ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರ ವಿರುದ್ಧ ಜಾತಿ ಮತ್ತು ಕೋಮು ಪಕ್ಷಪಾತದ ಆರೋಪ ಮಾಡಿದ್ದ ವಕೀಲ ವಾಂಚಿನಾಥನ್ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಸಾಮಾಜಿಕ ಮಾಧ್ಯಮದಲ್ಲಿನ ಚರ್ಚೆಯ ಮಟ್ಟವನ್ನು ನಿಯಂತ್ರಿಸುವ ಸಮಯ ಬಂದಿದೆ ಎಂದು ಎಚ್ಚರಿಕೆ ನೀಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಮೂರ್ತಿಗಳ ವಿರುದ್ಧ ಕೋಮು ಅಭಿಯಾನಗಳನ್ನು ಪ್ರಾರಂಭಿಸುವುದರಿಂದ ಅಂತಿಮವಾಗಿ ನ್ಯಾಯಾಂಗ ವ್ಯವಸ್ಥೆಯೇ ದುರ್ಬಲಗೊಳ್ಳುತ್ತದೆ ಎಂದು ನ್ಯಾಯಮೂರ್ತಿಗಳಾದ ಜಿ ಆರ್ ಸ್ವಾಮಿನಾಥನ್ ಮತ್ತು ಕೆ ರಾಜಶೇಖರ್ ಅವರಿದ್ದ ಪೀಠ ಹೇಳಿದೆ.
"ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ನ್ಯಾಯಾಂಗ ನಿಂದನೆ ಮಾಡುವುದು ಅಕ್ಷಮ್ಯ. ಇಂತಹ ಮಾನಹಾನಿಕರ ಪ್ರಚಾರಗಳ ಮೂಲಕ ಹಣ ದೋಚುವ ಚಾನೆಲ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಹಾಗೆ ಹೇಳಿಕೆ ನೀಡಿದ ವಕೀಲರು ವೃತ್ತಿಪರ ಅನುಚಿತ ವರ್ತನೆಯ ತಪ್ಪಿತಸ್ಥರು. ಲಕ್ಷ್ಮಣ ರೇಖೆ ಎನ್ನುವುದು ಒಂದಿದ್ದು ಅದನ್ನು ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ನ್ಯಾಯಾಲಯ ಹೇಳಿತು.
"ಶ್ರೀ ಎಸ್ ವಾಂಚಿನಾಥನ್ ಅವರು ತಮ್ಮನ್ನು ರಕ್ಷಿಸಲು ವಕೀಲರು ಮತ್ತು ನಿವೃತ್ತ ನ್ಯಾಯಮೂರ್ತಿಗಳ ಗುಂಪನ್ನು ಸಜ್ಜುಗೊಳಿಸಿದ್ದಾರೆ. ಇಂದು ನ್ಯಾಯಾಲಯ ಏನು ಹೇಳುತ್ತದೆ ಎಂಬುದನ್ನು ಕಾಯದೆ ಅವರೆಲ್ಲರೂ ಅಜಾಗರೂಕ ಹೇಳಿಕೆಗಳನ್ನು ನೀಡಿದ್ದಾರೆ. ಅನಗತ್ಯ ಮನವಿಗಳು, ಸಲಹೆಗಳು ಬಂದಿವೆ. ಉಪೇಕ್ಷೆಗೆ ಅವು ತಕ್ಕುದಾದುರಿಂದ ನಾವು ಅವುಗಳನ್ನು ನಿರ್ಲಕ್ಷಿಸುತ್ತಿದ್ದೇವೆ: ಎಂದು ನ್ಯಾಯಾಲಯ ಹೇಳಿದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ (ತಮಿಳು ಸಿನಿಮಾ ಜೈ ಭೀಮ್ ಖ್ಯಾತಿಯ) ಕೆ ಚಂದ್ರು ಅವರು ಈ ಕುರಿತು ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರ ಎಂದು ಕೂಡ ಅದು ಹೇಳಿತು.
ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ತೀರ್ಪು ನೀಡುವಾಗ ಕೋಮು ಮತ್ತು ಜಾತಿ ಪೂರ್ವಾಗ್ರಹದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಹಲವಾರು ಸಾಮಾಜಿಕ ಮಾಧ್ಯಮ ಹೇಳಿಕೆಗಳು ಮತ್ತು ವಿಡಿಯೋ ಸಂದರ್ಶನಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ವಾಂಚಿನಾಥನ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ವಕೀಲ ವಾಂಚಿನಾಥನ್ ಈ ಹೇಳಿಕೆಗಳಿಗೆ ಬದ್ಧರಾಗಿದ್ದಾರೆಯೇ ಅಥವಾ ಅವುಗಳನ್ನು ಹಿಂತೆಗೆದುಕೊಳ್ಳಲು ಬಯಸುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಲು ನ್ಯಾಯಾಲಯ ಕೇಳಿತ್ತು.
ನಿನ್ನೆ (ಜುಲೈ 28) ನೀಡಿದ್ದ ಆದೇಶದಲ್ಲಿ, ನ್ಯಾಯಾಧೀಶರು ತಮ್ಮ ನ್ಯಾಯಾಂಗ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ಮಾತ್ರವಲ್ಲದೆ ಭಯರಹಿತವಾಗಿ ನಿರ್ವಹಿಸಲು ಕೂಡ ಪ್ರಮಾಣ ವಚನ ಸ್ವೀಕರಿಸಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ತಮ್ಮ ಅನುಚಿತ ವರ್ತನೆಗಾಗಿ ವಕೀಲ ವಾಂಚಿನಾಥನ್ ಅವರನ್ನು ಭಾರತೀಯ ವಕೀಲರ ಪರಿಷತ್ತು ಈ ಹಿಂದೆ ಅಮಾನತುಗೊಳಿಸಿತ್ತು ಎಂದ ನ್ಯಾಯಾಲಯ ಅವರು ತಮ್ಮ ಹೇಳಿಕೆಗಳಿಗೆ ಬದ್ಧರಾಗಿದ್ದಾರೆಯೇ ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಂತಿಮವಾಗಿ ಸೂಕ್ತ ಆದೇಶ ನೀಡಲು ಅನುವಾಗವುಂತೆ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿ ಆದೇಶಿಸಿತ್ತು.