Vikram Vedha  Twitter\Hrithik Roshan
ಸುದ್ದಿಗಳು

'ವಿಕ್ರಮ್ ವೇದ' ಹಿಂದಿ ರಿಮೇಕ್‌ನ ಪೈರಸಿ ತಡೆಯಲು 13,000 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿ ಮದ್ರಾಸ್ ಹೈಕೋರ್ಟ್ ಆದೇಶ

ಪ್ರತಿಬಂಧಕಾದೇಶ ನೀಡದಿದ್ದರೆ ಸಿನಿಮಾದ ಸಹ ನಿರ್ಮಾಪಕರಾದ ರಿಲಯನ್ಸ್‌ ಎಂಟರ್‌ಟೈನ್‌ಮೆಂಟ್‌ ಸ್ಟುಡಿಯೋಗೆ ತುಂಬಲಾರದ ನಷ್ಟ ಉಂಟಾಗಲಿದೆ ಎಂದ ನ್ಯಾಯಾಲಯ.

Bar & Bench

ಬಾಲಿವುಡ್‌ ನಟರಾದ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ 'ವಿಕ್ರಮ್ ವೇದ' ಚಿತ್ರದ ಹಿಂದಿ ರೀಮೇಕ್ ಅನ್ನು ಪೈರಸಿ ಮಾಡುವುದನ್ನು ತಡೆಯಲು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ 13,000 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಆದೇಶಿಸಿದೆ.

ಸಿನಿಮಾದ ಸಹ ನಿರ್ಮಾಪಕ ಸಂಸ್ಥೆಯಾದ ರಿಲಯನ್ಸ್‌ ಎಂಟರ್‌ಟೈನ್‌ಮೆಂಟ್‌ ಸ್ಟುಡಿಯೊ ಸಲ್ಲಿಸಿದ್ದ ದಾವೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಸುಂದರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಸೆಪ್ಟೆಂಬರ್‌ 30ರಂದು ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ.

ಸಿನಿಮಾ ಪ್ರಸರಣ, ಸಂವಹನ ಮತ್ತು ಪ್ರದರ್ಶನ ನಿರ್ಬಂಧಿಸುವ ನಿಟ್ಟಿನಲ್ಲಿ ಕೃತಿಚೌರ್ಯ ಮಾಡದಂತೆ ತಡೆಯಲು ಕೆಲವು ಗುರುತಿಸಿಲ್ಲದ ವೆಬ್‌ಸೈಟ್‌ಗಳೂ ಸೇರಿದಂತೆ ಹಲವು ವೆಬ್‌ಸೈಟ್‌ಗಳಿಗೆ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ. ಸಾರ್ವಜನಿಕ ವೀಕ್ಷಣೆಯ ಸಲುವಾಗಿ, ನಕಲು ಮಾಡಿಕೊಳ್ಳಲು, ವಿತರಣೆ ಮಾಡುವ ಸಲುವಾಗಿಯಾಗಲಿ ಯಾವುದೇ ವೆಬ್‌ಸೈಟ್‌ ಅಥವಾ ವ್ಯಕ್ತಿಗತವಾಗಿ ಯಾರೊಬ್ಬರೂ ಸಿನಿಮಾದ ಯಾವುದೇ ಭಾಗವನ್ನು ರೆಕಾರ್ಡ್‌ ಮಾಡುವಂತಿಲ್ಲ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ತಾನು ಸಾಕಷ್ಟು ಹಣವನ್ನು ಸಿನಿಮಾಗೆ ಹೂಡಿಕೆ ಮಾಡಿದ್ದು, ದೇಶಾದ್ಯಂತ 3,000 ಚಿತ್ರ ಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ ಎಂದು ರಿಲಯನ್ಸ್‌ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ. ಸಿನಿಮಾದ ಸಹ ನಿರ್ಮಾಪಕರಾಗಿದ್ದು, ಸಿನಿಮಾದ ಮೇಲೆ ಕಾನೂನಾತ್ಮಕ ಹಕ್ಕು ಹೊಂದಿದ್ದು, ಕೃತಿಸ್ವಾಮ್ಯದ ಬಗ್ಗೆ ಆತಂಕವಿದೆ ಎಂದು ವಿವರಿಸಲಾಗಿತ್ತು.

ಎಲ್ಲಾ ಪಕ್ಷಕಾರರಿಗೂ ನೋಟಿಸ್‌ ಜಾರಿ ಮಾಡುವುದರಿಂದ ಮಧ್ಯಂತರ ಆದೇಶ ನೀಡುವ ಉದ್ದೇಶವನ್ನೇ ಸೋಲಿಸುತ್ತದೆ. ಹೀಗಾಗಿ, ಆರು ವಾರಗಳ ಕಾಲ ಪ್ರತಿಬಂಧಕಾದೇಶ ನೀಡಲಾಗಿದೆ ಎಂದು ನ್ಯಾಯಮೂರ್ತಿ ಸುಂದರ್‌ ಹೇಳಿದ್ದಾರೆ.