Liquor
Liquor 
ಸುದ್ದಿಗಳು

“ನ್ಯಾಯಾಲಯ ಹೇಳುವುದನ್ನು ಸರ್ಕಾರ ಕೇಳಿಸಿಕೊಳ್ಳುತ್ತಿದೆಯೇ?” ರಾಜ್ಯಾದ್ಯಂತ ಪಾನನಿಷೇಧಕ್ಕೆ ಮದ್ರಾಸ್‌ ಹೈಕೋರ್ಟ್‌ ಮನವಿ

Bar & Bench

ಮದ್ಯಪಾನವು ಹಲವಾರು ದುರಂತಗಳಿಗೆ ಮತ್ತು ಅಸಂಖ್ಯ ಅಪರಾಧಗಳಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ಸಂಭವಿಸುವುದಕ್ಕೆ ಕಾರಣವಾಗಿದೆ ಎಂದಿರುವ ಮದ್ರಾಸ್‌ ಹೈಕೋರ್ಟ್‌ ಮದ್ಯಪಾನ ನಿಷೇಧಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ (ಎಂ ಥಾಹ ಮೊಹಮದ್‌ ವರ್ಸಸ್‌ ಜಿಲ್ಲಾ ದಂಡಾಧಿಕಾರಿ, ಮದುರೈ ಮತ್ತು ಇತರರು).

ಬಾಲಕಿಯರ ಪ್ರೌಢಶಾಲೆಯ ಸಮೀಪ ಹಾಗೂ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠದ ಎದುರಿಗೇ ರಾಜ್ಯದ ಮದ್ಯಪಾನ ವಿತರಣೆ/ ತಮಿಳುನಾಡು ರಾಜ್ಯ ಮಾರ್ಕೆಟಿಂಗ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಟಿಎಎಸ್‌ಎಂಎಸಿ) ಅಂಗಡಿ ತೆರೆದಿರುವುದಕ್ಕೆ ಸಂಬಂಧಿಸಿದ ಮನವಿ ವಿಚಾರಣೆಯ ವೇಳೆ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಎಸ್‌ ಕಿರುಬಾಕರನ್‌ ಮತ್ತು ಬಿ ಪುಗಳೇಂದಿ ಅವರಿದ್ದ ವಿಭಾಗೀಯ ಪೀಠವು ಈ ಮನವಿ ಮಾಡಿತು.

Justices N Kirubakaran and B Pugalendhi, Madras High Court

ಮದ್ಯಪಾನ ಅಂಗಡಿಯನ್ನು ಸ್ಥಳಾಂತರಿಸುವಂತೆ ಆದೇಶಿಸಿರುವ ಪೀಠವು, “… ಭಾರತದ ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಮತ್ತು ಮಹಿಳೆಯರು ಮತ್ತು ಮಕ್ಕಳ ಕಣ್ಣೀರನ್ನು ಒರೆಸುವ ದೃಷ್ಟಿಯಿಂದ ಹಂತಹಂತವಾಗಿ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವಂತೆ ಪೀಠವು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತದೆ. ಇದು ಪೀಠದ ಮನವಿಯಷ್ಟೇ ಅಲ್ಲ ನೋವುಣ್ಣುತ್ತಿರುವ ಗೃಹಿಣಿಯರು, ಮಕ್ಕಳು ಮತ್ತು ಇಡೀ ಸಮಾಜದ ಆಗ್ರಹ “ ಎಂದು ಹೇಳಿದೆ.

ಸಂವಿಧಾನದ 41ನೇ ವಿಧಿಗೆ ಅನುಗುಣವಾಗಿ ಇದನ್ನು ಜಾರಿಗೊಳಿಸಬಹುದಾಗಿದ್ದು, ಇದರಿಂದ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕುಗ್ಗಲಿದೆ. ಪ್ರತಿಯೊಬ್ಬರ ಆದಾಯ ಹೆಚ್ಚಲಿದೆ. ಮದ್ಯಪಾನ ವ್ಯಸನಿಗಳ ಆರೋಗ್ಯ ಸುಧಾರಿಸಲಿದ್ದು, ಕೌಟುಂಬಿಕ ದೌರ್ಜನ್ಯ ಕಡಿಮೆಯಾಗಲಿದೆ. ಕುಟುಂಬದ ವರಮಾನ ಹೆಚ್ಚಲಿದೆ. ಪಾನಮತ್ತರಾಗಿ ವಾಹನ ಚಾಲನೆ ಮಾಡುವುದು ಮತ್ತು ಅದರಿಂದ ಸಂಭವಿಸುವ ಸಾವಿನ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಪೀಠ ಹೇಳಿದೆ.

ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸಲಿದ್ದು, ರಾಷ್ಟ್ರಪಿತನ ಕನಸು ನನಸಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. “ಈ ನ್ಯಾಯಾಲಯ ಹೇಳುವುದನ್ನು ಸರ್ಕಾರ ಕೇಳಿಸಿಕೊಳ್ಳಲಿದೆಯೇ?” ಎಂದು ಇದೇ ವೇಳೆ ಪೀಠವು ಸರ್ಕಾರದ ಗಮನಸೆಳೆಯಿತು.

ರಾಜ್ಯದಲ್ಲಿ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಾಗಿ ಆದಾಯದ ಹರಿವು ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಪೀಠವು ಬೇಸರ ವ್ಯಕ್ತಪಡಿಸಿದೆ.

“ತಮಿಳುನಾಡು ಸರ್ಕಾರಕ್ಕೆ ಪ್ರತಿ ವರ್ಷವು ಸುಮಾರು 5,300 ಟಿಎಎಸ್‌ಎಂಎಸಿ ಅಂಗಡಿಗಳಿಂದ 30,000 ಕೋಟಿ ರೂಪಾಯಿ ಆದಾಯ ಸರಾಗವಾಗಿ ಹರಿದು ಬರುತ್ತಿದೆ. ಸಾಮಾನ್ಯ ದಿನದಲ್ಲಿ ದಿನಕ್ಕೆ 70 ಕೋಟಿ ರೂಪಾಯಿ, ವಾರಾಂತ್ಯದಲ್ಲಿ 90 ರಿಂದ 100 ಕೋಟಿ ರೂಪಾಯಿ, ಹಬ್ಬ-ಹರಿದಿನಗಳ ಸಂದರ್ಭದಲ್ಲಿ 110-120 ಕೋಟಿ ರೂಪಾಯಿ ಸಂದಾಯವಾಗುತ್ತಿದ್ದು, 2020ರ ನವೆಂಬರ್‌ನಲ್ಲಿ ದೀಪಾವಳಿ ಸಂದರ್ಭದ ಎರಡು ದಿನಗಳಲ್ಲೇ 465.79 ಕೋಟಿ ರೂಪಾಯಿ ಟಿಎಎಸ್‌ಎಂಎಸಿ ಖಾತೆಗೆ ಜಮೆಯಾಗಿದೆ” ಎಂದು ಪೀಠವು ಹೇಳಿತು.

ಕಳೆದ ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್‌ ನಡೆಸಿದ ಸಂಶೋಧನೆಯ ಪ್ರಕಾರ ವಿಷಾದದ ಸಂಗತಿಯೇನೆಂದರೆ ಪಾನ ಮಾರಾಟದಿಂದ ರಾಜ್ಯ ಸರ್ಕಾರ ಪಡೆಯುವ ಒಂದು ರೂಪಾಯಿಗೆ ಬದಲಾಗಿ ಆರೋಗ್ಯ ವೆಚ್ಚಕ್ಕೆ ಸಂಬಂಧಿಸಿದಂತೆ ಸರ್ಕಾರವು ಕನಿಷ್ಠ 2 ರೂಪಾಯಿ ನಷ್ಟ ಅನುಭವಿಸುತ್ತಿದೆ. ಇದರ ಜೊತೆಗೆ ಉತ್ಪಾದಕತೆ ನಷ್ಟ ಅನುಭವಿಸುತ್ತಿದೆ ಎಂದು ಪೀಠ ಹೇಳಿದೆ.

2020ರ ಕ್ರಿಸಿಲ್‌ ವರದಿಯ ಪ್ರಕಾರ ಒಟ್ಟಾರೆ ಇಡೀ ದೇಶದಲ್ಲಿ ಸೇವಿಸುವ ಮದ್ಯದ ಪೈಕಿ ಅರ್ಧದಷ್ಟು ಮದ್ಯ ದಕ್ಷಿಣ ಭಾರತದ ರಾಜ್ಯಗಳಲ್ಲಿ ಖರ್ಚಾಗುತ್ತದೆ. “ಮತ್ತೊಂದು ಗಂಭೀರ ಮತ್ತು ಆದರೆ ಆಶ್ಚರ್ಯವಾಗದ ವಿಚಾರವೇನೆಂದರೆ ಶೇ. 13 ರಷ್ಟು ತಮಿಳುನಾಡು, ಬಳಿಕ ಕರ್ನಾಟಕದಲ್ಲಿ ಶೇ. 12 ರಷ್ಟು ಮದ್ಯ ಸೇವಿಸಲಾಗುತ್ತದೆ. ರಾಜ್ಯದ ನದಿಗಳಲ್ಲಿ ನೀರು ಹರಿಯುತ್ತದೋ ಇಲ್ಲವೋ, ರಾಜ್ಯದ ಮೂಲೆಮೂಲೆಯಲ್ಲೂ ಅದು ದೇವಸ್ಥಾನ, ಶಾಲಾ-ಕಾಲೇಜುಗಳ ಬಳಿಯಾಗಿರಬಹುದು ವಿಶೇಷ ಪಾನ (ಮದ್ಯ) ಹರಿಯಲಿದೆ” ಎಂದು ಪೀಠವು ಮಾರ್ಮಿಕವಾಗಿ ನುಡಿದಿದೆ.

ಜನರು ಕುಡಿತಕ್ಕೆ ದಾಸರಾಗಿರುವುದರಿಂದ ವಾಸ್ತವದಲ್ಲಿ ಏನಾಗುತ್ತದೆ ಎಂಬುದನ್ನು ಮರೆಯಲಾಗದು. ಕುಟುಂಬಗಳು ಹಾಳಾಗುತ್ತಿದ್ದು, ಸಂವಿಧಾನದ 21ನೇ ವಿಧಿಯ ಅನ್ವಯ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು ಮದ್ಯದಿಂದ ಉಲ್ಲಂಘನೆಯಾಗುತ್ತಿವೆ. ಮದ್ಯಸೇವಿಸಿ ವಾಹನ ಚಾಲನೆ ಮಾಡುವುದರಿಂದ ಪ್ರತಿ ದಿನ ದೇಶದಲ್ಲಿ 19 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಪೀಠ ಹೇಳಿದೆ.

“ಪ್ರತಿಯೊಂದು ಟಿಎಎಸ್‌ಎಂಎಸಿ ಅಂಗಡಿ ಮತ್ತು ಬಾರ್‌ ಮುಂದೆ ದ್ವಿಚಕ್ರ ವಾಹನದ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮದ್ಯ ಸೇವಿಸಿದವರು ದ್ವಿಚಕ್ರ ವಾಹನ ಸವಾರಿ ಮಾಡಲು ಹೇಗೆ ಅವಕಾಶ ಮಾಡಿಕೊಡಲಾಗುತ್ತದೆ, ಅದರಲ್ಲೂ ಮದ್ಯಪಾನ ಮಾಡಿ ವಾಹನ ಚಾಲನೆ ಅಪರಾಧವಾಗಿರುವಾಗ...” ಎಂದು ನ್ಯಾಯಾಲಯ ಪ್ರಶ್ನಿಸಿದೆ.

2018ರಲ್ಲಿ 12,000 ರಸ್ತೆ ಅಪಘಾತ, 2019ರಲ್ಲಿ 12,256 ರಸ್ತೆ ಅಪಘಾತ ಸಂಭವಿಸಿವೆ ಎಂಬ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ ಮಾಹಿತಿಯನ್ನು ಪೀಠವು ಉಲ್ಲೇಖಿಸಿದೆ. ಶಾಲಾ-ಕಾಲೇಜು ಇತ್ಯಾದಿ ನಿಷೇಧಿತ ಪ್ರದೇಶಗಳಲ್ಲಿ ತೆರೆದಿರುವ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸುವಂತೆ ಹೈಕೋರ್ಟ್‌ ಹಲವು ಆದೇಶಗಳನ್ನು ಹೊರಡಿಸಿದೆ. ಅದಾಗ್ಯೂ, ನಿಯಮಕ್ಕೆ ವಿರುದ್ಧವಾಗಿ ಟಿಎಎಸ್‌ಎಂಎಸಿ ಅಂಗಡಿಗಳನ್ನು ತೆರೆಯಲಾಗಿದೆ ಎಂದು ಪೀಠ ಹೇಳಿದೆ.

“ಜನರ ಶಾಂತಿ, ಸುವ್ಯವಸ್ಥೆ ಮತ್ತು ನೆಮ್ಮದಿಗಿಂತ ಮದ್ಯದ ಅಂಗಡಿಗಳ ಮೂಲಕ ಆದಾಯ ಸಂಗ್ರಹಿಸುವ ಇಚ್ಛೆಯನ್ನು ಸರ್ಕಾರ ಹೊಂದಿರುವಂತಿದೆ” ಎಂದು ಪೀಠ ಹೇಳಿದೆ. ತಮಿಳುನಾಡಿನಲ್ಲಿರುವ ಟಿಎಎಸ್‌ಎಂಎಸಿ ಅಂಗಡಿಗಳ ಸಂಖ್ಯೆ, ಅವುಗಳು ಇರುವ ಸ್ಥಳದ ಕಾರಣಕ್ಕೆ ಸಂಬಂಧಿಸಿದಂತೆ ತಕರಾರು ಎತ್ತಲಾಗಿರುವ ಅಂಗಡಿಗಳ ಸಂಖ್ಯೆ ಹಾಗೂ ತಕರಾರಿನ ಹಿನ್ನೆಲೆಯಲ್ಲಿ ಸ್ಥಳಾಂತರಗೊಂಡ ಅಂಗಡಿಗಳ ಸಂಖ್ಯೆ ಮತ್ತು ಇದೇ ವಿಚಾರದಲ್ಲಿ ತಿರಸ್ಕೃತವಾದ ಮನವಿಗಳ ಸಂಖ್ಯೆಯನ್ನು ಒದಗಿಸುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪೀಠ ಸೂಚಿಸಿದೆ. ಇನ್ನು ಮುಂದೆ, ಟಿಎಎಸ್‌ಎಂಎಸಿ ಅಂಗಡಿಗಳು ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗುವ ಆಕ್ಷೇಪಗಳಿಗೆ ನಾಲ್ಕು ವಾರಗಳ ಒಳಗೆ ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ದೂರುದಾರರಿಗೆ ಮಾಹಿತಿ ಒದಗಿಸುವಂತೆ ಟಿಎಎಸ್‌ಎಂಎಸಿಗೆ ಪೀಠ ಸೂಚಿಸಿದೆ.