Madras High Court
Madras High Court 
ಸುದ್ದಿಗಳು

ಸರ್ಕಾರಿ ಅಧಿಕಾರಿಗಳ ಅಕ್ರಮ ಸಂಪತ್ತು ವಶಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಆದೇಶ

Bar & Bench

ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳ ವಿಶೇಷವಾಗಿ ಪೊಲೀಸ್‌ ಅಧಿಕಾರಿಗಳ ಆಸ್ತಿ ಪರಿಶೀಲಿಸಿ, ಅಕ್ರಮ ಸಂಪತ್ತನ್ನು ವಶಪಡಿಸಿಕೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಶಿಸ್ತು ಕ್ರಮ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿ ಎಂ ರಾಜೇಂದ್ರನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಎಂ ಸುಬ್ರಮಣಿಯಮ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಭ್ರಷ್ಟಾಚಾರವು ಭಾರತದಲ್ಲಿ ಆಳಕ್ಕೆ ಇಳಿಯುತ್ತಿದ್ದು, ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ಪೊಲೀಸ್‌ ಸೇವೆ (ಐಪಿಎಸ್) ಮತ್ತು ನ್ಯಾಯಾಂಗ ಸೇವೆಯನ್ನೂ ಬಿಟ್ಟಿಲ್ಲ ಎಂದು ಆದೇಶ ಮಾಡುವಾಗ ಹೇಳಿದೆ. “ಭಾರತದಲ್ಲಿ ಭ್ರಷ್ಟಾಚಾರವು ಆಳವಾಗಿ ಬೇರೂರಿದೆ ಮತ್ತು ಅನಿಯಂತ್ರಿತ ಮತ್ತು ಅಡೆತಡೆಗಳಿಲ್ಲದೆ ಸಾಗುತ್ತಿದೆ. ನಮ್ಮ ಮಹಾನ್‌ ದೇಶವು ಹೇಗೆ ಆಳವಾಗಿ ಭ್ರಷ್ಟಾಚಾರದಲ್ಲಿ ಮುಳುಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಂದು ಭಾರತದಲ್ಲಿ ಭ್ರಷ್ಟಾಚಾರವು ಎಲ್ಲಾ ಹಂತಗಳು ಮತ್ತು ಎಲ್ಲಾ ಸೇವೆಗಳನ್ನು ವ್ಯಾಪಿಸಿದೆ, ಐಎಎಸ್, ಐಪಿಎಸ್ ಮತ್ತು ನ್ಯಾಯಾಂಗ ಸೇವೆಯನ್ನು ಸಹ ಉಳಿಸಿಲ್ಲ ಎಂಬುದರಲ್ಲಿ ಸಂದೇಹವೇ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

ರಾಜ್ಯದಾದ್ಯಂತ ನಿಯಮಿತವಾಗಿ ಪೊಲೀಸ್‌ ಅಧಿಕಾರಿಗಳು ಕಡ್ಡಾಯವಾಗಿ ಘೋಷಿಸಿರುವ ಆಸ್ತಿ ದಾಖಲೆ ಪರಿಶೀಲಿಸುವಂತೆ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ಪೀಠವು ನಿರ್ದೇಶಿಸಿದೆ. ಘೋಷಿಸಲಾದ ದಾಖಲೆಗಳ ಸತ್ಯಾಸತ್ಯತೆ, ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಪರಿಚಿತರ ಹೆಸರಿನಲ್ಲಿ ಖರೀದಿಸಿರುವ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.

ತಮಿಳುನಾಡು ಅಧೀನ ಪೊಲೀಸ್‌ ಅಧಿಕಾರಿಗಳ ನಡತೆ ನಿಯಮಗಳು ನಿಯಮ 9ರ ಪ್ರಕಾರ ನೇಮಕಾತಿ ಆದ ಮೂರು ತಿಂಗಳಲ್ಲಿ ಹಾಗೂ ಆನಂತರ ಐದು ವರ್ಷಗಳಿಗೊಮ್ಮೆ ಪೊಲೀಸ್‌ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಬೇಕು. “ಆಸ್ತಿ ವಿವರದಲ್ಲಿನ ವ್ಯತ್ಯಾಸ, ವೈರುಧ್ಯಗಳು ಕಂಡುಬಂದರೆ ಭ್ರಷ್ಟಾಚಾರದ ಮೂಲಕ ಸಂಪಾದಿಸಿದ ಅಕ್ರಮ ಸಂಪತ್ತನ್ನು ವಶಪಡಿಸಿಕೊಳ್ಳುವುದು ಅಲ್ಲದೇ ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.