Judge 
ಸುದ್ದಿಗಳು

ಸಿಬ್ಬಂದಿ ಅಟ್ಟಾಡಿಸಿ, ಪೊಲೀಸರಿಗೆ ಬಸ್ಕಿ ಹೊಡೆಸಿದ್ದ ನ್ಯಾಯಾಧೀಶರ ವಜಾ: ಆದೇಶ ಎತ್ತಿಹಿಡಿದ ಮ. ಪ್ರದೇಶ ಹೈಕೋರ್ಟ್

2019ರಲ್ಲಿ ನ್ಯಾಯಾಂಗ ಅಧಿಕಾರಿಯಾಗಿ ನೇಮಕಗೊಂಡ ಕೌಸ್ತುಭ್ ಖೇರಾ ಅವರನ್ನು ಕಳೆದ ವರ್ಷ ಮಧ್ಯಪ್ರದೇಶ ಸರ್ಕಾರ ಸೇವೆಯಿಂದ ವಜಾಗೊಳಿಸಿತ್ತು.

Bar & Bench

ನ್ಯಾಯಾಂಗ ನಿಂದನೆಗಾಗಿ ಕ್ಷಮೆಯಾಚನೆಯ ರೂಪದಲ್ಲಿ ವಕೀಲರು ಮತ್ತು ಪೊಲೀಸ್‌ ಅಧಿಕಾರಿಗಳು ತಮ್ಮ ಕಿವಿ ಹಿಡಿದು ಬಸ್ಕಿ ಹೊಡೆಯುವಂತೆ ಮಾಡಿದ ಆರೋಪ ಎದುರಿಸುತ್ತಿದ್ದ ಸಿವಿಲ್‌ ನ್ಯಾಯಾಧೀಶರೊಬ್ಬರ ವಜಾ ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್‌ ಈಚೆಗೆ ಎತ್ತಿಹಿಡಿದಿದೆ [ಕೌಸ್ತುಭ್ ಖೇರಾ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಪ್ರೊಬೆಷನರಿ (ತರಬೇತಿ ಅವಧಿ) ನ್ಯಾಯಾಂಗ ಅಧಿಕಾರಿ ಕೌಸ್ತುಭ್ ಖೇರಾ ಅವರ ವಿರುದ್ಧ ಕೇಳಿಬಂದ ದೂರುಗಳಿಗಾಗಿ ಅವರನ್ನು ವಜಾಗೊಳಿಸುತ್ತಿಲ್ಲ ಬದಲಿಗೆ ಅವರ ಕಾರ್ಯಕ್ಷಮತೆ ಅತೃಪ್ತಿಕರವಾಗಿರುವುದರಿಂದ ಹಾಗೆ ಮಾಡಲಾಗಿದೆ ಎಂದು ಮೇ 7ರಂದು ನೀಡಿದ ತೀರ್ಪಿನಲ್ಲಿ, ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ವಿವೇಕ್ ಜೈನ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ಖೇರಾ ಅವರನ್ನು ವಜಾಗೊಳಿಸಿ ಪೂರ್ಣ ನ್ಯಾಯಾಲಯ ನಿರ್ಣಯ ಕೈಗೊಂಡಿದ್ದು ಅದು ಖೇರಾ ಅವರ ವಿರುದ್ಧ ಯಾವುದೇ ದಂಡನಾತ್ಮಕ ಆದೇಶ ನೀಡಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದೆ. ಅರ್ಜಿದಾರ ತನ್ನ ಪ್ರೊಬೆಷನ್‌ ಅವಧಿಯನ್ನು ಯಶಸ್ವಿ ಮತ್ತು ತೃಪ್ತಿಕರವಾಗಿ ಬಳಸಿಕೊಂಡಿಲ್ಲ ಎಂದು ತೀರ್ಪು ನೀಡುವ ಮೂಲಕ ಅವರನ್ನು ಸೇವೆಯಿಂದ ವಜಾಗೊಳಿಸಲು ನಿರ್ಧರಿಸಿದೆ ಎಂಬುದಾಗಿ ಅದು ಹೇಳಿದೆ.

2019ರಲ್ಲಿ ನ್ಯಾಯಾಂಗ ಅಧಿಕಾರಿಯಾಗಿ ನೇಮಕಗೊಂಡ ಖೇರಾ ಅವರನ್ನು, ಹೈಕೋರ್ಟ್ ಆಡಳಿತ ಸಮಿತಿ ಮತ್ತು ಪೂರ್ಣ ನ್ಯಾಯಾಲಯದ ಶಿಫಾರಸಿನ ಆಧಾರದಲ್ಲಿ ಮಧ್ಯಪ್ರದೇಶ ಸರ್ಕಾರ ಕಳೆದ ವರ್ಷ ಸೇವೆಯಿಂದ ವಜಾಗೊಳಿಸಿತ್ತು.

ವಕೀಲರೊಂದಿಗೆ ದುರ್ವರ್ತನೆ, ನ್ಯಾಯವಾದಿಗಳು ಮತ್ತು ಪೊಲೀಸ್ ಸಿಬ್ಬಂದಿಯ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಿದ್ದು, ಅನುಮತಿಯಿಲ್ಲದೆ ಪ್ರಧಾನ ಕಚೇರಿಯಿಂದ ಹೊರಟು ಹೋಗಿದ್ದು, ತನ್ನದೇ ಜವಾನನಿಗೆ ದಂಡ ವಿಧಿಸಿದ್ದು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ಅಟ್ಟಾಡಿಸಿ ಅನುಚಿತವಾಗಿ ನಡೆದುಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಬಂದಿದ್ದ ಏಳು ದೂರುಗಳನ್ನು ಆಧರಿಸಿ ಅವರನ್ನು ವಜಾ ಮಾಡಲಾಗಿತ್ತು. ಈ ಆದೇಶವನ್ನು ಖೇರಾ ಪ್ರಶ್ನಿಸಿದ್ದರು.

ವಾದಗಳನ್ನು ಆಲಿಸಿದ ನ್ಯಾಯಾಲಯ  ದುಷ್ಕೃತ್ಯಕ್ಕಾಗಿ ಶಿಕ್ಷಾರ್ಹ ಕ್ರಮ ಕೈಗೊಳ್ಳುವುದು ಒಂದು ವಿಚಾರವಾದರೆ ತರಬೇತಿ ಅವಧಿಯಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಅಧಿಕಾರಿ ಸೂಕ್ತ ಅಧಿಕಾರಿಯಾಗುತ್ತಾರೋ ಇಲ್ಲವೋ ಎಂಬ ತೃಪ್ತಿಗೆ ಬರುವುದು ಸಂಪೂರ್ಣವಾಗಿ ಬೇರೆಯದೇ ವಿಚಾರ. ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದಿರುವ ನ್ಯಾಯಾಲಯ ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರನಿಗೆ ದಂಡನೀಯ ಶಿಕ್ಷೆ ವಿಧಿಸಿಲ್ಲ ಎಂಬುದು ವಿವಾದವಲ್ಲ ಎಂದಿದೆ.

ಖೇರಾ ಅವರು ಖುದ್ದು ವಾದ ಮಂಡಿಸಿದರು. ಹೈಕೋರ್ಟನ್ನು ಹಿರಿಯ ವಕೀಲ ಆದಿತ್ಯ ಅಧಿಕಾರಿ ಮತ್ತವರ ತಂಡ ಪ್ರತಿನಿಧಿಸಿತ್ತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Kaustubh_Khera_v__The_State_of_Madhya_Pradesh_and_Others.pdf
Preview