ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ವಿ. 
ಸುದ್ದಿಗಳು

ಎಂಟು ತಿಂಗಳಲ್ಲಿ 399 ಪಿಐಎಲ್‌ ವಿಲೇವಾರಿ ಮಾಡಿದ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಂಗಾಪುರ್‌ವಾಲಾ

ರಿಜಿಸ್ಟ್ರಿಯಲ್ಲಿ ಹಣ ಠೇವಣಿ ಇಟ್ಟು ನ್ಯಾಯಾಲಯದೆದುರು ಪ್ರಾಮಾಣಿಕತೆ ಸಾಬೀತುಪಡಿಸುವಂತೆ ನ್ಯಾ. ಗಂಗಾಪುರ್‌ವಾಲಾ ಅವರು ಕೆಲ ವೇಳೆ ಸೂಚಿಸುತ್ತಾರೆ. ಅರ್ಜಿ ಕ್ಷುಲ್ಲಕವಾಗಿದ್ದರೆ ಠೇವಣಿ ಇರಿಸಿದ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

Bar & Bench

ಮದ್ರಾಸ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಎಸ್ ವಿ ಗಂಗಾಪುರ್‌ವಾಲಾ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವಾದ ಮೇ 28, 2023ರಿಂದ ಈವರೆಗೆ ಉಚ್ಚ ನ್ಯಾಯಾಲಯದ ಪ್ರಧಾನ ಪೀಠಕ್ಕೆ 542 ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸಲ್ಲಿಸಲಾಗಿದ್ದು ಹೈಕೋರ್ಟ್ ರಿಜಿಸ್ಟ್ರಿ ಬಹಿರಂಗಪಡಿಸಿದ ಅಂಕಿಅಂಶಗಳ ಪ್ರಕಾರ, ಜನವರಿ 12, 2024ರ ಹೊತ್ತಿಗೆ, ಸಿಜೆ ಗಂಗಾಪುರ್‌ವಾಲಾ ಅವುಗಳಲ್ಲಿ 399 ಅರ್ಜಿಗಳನ್ನು ವಿಲೇವಾರಿ ಮಾಡಿದ್ದಾರೆ.

ಅಂದರೆ ಕಳೆದ ಎಂಟು ತಿಂಗಳ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಆಲಿಸಿದ ಪಿಐಎಲ್‌ಗಳಲ್ಲಿ ಶೇ 73.6 ರಷ್ಟು ವಿಲೇವಾರಿಯಾಗಿವೆ.

ಮದ್ರಾಸ್ ಹೈಕೋರ್ಟ್‌ 2022ರ ವಾರ್ಷಿಕ ವರದಿಯ ಪ್ರಕಾರ, ನ್ಯಾಯಾಲಯ ಆ ಸಾಲಿನಲ್ಲಿ ಕೈಗೆತ್ತಿಕೊಂಡಿದ್ದ 1,19,772 ರಿಟ್ ಅರ್ಜಿಗಳಲ್ಲಿ, ಕೇವಲ 49,971 ಅಥವಾ ಶೇ 41.72ರಷ್ಟು ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿದ್ದವು.

ಖುದ್ದು ಮುಖ್ಯ ನ್ಯಾಯಮೂರ್ತಿಗಳೇ ವಿವರಿಸುವ ಪ್ರಕಾರ ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಪಿಐಎಲ್‌ಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿರುವುದಕ್ಕೆ ಅವರು ಕ್ಷುಲ್ಲಕ ದಾವೆಗಳನ್ನು ಶೋಧಿಸುವ ಪರಿ ಕಾರಣ. ಹೊಸ ಪಿಐಎಲ್‌ ಸಲ್ಲಿಕೆಯಾದಾಗ ಅರ್ಜಿದಾರರು ನ್ಯಾಯಾಲಯದೆದರು ತಮ್ಮ ನೈಜ ಕಾಳಜಿ, ಪ್ರಾಮಾಣಿಕತೆ ಸಾಬೀತುಪಡಿಸುವಂತೆ ಸೂಚಿಸುತ್ತಾರೆ.

ಅರ್ಜಿದಾರರ ಹೇಳಿಕೆ ಸಮ್ಮತವಾಗದಿದ್ದರೆ ಪಿಐಎಲ್‌ ಆಲಿಸಲು ರಿಜಿಸ್ಟ್ರಿಯಲ್ಲಿ ಸ್ವಲ್ಪ ಮೊತ್ತವನ್ನು ಪೂರ್ವ ಷರತ್ತಿನ ರೂಪದಲ್ಲಿ ಠೇವಣಿ ಇಡುವಂತೆ ಸಿಜೆ ನಿರ್ದೇಶಿಸುತ್ತಾರೆ.

ಸುದೀರ್ಘವಾಗಿ ವಿಚಾರಣೆ ನಡೆದು ಅಂತಿಮವಾಗಿ ವಜಾಗೊಳ್ಳುವ ಪಿಐಎಲ್‌ಗಳನ್ನು ವಜಾಗೊಳಿಸುವುದಕ್ಕೆ ದಂಡ ವಿಧಿಸಲು ಕೂಡ ಅವರು ಪ್ರಸಿದ್ಧರು.

ಮುಖ್ಯ ನ್ಯಾಯಮೂರ್ತಿಗಳು ಪಿಐಎಲ್ ಗಳನ್ನು ದಾವೆ ಪಟ್ಟಿಯಲ್ಲಿ ಪಟ್ಟಿ ಮಾಡುವ ವಿಭಿನ್ನ ವ್ಯವಸ್ಥೆಯನ್ನು ಸಹ ಹೊಂದಿದ್ದಾರೆ. ಉದಾಹರಣೆಗೆ, ದೆಹಲಿ ಹೈಕೋರ್ಟ್‌ ರೀತಿ ಮದ್ರಾಸ್ ಹೈಕೋರ್ಟ್ ಪಿಐಎಲ್‌ಗಳಿಗೆ ಪ್ರತ್ಯೇಕ ದಿನವನ್ನು ನಿಗದಿಪಡಿಸಿಲ್ಲ.

ಪಿಐಎಲ್‌ ಪಟ್ಟಿ 1 ಕ್ರಿಯಾತ್ಮಕವಾಗಿದ್ದು ಪ್ರತಿದಿನ ಬದಲಾಗುತ್ತದೆ, ಪಟ್ಟಿ 2 ವಾರವಿಡೀ ಮುಂದುವರಿಯಲಿದ್ದು ಪಟ್ಟಿ 1ರಿಂದ ಎಷ್ಟು ಪ್ರಕರಣಗಳನ್ನು ಆ ದಿನ ಆಲಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಪಿಐಎಲ್‌ಗಳ ತ್ವರಿತ ವಿಲೇವಾರಿಗೆ ಇನ್ನೊಂದು ಮುಖ್ಯ ಕಾರಣ ಸಂಕ್ಷಿಪ್ತ ಆದೇಶಗಳನ್ನು ಹೊರಡಿಸುವ ನ್ಯಾ. ಗಂಗಾಪುರ್‌ವಾಲಾ ಅವರ ರೂಢಿ. ಅವರು ನೇರವಾದ ಎರಡು ಸಾಲಿನ ಆದೇಶಗಳನ್ನು ಹೊರಡಿಸುತ್ತಾರೆ, ಗೊಂದಲವನ್ನು ಕಡಿಮೆ ಮಾಡಲು ಇದು ನಮಗೆ ಸಹಾಯ ಮಾಡಿದೆ ಎನ್ನುತ್ತಾರೆ ಅವರೊಂದಿಗೆ ಪೀಠ ಹೊಂಚಿಕೊಳ್ಳುವ ನ್ಯಾ. ಚಕ್ರವರ್ತಿ.

ಕ್ಷುಲ್ಲಕ ಪಿಐಎಲ್ ಗಳನ್ನು ಫಿಲ್ಟರ್ ಮಾಡುವ ಮುಖ್ಯ ನ್ಯಾಯಮೂರ್ತಿಗಳ ಕಾರ್ಯತಂತ್ರವು ವಕೀಲ ಸಮುದಾಯಕ್ಕೂ ಅನುಕೂಲಕರವಾಗಿ ಪರಿಣಮಿಸಿದೆ.

ಮದ್ರಾಸ್ ಹೈಕೋರ್ಟ್‌ನಲ್ಲಿ ಹಲವಾರು ಪ್ರಕರಣಗಳಲ್ಲಿ ಅಮಿಕಸ್ ಕ್ಯೂರಿಯಾಗಿ ಕಾರ್ಯನಿರ್ವಹಿಸಿರುವ ವಕೀಲ ಶರತ್ ಚಂದ್ರನ್, "ಸಿಜೆ ಗಂಗಾಪುರ್‌ವಾಲಾ ಅವರು ಬಾಂಬೆ ಹೈಕೋರ್ಟ್‌ನ ಹಂಗಾಮಿ ಸಿಜೆ ಮತ್ತು ನಂತರ ಸಿಜೆ ಆಗಿದ್ದ ಅವಧಿಯಲ್ಲೂ ಇದೇ ರೀತಿಯ ಕ್ರಮಕ್ಕೆ ಹೆಸರುವಾಸಿಯಾಗಿದ್ದರು" ಎಂದು ನೆನೆದರು.

ಇತ್ತ, ಪಿಐಎಲ್‌ಗಳನ್ನು ವಿಲೇವಾರಿ ಮಾಡುವ ಮುಖ್ಯ ನ್ಯಾಯಮೂರ್ತಿಗಳ ವಿಧಾನ ಸಂಸ್ಥೆಗೆ ಪ್ರಯೋಜನಕಾರಿಯಾಗಿದ್ದು ನ್ಯಾಯಾಧೀಶರ ದಕ್ಷತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹಿರಿಯ ವಕೀಲ ಮತ್ತು ತಮಿಳುನಾಡಿನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ ರವೀಂದ್ರನ್ ಹೇಳಿದ್ದಾರೆ.