Indore Bench of Madhya Pradesh High Court  
ಸುದ್ದಿಗಳು

ವಿಚ್ಛೇದನವಿಲ್ಲದೆ ಮರುಮದುವೆಯಾಗುವ ಮಹಿಳೆಯರ ಶೋಷಣೆ: ಮಧ್ಯಪ್ರದೇಶ ಹೈಕೋರ್ಟ್ ಬೇಸರ

Bar & Bench

ತನ್ನ ಮೊದಲ ಪತಿಗೆ ವಿಚ್ಛೇದನ ನೀಡದೆ ಎರಡನೇ ವಿವಾಹವಾದ ಮಹಿಳೆ ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ಜೀವನಾಂಶ ಪಡೆಯುವುದನ್ನು ತಡೆಯುವ ಕಾನೂನು ಲೋಪಗಳ ಕುರಿತು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದೆ.

ಸೆಕ್ಷನ್‌ಗೆ ಸಾಮಾಜಿಕ ನ್ಯಾಯದ ಉದ್ದೇಶ ಇದ್ದರೂ ಶೋಷಣೆಯನ್ನು ತಡೆಯಲು ಸಾಧ್ಯವಾಗದೇ ಇರುವುದರಿಂದ ಆ ಉದ್ದೇಶ ವಿಫಲವಾಗುತ್ತದೆ ಎಂದು ನ್ಯಾಯಮೂರ್ತಿ ಪ್ರೇಮ್ ನಾರಾಯಣ್ ಸಿಂಗ್ ತಿಳಿಸಿದ್ದಾರೆ.

ಅನೇಕ ಮಹಿಳೆಯರು, ವಿಶೇಷವಾಗಿ ಸಮಾಜದ ಬಡ ಸ್ತರಕ್ಕೆ ಸೇರಿದವರು ರೂಢಿಯಂತೆ ಶೋಷಣೆಗೆ ತುತ್ತಾಗಲಿದ್ದು ಕಾನೂನಿನ ಲೋಪದೋಷಗಳು ಅಪರಾಧಿ ಪಕ್ಷಕಾರರು ತಪ್ಪಿಸಿಕೊಳ್ಳಲು ಮತ್ತು ಪ್ರಶ್ನಾತೀತರಾಗಿ ನುಣುಚಿಕೊಳ್ಳಲು ಅನುವು ಮಾಡಿಕೊಡುವುದು ದುರದೃಷ್ಟಕರ ಸಂಗತಿ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಸುಮಾರು 6-7 ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆಗೆ ಮಾಸಿಕ ಜೀವನಾಂಶವಾಗಿ ₹ 10,000 ಪಾವತಿಸಲು ನಿರ್ದೇಶಿಸಿದ್ದ ಮರುಪರಿಶೀಲನಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸುವ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.  

ಮಹಿಳೆ ಈಗಾಗಲೇ ಮೊದಲನೇ ವಿವಾಹವಾಗಿದ್ದು ದಂಪತಿಗೆ ಮೂರು ಮಕ್ಕಳಿವೆ. ತನ್ನೊಂದಿಗೆ ಎರಡನೇ ವಿವಾಹವಾಗಿರುವ ಆಕೆ ಮೊದಲ ಪತಿಯಿಂದ ವಿಚ್ಛೇದನ ಪಡೆಯದೆ ಇರುವುದರಿಂದ ಆಕೆ ತನ್ನ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಅರ್ಜಿದಾರ ವಾದಿಸಿದ್ದರು.

ವಾದ ಆಲಿಸಿದ ನ್ಯಾಯಾಲಯ “ಇತ್ಯರ್ಥಗೊಂಡ ಕಾನೂನಿನ ಪ್ರಕಾರ, ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆಯದೆ  ಈಗಾಗಲೇ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳೆಯು ಎರಡನೇ ಪತಿಯನ್ನು ಕಾನೂನುಬದ್ಧವಾಗಿ ವಿವಾಹವಾದವಳು  ಎಂದು ಪರಿಗಣಿಸಲಾಗದು. ಅಂತೆಯೇ ಆಕೆ ತನ್ನ ಎರಡನೇ ಪತಿಯಿಂದ ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಸಿಆರ್‌ಪಿಸಿ ಸೆಕ್ಷನ್ 125ರ ಅಡಿಯಲ್ಲಿ 'ಹೆಂಡತಿ' ಎಂಬ ವ್ಯಾಖ್ಯಾನವನ್ನು ವಿಶಾಲವಾಗಿ ಅರ್ಥೈಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಆ ಪ್ರಕರಣಗಳಲ್ಲಿ ಮಹಿಳೆ ಈ ಮೊದಲು ಮತ್ತೊಬ್ಬ ವ್ಯಕ್ತಿಯನ್ನು ವಿವಾಹವಾಗಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮೊದಲ ಮದುವೆಯನ್ನು ಅನೂರ್ಜಿತ ಎಂದು ಘೋಷಿಸಿದಾಗ ಅಥವಾ ವಿಚ್ಛೇದನದ ತೀರ್ಪು ಪಡೆದಾಗ ಮಾತ್ರ ಮಹಿಳೆ ಎರಡನೇ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಅದು ಹೇಳಿದೆ.  ಹೀಗಾಗಿ, ಪ್ರಸ್ತುತ ಪ್ರಕರಣದಲ್ಲಿ ಮಹಿಳೆಗೆ ಜೀವನಾಂಶ ನೀಡುವ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿತು.

ನ್ಯಾಯಾಲಯ ಪ್ರತಿವಾದಿಯ (ಮಹಿಳೆಯ) ಸ್ಥಾನದ ಬಗ್ಗೆ ಸಹಾನುಭೂತಿ ಹೊಂದಿದರೂ ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ ಆಕೆಗೆ ಜೀವನಾಂಶ ನಿರಾಕರಿಸುವಂತಹ ನಿರ್ಬಂಧ ಇದೆ ಎಂದು ಅದು ಹೇಳಿದೆ.

ಆದರೆ ಕೌಟುಂಬಿಕ ಹಿಂಸಾಚಾರ ಕಾಯಿದೆಯ ಸೆಕ್ಷನ್ 22ರ ಅಡಿಯಲ್ಲಿ ಪರಿಹಾರ ಪಡೆಯಲು ಆಕೆಗೆ ಸ್ವಾತಂತ್ರ್ಯ ಇದೆ ಎಂದ ನ್ಯಾಯಾಲಯ ಸ್ಪಷ್ಟಪಡಿಸಿತು.