ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ 
ಸುದ್ದಿಗಳು

ವ್ಯಭಿಚಾರದಲ್ಲಿ ಪತ್ನಿ ನಿರತಳಲ್ಲದಿದ್ದರೆ ಆಕೆಗೆ ಜೀವನಾಂಶ ಸಿಗದಂತೆ ನಿರ್ಬಂಧಿಸಲಾಗದು: ಮಧ್ಯಪ್ರದೇಶ ಹೈಕೋರ್ಟ್

ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸುವ ವೇಳೆ ಅಥವಾ ಅದರ ಹಿಂದೆ ಮುಂದೆ ವ್ಯಭಿಚಾರದಲ್ಲಿ ತೊಡಗಿದ್ದರೆ ಮಾತ್ರ ವ್ಯಭಿಚಾರದ ಕಾರಣಕ್ಕೆ ಪತ್ನಿ ಜೀವನಾಂಶ ಪಡೆಯದಂತೆ ನಿರ್ಬಂಧಿಸಬಹುದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಸಿಆರ್‌ಪಿಸಿ ಸೆಕ್ಷನ್ 125ರ ಅಡಿಯಲ್ಲಿ ಪತಿಯಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಅಥವಾ ಅದರ ಆಸುಪಾಸಿನಲ್ಲಿ ವ್ಯಭಿಚಾರದಲ್ಲಿ ತೊಡಗಿದ್ದರೆ ಮಾತ್ರ ವ್ಯಭಿಚಾರದ ಆಧಾರದಲ್ಲಿ ಜೀವನಾಂಶ ಪಡೆಯುವುದನ್ನು ನಿರ್ಬಂಧಿಸಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ತನ್ನ ಮಾಜಿ ಪತ್ನಿಗೆ ಜೀವನಾಂಶ ಪಾವತಿಸಬೇಕು ಎಂದು ವ್ಯಕ್ತಿಯೊಬ್ಬರಿಗೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿ ಹಿಡಿದ ನ್ಯಾಯಮೂರ್ತಿ ಪ್ರಕಾಶ್ ಚಂದ್ರ ಗುಪ್ತಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಿಆರ್‌ಪಿಸಿ ಸೆಕ್ಷನ್ 125 (4) ರ ಪ್ರಕಾರ ತನ್ನ ವಿಚ್ಛೇದಿತ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವುದರಿಂದ ಯಾವುದೇ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ವ್ಯಕ್ತಿ ಆರೋಪಿಸಿದ್ದರು. ಆ ಸೆಕ್ಷನ್‌ ಪ್ರಕಾರ, ಹೆಂಡತಿ ವ್ಯಭಿಚಾರದಲ್ಲಿ ತೊಡಗಿದ್ದರೆ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ.

ಆದರೆ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಾಗ ಹೆಂಡತಿ ವ್ಯಭಿಚಾರದಲ್ಲಿ ತೊಡಗಿದ್ದಳು ಎಂಬುದನ್ನು ಸಾಬೀತುಪಡಿಸುವ ಯಾವ ದಾಖಲೆಯೂ ದೊರೆತಿಲ್ಲ ಎಂದ ಪೀಠ, ವ್ಯಕ್ತಿಯ ವಾದವನ್ನು ತಳ್ಳಿಹಾಕಿತು.

ನ್ಯಾಯಮೂರ್ತಿ ಪ್ರಕಾಶ್ ಚಂದ್ರ ಗುಪ್ತಾ

ಸಿಆರ್‌ಪಿಸಿ ಸೆಕ್ಷನ್ 125ರ ಅಡಿಯಲ್ಲಿ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶ ರೂಪದಲ್ಲಿ ತಿಂಗಳಿಗೆ ₹ 10,000 ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ಈ ವಿಚಾರ ತಿಳಿಸಿದೆ.

ಮಹಿಳೆ ವಿಚ್ಛೇದನ ಪಡೆದಿದ್ದರೂ ಜೀವನಾಂಶ ಪಡೆಯಲು ಅರ್ಹಳು. ಸಿಆರ್‌ಪಿಸಿ ಸೆಕ್ಷನ್ 125ರ ಅಡಿಯಲ್ಲಿ ʼಹೆಂಡತಿʼ ಎಂಬ ವ್ಯಾಖ್ಯಾನ, ವಿಚ್ಛೇದಿತಳಾಗಿದ್ದರೂ ಮರುಮದುವೆಯಾಗದ ಮಹಿಳೆಯ ಬಗ್ಗೆ ಹೇಳುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರರು ಮತ್ತೊಬ್ಬ ವ್ಯಕ್ತಿಯೊಂದಿಗೆ ತನ್ನ ಪತಿ ಇರುವ ಛಾಯಾಚಿತ್ರಗಳನ್ನು ದಾಖಲೆಯಾಗಿ ಸಲ್ಲಿಸಿದ್ದರೂ ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 65 ಬಿ ಅಡಿಯಲ್ಲಿ ಎಲೆಕ್ಟ್ರಾನಿಕ್ ಪ್ರಮಾಣಪತ್ರ ಹಾಜರುಪಡಿಸಿಲ್ಲ. ಛಾಯಾಚಿತ್ರಗಳನ್ನಷ್ಟೇ ಆಧರಿಸಿ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ವ್ಯಭಿಚಾರದಲ್ಲಿ ತೊಡಗಿದ್ದಳು ಎಂದು ಊಹಿಸಲು ಸಾಧ್ಯವಿಲ್ಲ ಎಂದು ಕೂಡ ಪೀಠ ಇದೇ ವೇಳೆ ತಿಳಿಸಿತು.

ಹೀಗಾಗಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿಹಿಡಿದ ಹೈಕೋರ್ಟ್‌ ವ್ಯಕ್ತಿಯ ಮನವಿಯನ್ನು ವಜಾಗೊಳಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Madhya Pradesh High Court order.pdf
Preview