Blenders Pride, London Pride and Imperial Blue
Blenders Pride, London Pride and Imperial Blue 
ಸುದ್ದಿಗಳು

ಸ್ಕಾಚ್ ವಿಸ್ಕಿ ಗ್ರಾಹಕರು ವಿದ್ಯಾವಂತರು, ಎರಡು ಬ್ರಾಂಡ್‌ಗಳ ವ್ಯತ್ಯಾಸ ಗುರುತಿಸಬಲ್ಲರು: ಮಧ್ಯಪ್ರದೇಶ ಹೈಕೋರ್ಟ್

Bar & Bench

ಸ್ಕಾಚ್ ವಿಸ್ಕಿಯ ಗ್ರಾಹಕರು ಸಮಾಜದ ಅನುಕೂಲಸ್ಥ ವರ್ಗಕ್ಕೆ ಸೇರಿದ ವಿದ್ಯಾವಂತ ವ್ಯಕ್ತಿಗಳಾಗಿದ್ದು  ಎರಡು ಬೇರೆ ಬ್ರಾಂಡ್ ಬಾಟಲಿಗಳ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಲ್ಲರು ಎಂದು ಮಧ್ಯಪ್ರದೇಶ ಹೈಕೋರ್ಟ್ ಈಚೆಗೆ ಹೇಳಿದೆ [ಪರ್ನೋಡ್ ರಿಕಾರ್ಡ್ ಇಂಡಿಯಾ ಮತ್ತು ಕರಣ್‌ವೀರ್‌ ಸಿಂಗ್‌ ಛಬಾರಾ ನಡುವಣ ಪ್ರಕರಣ].

ಇಂದೋರ್ ಮೂಲದ ಕಂಪನಿಯಾದ ಜೆ ಕೆ ಎಂಟರ್‌ಪ್ರೈಸಸ್  'ಲಂಡನ್ ಪ್ರೈಡ್' ಚಿಹ್ನೆಯಡಿ ಪಾನೀಯ ತಯಾರಿಸದಂತೆ ತಡೆ ನೀಡಬೇಕೆಂದು ಕೋರಿ ಪೆರ್ನಾಡ್ ರಿಕಾರ್ಡ್ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ನ್ಯಾಯಾಲಯ  ಈ ವಿಚಾರ ತಿಳಿಸಿತು.

ಜೆ ಕೆ ಎಂಟರ್‌ಪ್ರೈಸಸ್  ತನ್ನ 'ಬ್ಲೆಂಡರ್ಸ್ ಪ್ರೈಡ್' ವಾಣಿಜ್ಯ ಚಿಹ್ನೆ ಮತ್ತು 'ಇಂಪೀರಿಯಲ್ ಬ್ಲೂ' ವಾಣಿಜ್ಯ ಪೋಷಾಕನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದ ಪೆರ್ನೋಡ್ ರಿಕಾರ್ಡ್ ತಾತ್ಕಾಲಿಕ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಜೆ ಕೆ ಎಂಟರ್‌ಪ್ರೈಸಸ್ ಗ್ರಾಹಕರನ್ನು ವಂಚಿಸಲು 'ಲಂಡನ್ ಪ್ರೈಡ್' ಚಿಹ್ನೆ ಬಳಸುತ್ತಿದೆ ಎಂದು ಪೆರ್ನೋಡ್ ರಿಕಾರ್ಡ್ ದೂರಿತ್ತು.

ಎರಡು ಬ್ರಾಂಡ್‌ಗಳು 'ಪ್ರೀಮಿಯಂ' ಅಥವಾ 'ಅಲ್ಟ್ರಾ ಪ್ರೀಮಿಯಂ' ವಿಸ್ಕಿಯನ್ನು ಒಳಗೊಂಡಿದ್ದು ಇವುಗಳ ಗ್ರಾಹಕರು ಶಿಕ್ಷಿತರು ಮತ್ತು ತಮ್ಮ ವಿವೇಚನೆ ಬಳಸುವವರು ಎಂದು ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಪ್ರಣಯ್ ವರ್ಮಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ತಾತ್ಕಾಲಿಕ ತಡೆಯಾಜ್ಞೆ ಕೋರಿ ಪೆರ್ನೋಡ್ ರಿಕಾರ್ಡ್ ಸಲ್ಲಿಸಿದ್ದ ಅರ್ಜಿಯನ್ನು ಇಂದೋರ್‌ನ ವಾಣಿಜ್ಯ ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು. ಬಾಟಲಿಗಳ ಆಕಾರ ಭಿನ್ನವಾಗಿದೆ. ಪ್ಯಾಕೇಜಿಂಗ್‌ಗಳ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ಎರಡೂ ಬ್ರಾಂಡ್‌ಗಳಲ್ಲಿ ʼಪ್ರೈಡ್‌ʼ ಎಂಬ ಪದ ಬಳಕೆಯಲ್ಲಿದ್ದರೂ ಅದು ನಾಮಪದವಾಗಿದ್ದು ಸಾಮಾನ್ಯವಾಗಿ ಬಳಕೆ ಮಾಡುವಂತಹ ಪದವಾಗಿದೆ. ಇಲ್ಲದಿದ್ದರೆ ಅದನ್ನು ಸಾಮಾನ್ಯ ಪದವಾಗಿ ನೋಂದಾಯಿಸಲು ಆಗುತ್ತಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಈ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ ಎಂದು  ತಿಳಿಸಿದ ಹೈಕೋರ್ಟ್‌, ಪೆರ್ನೋಡ್ ರಿಕಾರ್ಡ್ ಸಲ್ಲಿಸಿರುವ ಅರ್ಜಿಯನ್ನು ಒಂಬತ್ತು ತಿಂಗಳೊಳಗೆ ತೀರ್ಮಾನಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು.