Madurai bench of Madras High Court  
ಸುದ್ದಿಗಳು

ವಿದ್ಯಾರ್ಥಿಗಳಿಂದ ವೈಯಕ್ತಿಕ ಮಾಹಿತಿ ಸಂಗ್ರಹ: ತಮಿಳುನಾಡು ಸರ್ಕಾರದ ಕ್ರಮವನ್ನು ರದ್ದುಪಡಿಸಿದ ಮದ್ರಾಸ್‌ ಹೈಕೋರ್ಟ್‌

ಕಳಂಕಿತ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳ ನೈತಿಕತೆಯನ್ನು ಕುಗ್ಗಿಸುವುದು ಅಧಿಕಾರದ ಸಂಪೂರ್ಣ ದುರುಪಯೋಗ ಎಂದು ಈ ನ್ಯಾಯಾಲಯವು ತಿಳಿದಿದೆ ಎಂದ ಪೀಠ.

Bar & Bench

ಮಾದರಿ ಶಾಲೆಗಳಲ್ಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಮಾಜಿಕ ಹಿನ್ನೆಲೆಗೆ ಸಂಬಂಧಿಸಿದ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಲು ಮುಂದಾಗಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಇತ್ತೀಚೆಗೆ ರದ್ದುಗೊಳಿಸಿ, ಅಂತಹ ಕ್ರಮವನ್ನು ಗೋಪ್ಯತೆಯ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದೆ [ಅಮೀರ್ ಅಲಂ Vs ತಮಿಳುನಾಡು ರಾಜ್ಯ].

ನ್ಯಾಯಮೂರ್ತಿಗಳಾದ ಜಿ ಜಯಚಂದ್ರನ್ ಮತ್ತು ಕೆ ಕೆ ರಾಮಕೃಷ್ಣನ್ ಅವರನ್ನೊಳಗೊಂಡ ಪೀಠವು, ಸ್ಪಷ್ಟ ಉದ್ದೇಶವಿಲ್ಲದೆ ಶಾಲಾ ವಿದ್ಯಾರ್ಥಿಗಳಿಂದ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದು ಅವರ ಗೊಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ದುರ್ಬಲ ಹಿನ್ನೆಲೆಯ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

"ಸಂಗ್ರಹಿಸಲು ಪ್ರಯತ್ನಿಸಲಾದ ಮಾಹಿತಿ ಮತ್ತು ಅದನ್ನು ದಾಖಲಿಸಲಿರುವ ವಿಧಾನವು ನಮ್ಮ ಅಭಿಪ್ರಾಯದಲ್ಲಿ ಸಂಪೂರ್ಣವಾಗಿ ಗೌಪ್ಯತೆಯ ಉಲ್ಲಂಘನೆಯಾಗಿದೆ. ಅಲ್ಲದೆ, ಸರ್ಕಾರವು ನಡೆಸುತ್ತಿರುವ ಮಾದರಿ ಶಾಲೆಯಲ್ಲಿ ತಮ್ಮ ಅಧ್ಯಯನವನ್ನು ನಡೆಸುತ್ತಿರುವ ವಿದ್ಯಾರ್ಥಿಗಳಿಂದ ಸಂಗ್ರಹಿಸಲು ಯತ್ನಿಸುವ ಅಂತಹ ಮಾಹಿತಿಯು ಮಾದರಿ ಶಾಲೆಯ ವಿದ್ಯಾರ್ಥಿಗಳೊಡನೆ ನಡೆಸುವ ಸ್ಪಷ್ಟ ತಾರತಮ್ಯದ ಹಾಗೂ ಅನುಚಿತ ನಡವಳಿಕೆಯಾಗಿದೆ" ಎಂದು ಜನವರಿ 5 ರ ತೀರ್ಪಿನಲ್ಲಿ ಹೇಳಿದೆ.

ಈ ಕ್ರಮವು ಕಳಂಕಿತ ಸಾಮಾಜಿಕ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳ ನೈತಿಕತೆಯನ್ನು ಕುಗ್ಗಿಸುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

"ಕಳಂಕಿತ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳ ನೈತಿಕತೆಯನ್ನು ಕುಗ್ಗಿಸುವುದು ಅಧಿಕಾರದ ಸಂಪೂರ್ಣ ದುರುಪಯೋಗ ಎಂದು ಈ ನ್ಯಾಯಾಲಯವು ತಿಳಿದಿದೆ. ಆದ್ದರಿಂದ, ಆಕ್ಷೇಪಾರ್ಹ ಆದೇಶವನ್ನು ರದ್ದುಗೊಳಿಸಲಾಗಿದೆ ಮತ್ತು ಈ ರಿಟ್ ಅರ್ಜಿಯನ್ನು ಪುರಸ್ಕರಿಸಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಪ್ರಸಕ್ತ ಪ್ರಕರಣವು ಸೆಪ್ಟೆಂಬರ್ 4, 2025 ರಂದು ತಮಿಳುನಾಡು ಶಿಕ್ಷಣ ಇಲಾಖೆಯ ಮಾದರಿ ಶಾಲೆಯ ಸದಸ್ಯ ಕಾರ್ಯದರ್ಶಿ ಹೊರಡಿಸಿದ ನಿರ್ದೇಶನಕ್ಕೆ ಸಂಬಂಧಿಸಿದೆ.

ತಮಿಳುನಾಡು ಸರ್ಕಾರವು ನಡೆಸುವ ಮಾದರಿ ಶಾಲೆಗಳಲ್ಲಿ 9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ವೈಯಕ್ತಿಕ ಮತ್ತು ಸಾಮಾಜಿಕ ಹಿನ್ನೆಲೆ ಮಾಹಿತಿಯನ್ನು ಸಂಗ್ರಹಿಸಬೇಕೆಂದು ಆದೇಶದಲ್ಲಿ ಸೂಚಿಸಲಾಗಿತ್ತು.

ಸಂಗ್ರಹಿಸಲು ಕೋರಿದ ಮಾಹಿತಿಯು ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಗೆ ಸಂಬಂಧಿಸಿದ 25 ಪ್ರಶ್ನಾವಳಿ ಹೊಂದಿತ್ತು. ಇದರಲ್ಲಿ ಅವರು ನಿರಾಶ್ರಿತರು, ಅಲೆಮಾರಿಗಳು ಅಥವಾ ಜಿಪ್ಸಿ ಸಮುದಾಯಗಳು, ಅಥವಾ ಇತರ ರಾಜ್ಯಗಳಿಂದ ವಲಸೆ ಬಂದವರು ಅಥವಾ ದಮನಿತ ಜಾತಿಗಳ ಹಿನ್ನೆಲೆಯಿಂದ ಬಂದವರೇ ಎನ್ನುವುದನ್ನು ತಿಳಿದುಕೊಳ್ಳುವ ಪ್ರಶ್ನೆಗಳಿದ್ದವು. ಅಲ್ಲದೆ ವಿದ್ಯಾರ್ಥಿಗಳಿಗೆ ಲಿಂಗ ಅಸಮಾನತೆಯ ಸಮಸ್ಯೆಗಳಿವೆಯೇ? ಅವರು ದೌರ್ಜನ್ಯ ಮತ್ತು ಹಿಂಸಾಚಾರದ ಸಂತ್ರಸ್ತರೇ? ಅವರ ಕುಟುಂಬಗಳಲ್ಲಿ ಮಾದಕ ದ್ರವ್ಯ ಸೇವನೆಯ ಇತಿಹಾಸವಿದೆಯೇ ಎಂಬಂತಹ ಪ್ರಶ್ನೆಗಳನ್ನು ಸಹ ಪ್ರಶ್ನಾವಳಿ ಒಳಗೊಂಡಿತ್ತು.

ಶಿಕ್ಷಕರು ವಿದ್ಯಾರ್ಥಿಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಿ ಶಿಕ್ಷಣ ನಿರ್ವಹಣಾ ಮಾಹಿತಿ ವ್ಯವಸ್ಥೆ (ಇಎಂಐಎಸ್) ಪೋರ್ಟಲ್‌ಗೆ ಅಪ್‌ಲೋಡ್ ಮಾಡಬೇಕಾಗಿತ್ತು.

ಈ ಕ್ರಮವನ್ನು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯ ಮೂಲಕ ಪ್ರಶ್ನಿಸಲಾಗಿತ್ತು. ಕೋರಿದ ಮಾಹಿತಿಯ ಸ್ವರೂಪ ಮತ್ತು ಅದರ ಸಂಗ್ರಹಣಾ ವಿಧಾನವು ವಿದ್ಯಾರ್ಥಿಗಳ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದರು. ಈ ಬಗೆಯ ವರ್ಗೀಕರಣವು ದುರ್ಬಲ ಹಿನ್ನೆಲೆಯ ಮಕ್ಕಳು ಕಳಂಕ ಮತ್ತು ತಾರತಮ್ಯಕ್ಕೆ ಒಳಗಾಗುವಂತೆ ಮಾಡಲಿದೆ ಎಂದು ಅಕ್ಷೇಪಿಸಲಾಗಿತ್ತು.

ಇದಕ್ಕೆ ಪ್ರತಿಯಾಗಿ ಮಾದರಿ ಶಾಲೆಗಳ ಪ್ರಾಧಿಕಾರವು ಈ ಮಾಹಿತಿಯಿಂದಾಗಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡಬಹುದು ಎಂದು ಸಮರ್ಥಿಸಿತ್ತು. ಆದರೆ, ನ್ಯಾಯಾಲಯವು ಈ ಉತ್ತರದಿಂದ ತೃಪ್ತವಾಗಲಿಲ್ಲ.

ಈ ಬಗೆಯ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದರಿಂದ ಯಾವ ಉದ್ದೇಶವನ್ನು ಪೂರೈಸಲಾಗುತ್ತದೆ ಎಂಬುದನ್ನು ಮಾದರಿ ಶಾಲಾ ಅಧಿಕಾರಿಗಳನ್ನು ಪ್ರತಿನಿಧಿಸುವ ವಕೀಲರಿಗೆ ವಿವರಿಸಲು ಸಾಧ್ಯವಾಗಲಿಲ್ಲ ಎಂದು ಪೀಠ ಹೇಳಿತು.

ಅಲ್ಲದೆ, ಮಾದರಿ ಶಾಲಾ ಅಧಿಕಾರಿಗಳು ಪೋಷಕರ ಪಾತ್ರದಲ್ಲಿ (ಪೇರೆಂಟ್ಸ್‌ ಪ್ಯಾಟ್ರಿಯೆ) ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದೆ ಎಂದು ನೀಡಿದ ಸಮರ್ಥನೆಯನ್ನು ಸಹ ನ್ಯಾಯಾಲಯ ತಿರಸ್ಕರಿಸಿತು.

"ಮಾಹಿತಿ ಸಂಗ್ರಹದಿಂದ ವಿದ್ಯಾರ್ಥಿಗಳಿಗೆ ವಿಶೇಷ ಗಮನವನ್ನು ನೀಡಲು ಹೇಗೆ ಸಾಧ್ಯವಾಗುತ್ತದೆ ಎನ್ನುವ ಕುರಿತು ವಿವರಿಸಲಾಗಿಲ್ಲ. ಮಾಹಿತಿಯು ಬಹಳ ಸೂಕ್ಷ್ಮವಾಗಿದೆ ಮತ್ತು ಅವರು ಸಂಗ್ರಹಿಸಲಿರುವ ವಿಧಾನವು ಅಗತ್ಯವಾಗಿ ಯುವ ವಿದ್ಯಾರ್ಥಿಗಳ ಖಾಸಗಿತನಕ್ಕೆ ಒಳಪಡುತ್ತದೆ" ಎಂದು ನ್ಯಾಯಾಲಯವು ಆಕ್ಷೇಪಿತ ನಿರ್ದೇಶನವನ್ನು ರದ್ದುಗೊಳಿಸುವ ವೇಳೆ ಅಭಿಪ್ರಾಯಪಟ್ಟಿತು.