಿಸಿತ್ತು.

ಆಡಳಿತಾಧಿಕಾರಿ ನೇಮಕ ಮಾಡಿದ 60 ದಿನಗಳ ಒಳಗಾಗಿ ಸದಸ್ಯರನ್ನು ನೋಂದಾಯಿಸಿಕೊಳ್ಳಬೇಕು. ಕರ್ನಾಟಕ ರಾಜ್ಯದಾದ್ಯಂತ ಎಲ್ಲಾ ಗುಮಾಸ್ತರನ್ನು ನೋಂದಾಯಿಸಿದ ನಂತರ ಸಂಘದ ಸಾಮಾನ್ಯ ಸಭೆ ಕರೆಯಬೇಕು. ಆಡಳಿತ ಮಂಡಳಿಯ ರಚನೆಗೆ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ವಿವರಿಸಲಾಗಿತ್ತು.

ವಕೀಲರ ಕಚೇರಿಗಳಲ್ಲಿ ದುಡಿಯುವ ಗುಮಾಸ್ತರನ್ನು ಸಂಘಟಿಸುವ ಮತ್ತು ಅವರ ಕುಟುಂಬಗಳ ಕಲ್ಯಾಣದ ಉದ್ದೇಶಗಳನ್ನು ಹೊಂದಿದ, ‘ಕರ್ನಾಟಕ ರಾಜ್ಯ ಮಟ್ಟದ ವಕೀಲರ ಗುಮಾಸ್ತರ ಸಂಘ’ವು ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ–1960ರ ಅಡಿ ನೋಂದಾವಣೆಗೊಂಡು 1999ರಿಂದ ಅಸ್ತಿತ್ವಕ್ಕೆ ಬಂದಿದೆ.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಿ.ಕೆ.ಗೋವಿಂದ ಭಟ್‌ ಅವರ ಕನಸಿನ ಕೂಸಾದ ಈ ಸಂಘವು ಸದ್ಯ ರಾಜ್ಯದಾದ್ಯಂತ ಒಟ್ಟು 400ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಇದರ ಕೇಂದ್ರ ಕಚೇರಿ ಹೈಕೋರ್ಟ್ ಕಟ್ಟಡದಲ್ಲಿದೆ.

‘ಸಂಘಕ್ಕೆ 2013ರ ನಂತರ ಈತನಕ ಚುನಾವಣೆ ನಡೆಸಿಲ್ಲ. 2019ರ ನಂತರ ಹೊಸ ಸದಸ್ಯರ ನೋಂದಣಿಯೂ ಆಗಿಲ್ಲ. ನೋಂದಣಿ ಆಗದೆ ಇರುವ 200ಕ್ಕೂ ಹೆಚ್ಚು ಗುಮಾಸ್ತರು ಸದ್ಯ ಕಾರ್ಯ ನಿರ್ವಹಿಸುತ್ತಿದ್ದು ಇವರಿಗೆಲ್ಲಾ ಗುರುತಿನ ಚೀಟಿ ವಿತರಣೆ ಮಾಡಿಲ್ಲ. ‘ಆಡಳಿತ ಮಂಡಳಿ ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಆರೋಪಿಸಿ ಚಿಕ್ಕಣ್ಣ ಸೇರಿದಂತೆ ಹಲವರು ಸಹಕಾರ ಸಂಘಗಳ ಇಲಾಖೆ ಮತ್ತು ಸೊಸೈಟಿಗಳ ನೋಂದಣಿಯ ಜಿಲ್ಲಾ ರಿಜಿಸ್ಟ್ರಾರ್ ಅವರಿಗೆ 2024 ಮತ್ತು 2025ರಲ್ಲಿ ದೂರು ನೀಡಿದ್ದರು.