ಸುದ್ದಿಗಳು

ನಾಪತ್ತೆಯಾದ ಯೋಧರ ಸಂಬಂಧಿಕರ ನೆರವಿಗೆ ಧಾವಿಸದೆ ಒರಟು ವರ್ತನೆ: ಸೇನೆ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಕಿಡಿ

Bar & Bench

ನಾಪತ್ತೆಯಾದ ಯೋಧನೊಬ್ಬನ ಸಂಬಂಧಿಕರೊಂದಿಗೆ ಭಾರತೀಯ ಸೇನೆ ಒರಟಾಗಿ ನಡೆದುಕೊಳ್ಳುತ್ತಿದ್ದು ಕುಟುಂಬಕ್ಕೆ ಸಹಾಯ ಮಾಡುವ ಬದಲು ಯೋಧನ ಮರಣ ಘೋಷಣೆಗಾಗಿ ನ್ಯಾಯಾಲಯದ ಮೊರೆ ಹೋಗುವಂತೆ ಒತ್ತಾಯಿಸುತ್ತಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಸಿವಿಲ್‌ ನ್ಯಾಯಾಲಯದ ಮೂಲಕ ಯೋಧನ ಮರಣದ ದಿನಾಂಕವನ್ನು ಆತನ ಸಂಬಂಧಿಕರು ಘೋಷಿಸಲಿ ಎಂದು ಭಾರತೀಯ ಸೇನೆ ನಿರೀಕ್ಷಿಸುತ್ತಿದ್ದು ಅವರಿಗೆ ಯೋಧನ ಪಿಂಚಣಿ, ನಿವೃತ್ತಿ ಭತ್ಯೆ ಮತ್ತಿತರ ಸೌಲಭ್ಯಗಳನ್ನು ನಿರಾಕರಿಸುತ್ತಿದೆ ಎಂದು ನ್ಯಾಯಮೂರ್ತಿ ಅನಿಲ್ ವರ್ಮಾ ಹೇಳಿದ್ದಾರೆ.

ಗೋವಾಕ್ಕೆ ಸೇನಾ ತರಬೇತಿಗಾಗಿ ಕರೆಸಿದ್ದಾಗ 2010ರಲ್ಲಿ ನಾಪತ್ತೆಯಾಗಿದ್ದ ಸೇನೆಯ ಸಿಗ್ನಲ್‌ಮ್ಯಾನ್ ಸುರೇಂದ್ರ ಸಿಂಗ್ ಸೋಲಂಕಿ ಅವರ ಸಾವಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ

ಭಾರತೀಯ ಸೇನೆಯ ಇತಿಹಾಸ ಧೈರ್ಯ, ತ್ಯಾಗ ಮತ್ತು ಹುತಾತ್ಮ ಮನೋಭಾವದ ವಿಶಿಷ್ಟ ಕಥೆಗಳಿಂದ ತುಂಬಿದೆ ಎಂದು ತಿಳಿಸಿದ ನ್ಯಾಯಾಲಯ ಅಸ್ತಿತ್ವದಲ್ಲಿರುವ ನಿಯಮಗಳಿಗಳಿಂದಾಗಿ ಸೇನೆ ಯೋಧನ ಕುಟುಂಬದೊಂದಿಗೆ ಹೀಗೆ ನಡೆದುಕೊಂಡಿದ್ದು ಇದರಿಂದ ಯೋಧರ ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂದು ನುಡಿದಿದೆ.

“ಕಾಣೆಯಾದ ಯೋಧನ ದುಃಖತಪ್ತ ಕುಟುಂಬಕ್ಕೆ ಇದು ಕಷ್ಟಕರ ಸಂಗತಿಯಾಗಿದೆ. ಕೆಲ ನಿಯಮಗಳ ಕಾರಣಕ್ಕೆ ಹೀಗೆ ನಡೆದುಕೊಂಡಿದ್ದರೂ ಯೋಧರ ಬಗೆಗಿನ ಹೆಮ್ಮೆ ಮತ್ತು ಆತ್ಮಗೌರವವನ್ನು ಪರಿಗಣಿಸಿ ಈ ಹಳಸಿದ ನಿಯಮಗಳನ್ನು ರದ್ದುಗೊಳಿಸಬೇಕಿದೆ” ಎಂದು ನ್ಯಾಯಾಲಯ ನುಡಿದಿದೆ.

ಸೋಲಂಕಿ ಅವರ ಪೋಷಕರು 2010ರಲ್ಲಿ ಸಾಮಾನ್ಯ ಕುಟುಂಬ ಪಿಂಚಣಿ ಪಡೆಯಲು ಪ್ರಾರಂಭಿಸಿದ್ದರು. ಆದರೆ 2020ರಲ್ಲಿ ಮರಣ ಪ್ರಮಾಣಪತ್ರದ ಲಭ್ಯತೆಯಿಲ್ಲದ ಕಾರಣ, ವಿಶೇಷ ಕುಟುಂಬ ಪಿಂಚಣಿ ಮತ್ತಿತರ ಬಾಕಿ ಸೌಲಭ್ಯಗಳನ್ನು ಸೇನೆಯಿಂದ ಪಡೆಯದೆ ಹೋದರು.

ಬಳಿಕ ಸೋಲಂಕಿ ಸಾವಿನ ಕುರಿತು ಘೋಷಣೆಗಾಗಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಸಿವಿಲ್‌ ಮೊಕದ್ದಮೆ ಹೂಡಿದ್ದ ದಿನವಾದ ಜೂನ್ 24, 2020ರಂದು ಸೋಲಂಕಿ  ಸಾವನ್ನಪ್ಪಿದ್ದಾರೆ ಎಂದು ಸಿವಿಲ್‌ ನ್ಯಾಯಾಧೀಶರು ಘೋಷಿಸಿದರು. ತೀರ್ಪನ್ನು ಜಿಲ್ಲಾ ನ್ಯಾಯಾಲಯ ಕೂಡ ಎತ್ತಿಹಿಡಿಯಿತು.

ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋದ ಸೋಲಂಕಿ ಸಂಬಂಧಿಕರು “ ಸಾಮಾನ್ಯ ಕುಟುಂಬ ಪಿಂಚಣಿ ಮಂಜೂರು ಮಾಡುವಾಗ ಅಧಿಕಾರಿಗಳು ಸೋಲಂಕಿ ಅವರ ಮರಣದ ದಿನಾಂಕವನ್ನು ಜುಲೈ 25, 2010 ಎಂದು ಈಗಾಗಲೇ ಪರಿಗಣಿಸಿದ್ದಾರೆ” ಎಂದು ವಾದಿಸಿದರು.

ವಾದ ಆಲಿಸಿ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಸೋಲಂಕಿ ಜುಲೈ 25, 2010ರಂದು ನಿಧನರಾಗಿದ್ದಾರೆ 2020ರಲ್ಲಿ ಅಲ್ಲ ಎಂದು ಘೋಷಿಸಿ ವಿಚಾರಣಾ ನ್ಯಾಯಾಲಯದ ತೀರ್ಪುಗಳನ್ನು ಮಾರ್ಪಡಿಸಿತು.

ಪರಿಣಾಮ, ಭಾರತ ಸರ್ಕಾರದ ಸೂಚನೆಗಳ ಪ್ರಕಾರ ಸೋಲಂಕಿ ಅವರ ಪೋಷಕರು ಜಿಪಿಎಫ್‌, ಗ್ರಾಚ್ಯುಟಿ, ಕುಟುಂಬ ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯ ಪಡೆಯಲು ಅರ್ಹರು ಎಂದು ಘೋಷಿಸಿತು.