ಮಧ್ಯಪ್ರದೇಶ ಹೈಕೋರ್ಟ್, ಜಬಲ್ಪುರ ಪೀಠ
ಮಧ್ಯಪ್ರದೇಶ ಹೈಕೋರ್ಟ್, ಜಬಲ್ಪುರ ಪೀಠ 
ಸುದ್ದಿಗಳು

ಮೂರು ದಶಕಗಳ ಹಿಂದೆ ಅಪಘಾತದಲ್ಲಿ ಪೋಷಕರ ಕಳೆದುಕೊಂಡ ವ್ಯಕ್ತಿಗೆ ಅನುಕಂಪ ಆಧಾರಿತ ನೇಮಕಾತಿ: ಮ.ಪ್ರದೇಶ ಹೈಕೋರ್ಟ್ ಆದೇಶ

Bar & Bench

ಮೂವತ್ತು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಹೆತ್ತವರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರಿಗೆ ಅನುಕಂಪ ಆಧಾರಿತ ಉದ್ಯೋಗ ನೀಡುವಂತೆ ಮಧ್ಯಪ್ರದೇಶ ಹೈಕೋರ್ಟ್ ಈಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ರೋಹಿತ್‌ ಶುಕ್ಲಾ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ರೋಹಿತ್ ಶುಕ್ಲಾ (38 ವರ್ಷ) ಅವರ ತಂದೆ ಮತ್ತು ತಾಯಿ ರಸ್ತೆ ಅಪಘಾತದಲ್ಲಿ ಮೃತಪಟ್ಟಾಗ ಅವರಿಗೆ ಒಂಬತ್ತು ವರ್ಷ. 2003ರಲ್ಲಿ ಹದಿನೆಂಟು ವರ್ಷ ತುಂಬಿದ ಬಳಿಕ ಶುಕ್ಲಾ ಅವರು ತಮ್ಮ ತಂದೆ ನೌಕರಿಯಲ್ಲಿದ್ದ ಜಲಸಂಪನ್ಮೂಲ ಇಲಾಖೆಯಲ್ಲಿ ಅನುಕಂಪಾಧಾರಿತ ನೇಮಕಾತಿ ಕೋರಿದರು.

ಆದರೆ ಸರ್ಕಾರ ಅವರಿಗೆ ನೇಮಕಾತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಶುಕ್ಲಾ ಪರಿಹಾರಕ್ಕಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಶುಕ್ಲಾ ಅವರು ತಮ್ಮ ತಂದೆಯ ಮರಣವನ್ನಪ್ಪಿದ ಏಳು ವರ್ಷಗಳ ಒಳಗೆ ಅನುಕಂಪಾಧಾರಿತ ನೇಮಕಾತಿ ಕೋರಬೇಕಿತ್ತು ಎಂಬ ಸರ್ಕಾರದ ವಾದವನ್ನು ನ್ಯಾಯಮೂರ್ತಿ ವಿನಯ್ ಸರಾಫ್ ತಿರಸ್ಕರಿಸಿದರು.

ಅವಲಂಬಿತ ಅಪ್ರಾಪ್ತರು ಪ್ರೌಢರಾದ ಒಂದು ವರ್ಷದೊಳಗೆ ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿ 2004 ರಲ್ಲಿ ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ಹೊರಡಿಸಿದ ಸುತ್ತೋಲೆಯನ್ನು ಪರಿಗಣಿಸಿದ ನ್ಯಾಯಾಲಯ ಸರ್ಕಾರದ ವಾದ ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದಿತು.

ಜೂನ್ 6, 2003 ರಂದು ಪ್ರೌಢ ವಯಸ್ಸಿಗೆ ಬಂದ ಶುಕ್ಲಾ ಅದೇ ವರ್ಷ ಜೂನ್ 24 ರಂದು ಅನುಕಂಪಾಧಾರಿತ ನೇಮಕಾತಿಗೆ ಅರ್ಜಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಶುಕ್ಲಾ ಅವರು ಯಾವುದೇ ವಿಳಂಬ ಉಂಟುಮಾಡಿಲ್ಲ. ಈ ಆಧಾರದಲ್ಲಿ ಅವರಿಗೆ ಅನುಕಂಪಾಧಾರಿತ ನೇಮಕಾತಿ ನಿರಾಕರಿಸಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅಸಿಸ್ಟೆಂಟ್ ಗ್ರೇಡ್ 2 ಅಥವಾ 3 ಹುದ್ದೆಗಳು ಖಾಲಿ ಇಲ್ಲದ ಕಾರಣ ಸರ್ಕಾರ ಈ ಹಿಂದೆ ಶುಕ್ಲಾ ಅವರಿಗೆ ಸಂವಿಧಾ ಶಾಲಾ ಶಿಕ್ಷಕ್ (ಗುತ್ತಿಗೆ ಆಧಾರಿತ ಶಿಕ್ಷಕ) ಹುದ್ದೆಯನ್ನು ನೀಡಲು ಮುಂದಾಗಿತ್ತು. ಆದರೆ, ಈ ಪ್ರಸ್ತಾವನೆ ತಿರಸ್ಕರಿಸಿದ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಗುತ್ತಿಗೆ ಆಧಾರಿತ ಹುದ್ದೆಯನ್ನು ಸ್ವೀಕರಿಸದ ಕಾರಣ ಅರ್ಜಿದಾರರ ಅನುಕಂಪದ ನೇಮಕಾತಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸರ್ಕಾರ ಮಂಡಿಸಿದ ವಾದವನ್ನು ಹೈಕೋರ್ಟ್‌ ತಿರಸ್ಕರಿಸಿತು.

"ಅರ್ಜಿದಾರರು ನಿಯಮಿತ ಖಾಲಿ ಹುದ್ದೆಯಲ್ಲಿ ಅನುಕಂಪದ ನೇಮಕಾತಿಗೆ ಅರ್ಹರಾಗಿದ್ದು ಅವರಿಗೆ ಗುತ್ತಿಗೆ ನೌಕರಿ ನೀಡಲು ಸಾಧ್ಯವಿಲ್ಲ." ಎಂದು ಪೀಠ ತಿಳಿಸಿತು.

ಶುಕ್ಲಾ ಇಷ್ಟು ದೀರ್ಘಕಾಲ ಬೇರೆಡೆ ಕೆಲಸ ಮಾಡಿರುವುದರಿಂದ, ಅವರಿಗೆ ಆರ್ಥಿಕ ಸಹಾಯದ ಅಗತ್ಯವಿಲ್ಲ ಅಥವಾ ಅನುಕಂಪದ ನೇಮಕಾತಿಗೆ ಅವರು ಅರ್ಹರಲ್ಲ ಎಂಬ ಸರ್ಕಾರದ ವಾದವನ್ನು ಕೂಡ ನ್ಯಾಯಾಲಯ ತಿರಸ್ಕರಿಸಿತು. 

"ಪ್ರಸ್ತುತ ಪ್ರಕರಣದಲ್ಲಿ ಪ್ರತಿವಾದಿಗಳು ಅರ್ಜಿದಾರರು ಮತ್ತೊಂದು ಉದ್ಯೋಗದಲ್ಲಿ ತೊಡಗಿದ್ದಾರೆ ಅಥವಾ ಉತ್ತಮವಾಗಿ ಸಂಪಾದಿಸುತ್ತಿದ್ದಾರೆ ಎಂಬ ನಿರ್ದಿಷ್ಟ ಮನವಿ ಸಲ್ಲಿಸಿಲ್ಲ/ ಇದಕ್ಕೆ ವಿರುದ್ಧವಾಗಿ ಅರ್ಜಿದಾರರು ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಿದಾಗ, ಅವರಿಗೆ ಕೇವಲ 18 ವರ್ಷ ವಯಸ್ಸಾಗಿದ್ದು ಸಂಪಾದನೆ ಗಳಿಸುತ್ತಿರಲಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಶುಕ್ಲಾ ಅವರ ಅರ್ಜಿ ದೀರ್ಘಕಾಲದಿಂದ ಬಾಕಿ ಉಳಿದಿದೆ ಎಂಬ ಕಾರಣಕ್ಕೆ ಅವರು ತೊಂದರೆ ಅನುಭವಿಸುವಂತಾಗಬಾರದು, ಏಕೆಂದರೆ ಅಂತಹ ವಿಳಂಬಕ್ಕೆ ಅವರನ್ನು ದೂಷಿಸಲಾಗದು ಎಂದು ಅದು ಹೇಳಿದೆ. 

ಅದರಂತೆ, ಶುಕ್ಲಾ ಅವರಿಗೆ ಮೂರು ತಿಂಗಳ ಒಳಗಾಗಿ ಅವರ ಅರ್ಹತೆಗೆ ತಕ್ಕಂತೆ ಅನುಕಂಪ ಆಧಾರಿತ ನೌಕರಿ ನೀಡಲು ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Rohit Shukla v. The State of Madhya Pradesh.pdf
Preview