NHRC
NHRC 
ಸುದ್ದಿಗಳು

ಮಧ್ಯಪ್ರದೇಶ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ: ಬೆಳಗಾವಿ ವಕೀಲರ ದೂರು ಸ್ವೀಕರಿಸಿದ ಎನ್ಎಚ್ಆರ್‌ಸಿ

Ramesh DK

ಮಧ್ಯಪ್ರದೇಶದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವಕನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸಿದ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿಯ ವಕೀಲ ಹಾಗೂ ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಭೀಮನಗೌಡ ಪರಗೊಂಡ ಅವರು ನೀಡಿದ ದೂರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವೀಕರಿಸಿದೆ.

ಸಿಧಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ನಿನ್ನೆ ವೈರಲ್‌ ಆಗಿರುವ ವೀಡಿಯೊದಲ್ಲಿ ಕಂಡುಬಂದಂತೆ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಾರ್ಮಿಕನೊಬ್ಬ ರಸ್ತೆಬದಿ ಕುಳಿತಿರುತ್ತಾನೆ. ಆಗ ಪ್ರವೇಶ್‌ ಶುಕ್ಲಾ ಎಂಬಾತ ಧೂಮಪಾನ ಮಾಡುತ್ತಾ ಕುಳಿತಿದ್ದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸುತ್ತಾನೆ.  

ಸಾಮಾಜಿಕ ಹೋರಾಟಗಾರರೂ ಆಗಿರುವ ಪರಗೊಂಡ ಅವರು ಆನ್‌ಲೈನ್‌ ಮೂಲಕ ಎನ್‌ಎಚ್‌ಆರ್‌ಸಿಗೆ ದೂರು ಸಲ್ಲಿಸಿದ್ದಾರೆ.  “ಆಪಾದಿತ ವ್ಯಕ್ತಿಯ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕು ಹಾಗೂ ದೌರ್ಜನ್ಯಕ್ಕೆ ತುತ್ತಾದ ಬುಡಕಟ್ಟು ಸಮುದಾಯದ ವ್ಯಕ್ತಿಗೆ 1 ಕೋಟಿ ರೂಪಾಯಿ ಪರಿಹಾರ ದೊರಕಿಸಿಕೊಡಬೇಕು” ಎಂದು ಮನವಿ ಮಾಡಿದ್ದಾರೆ.

ಆನ್‌ಲೈನ್‌ ಮೂಲಕ ದೂರು ಸ್ವೀಕರಿಸಿರುವ ಎನ್‌ಎಚ್‌ಆರ್‌ಸಿ ದೂರು ದಾಖಲಿಸಿಕೊಂಡಿರುವ ಮಾಹಿತಿಯನ್ನು (ದೂರು ಸಂಖ್ಯೆ 1652/12/45/2023) ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

ಘಟನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು. ಹಲವರು ಇದೊಂದು ತಲೆತಗ್ಗಿಸುವ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ʼತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಮಧ್ಯಪ್ರದೇಶ ಬಿಜೆಪಿ ಘಟಕ ಕೂಡ ಘಟನೆಯನ್ನು ಖಂಡಿಸಿತ್ತು. ಆದರೆ ಆರೋಪಿ ಪಕ್ಷಕ್ಕೆ ಸೇರಿದವನು ಎಂಬ ಕಾಂಗ್ರೆಸ್‌ ಆರೋಪವನ್ನು ಅದು ನಿರಾಕರಿಸಿತ್ತು.