ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಏಪ್ರಿಲ್ 28ರಂದು ಬಂಧಿತರಾಗಿದ್ದ ಕಾಲೇಜು ಉಪನ್ಯಾಸಕಿಯೊಬ್ಬರಿಗೆ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ . [ಡಾ. ನಶೀಮ್ ಬಾನೋ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ]
ವಾಟ್ಸಾಪ್ ಗ್ರೂಪ್‌ನಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಉಪನ್ಯಾಸಕಿ ಡಾ. ನಶೀಮ್ ಬಾನೋ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ವಾಟ್ಸಾಪ್‌ನಲ್ಲಿ ಫಾರ್ವರ್ಡ್ ಆದ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಆಕೆಯನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅವನೀಂದ್ರ ಕುಮಾರ್ ಸಿಂಗ್ ಹೇಳಿದರು.
" ಮೇಲ್ನೋಟಕ್ಕೆ ವಿದ್ಯಾವಂತ ವ್ಯಕ್ತಿಗಳು ಮತ್ತು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ ಹುದ್ದೆ ಹೊಂದಿರುವ ವ್ಯಕ್ತಿಗಳು ಮೊದಲಿನಿಂದಲೂ ವಾಟ್ಸಾಪ್ ಸಂದೇಶ ಫಾರ್ವರ್ಡ್ ಮಾಡುವಾಗ ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಬಹಳ ಸುರಕ್ಷಿತವಾಗಿ ಹೇಳಬಹುದಾದರೂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಸಂದೇಶ, ವೀಡಿಯೊ ಫಾರ್ವರ್ಡ್ ಮಾಡಿದ ಕಾರಣಕ್ಕಾಗಿಯಷ್ಟೇ, ವ್ಯಕ್ತಿಯನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿಡಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ವಿವರಿಸಿದೆ.
ದಿಂಡೋರಿಯ ಮಾದರಿ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ಬಾನೋ ಅವರ ವಿರುದ್ಧ ಏಪ್ರಿಲ್‌ನಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 196 ( ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೃತ್ಯ ಎಸಗುವುದು ) ಮತ್ತು 299 ( ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶಪೂರ್ವಕ ಕೃತ್ಯ ಎಸಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪಹಲ್ಗಾಮ್ ದಾಳಿಯ ಕೆಲ ದಿನಗಳ ನಂತರ, ʼಹಿಂದೂ ಪ್ರವಾಸಿಗರ ಹೆಸರು ಕೇಳಿ ಅವರ ಹತ್ಯೆ ನಡೆಸಿದ್ದು ಮತ್ತು ಮುಸ್ಲಿಮರನ್ನು 'ಜೈ ಶ್ರೀ ರಾಮ್' ಎಂದು ಜಪಿಸುವಂತೆ ಒತ್ತಾಯಿಸುವುದು ಭಯೋತ್ಪಾದನಾ ಕೃತ್ಯಗಳೆಂದು ವಿವರಿಸುವ ವಾಟ್ಸಾಪ್ ಸ್ಟೇಟಸ್ ಅನ್ನು ಬಾನೋ ಹಂಚಿಕೊಂಡಿದ್ದರು. ಜೊತೆಗೆ ಕಾಲೇಜು ವಾಟ್ಸಾಪ್ ಗ್ರೂಪ್‌ನಲ್ಲಿ 'ನಯಾ ರಾವಣ್' ಎಂಬ ಶೀರ್ಷಿಕೆಯ ವೀಡಿಯೊವನ್ನು ಸಹ ಫಾರ್ವರ್ಡ್ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಏಪ್ರಿಲ್ 30ರಂದು ವಿಚಾರಣಾ ನ್ಯಾಯಾಲಯ ಆಕೆಗೆ ಜಾಮೀನು ನಿರಾಕರಿಸಿತ್ತು. ಇದನ್ನು ಬಾನೋ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಪ್ರಕರಣದ ಸಂದರ್ಭ ಸನ್ನಿವೇಶ ಪರಿಗಣಿಸಿ, ಆರೋಪಿಗೆ ಜಾಮೀನು ನೀಡುವುದು ಸೂಕ್ತವೆಂದು ಹೈಕೋರ್ಟ್ ನುಡಿದಿದೆ.
[ಆದೇಶದ ಪ್ರತಿ]