Karnataka High Court 
ಸುದ್ದಿಗಳು

ಮಡಿಕೇರಿ ದಸರಾ: ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಅನುಮತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ದಂಶಮಂಟಪ ಸಮಿತಿ

2026ರ ಅಕ್ಟೋಬರ್‌ 21 ಮತ್ತು 22ರಂದು ಡಿಜೆ ಧನ್ವಿವರ್ಧಕ ಬಳಕೆಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿ 15 ದಿನ ಕಳೆದು ಸರ್ಕಾರದಿಂದ ಈವರೆಗೆ ತಮಗೆ ಅನುಮತಿ ಸಿಕ್ಕಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Bar & Bench

ಮಡಿಕೇರಿ ದಸರಾ ಆಚರಣೆ ಹಿನ್ನೆಲೆಯಲ್ಲಿ ಸ್ತಬ್ಧಚಿತ್ರಗಳ ಮೆರೆವಣಿಗೆ ವೇಳೆ ಡಿಜೆ ಧ್ವನಿವರ್ಧಕ ಬಳಸಲು ತಮಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಮತ್ತು ಕೊಡಗು ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ದಸರಾ ದಂಶಮಂಟಪ ಸಮಿತಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದೆ.

ದಸರಾ ದಂಶಮಂಟಪ ಸಮಿತಿ ಅಧ್ಯಕ್ಷ ಪಾಂಡಿರಾ ಟಿ.ಪೂಣಚ್ಚ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು (ಕೆಎಸ್‌ಪಿಎಸ್‌) ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

2026ರ ಅಕ್ಟೋಬರ್‌ 21 ಮತ್ತು 22ರಂದು ಮಡಿಕೇರಿ ಪಟ್ಟಣದಲ್ಲಿ ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತದೆ. ಮಡಿಕೇರಿ ಪಟ್ಟಣದಲ್ಲಿ ದಸರಾ ಮಹೋತ್ಸವ ನಿರ್ವಹಣೆಗಾಗಿ ಕರವಲೆ ಭಗವತಿ ಮಹೀಷಾ ಮರ್ದಿನಿ ಹಾಗೂ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನ ಸೇರಿದಂತೆ ಮಡಿಕೇರಿಯ 10 ದೇವಸ್ಥಾನಗಳ ಸಮಿತಿಯನ್ನು ದಸರಾ ದಶಮಂಟಪ ಸಮಿತಿ ಅಡಿಯಲ್ಲಿ ಒಕ್ಕೂಟ ರಚಿಸಿಕೊಳ್ಳಲಾಗಿದೆ. ಪ್ರತಿಯೊಂದು ದೇವಸ್ಥಾನದ ಪರಿಕಲ್ಪನೆಯಲ್ಲಿ ಸ್ತಬ್ಧಚಿತ್ರವನ್ನು ಮೆರವಣಿಗೆ ಮಾಡಲಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರತಿ ದೇವಸ್ಥಾನದ ಸ್ತಬ್ಧಚಿತ್ರದ ಮೆರವಣಿಯು ಆಯಾ ದೇವಸ್ಥಾನದ ಆವರಣದಿಂದ ಆರಂಭವಾಗಿ ರಾತ್ರಿ 10ಕ್ಕೆ ತಿಮ್ಮಯ್ಯ ವೃತ್ತದ ಬಳಿ ಸೇರುತ್ತವೆ. ಅಲ್ಲಿಂದ ಬೆಳಗ್ಗೆ ಆರು ಗಂಟೆಯವರೆಗೆ ಸ್ತಬ್ಧಚಿತ್ರ ಮೆರೆವಣಿಗೆಯು ರಾಜಬೀದಿ ಮಾರ್ಗವಾಗಿ ಬನ್ನಿಮಂಟಪವರೆಗೆ ಸಾಗುತ್ತದೆ. ದೀಪಾಲಂಕರ ಮತ್ತು ಡಿಜೆ ಧ್ವನಿವರ್ಧಕ ನಡುವೆ ಸಾಗುತ್ತದೆ. ಇದು ಮಡಿಕೇರಿ ದಸರಾ ಸಮಾರಂಭದ ಮುಖ್ಯ ಆಕರ್ಷಣೆಯಾಗಿದೆ. ಸ್ತಬ್ಧಚಿತ್ರ ಮೆರವಣಿಗೆ ಕಳೆದ 40 ವರ್ಷಗಳಿಂದ ಮಡಿಕೇರಿ ಪಟ್ಟಣದಲ್ಲಿ ನಡೆಸಲಾಗುತ್ತಿದೆ. 2026ರ ಅಕ್ಟೋಬರ್‌ 21 ಮತ್ತು 22ರಂದು ಡಿಜೆ ಧನ್ವಿವರ್ಧಕ ಬಳಕೆಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿ 15 ದಿನ ಕಳೆದು ಸರ್ಕಾರದಿಂದ ಈವರೆಗೆ ತಮಗೆ ಅನುಮತಿ ಸಿಕ್ಕಿಲ್ಲ. ಹೀಗಾಗಿ, ನಮ್ಮ ಮನವಿ ಪತ್ರ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.