Senthil Balaji and Madras High Court 
ಸುದ್ದಿಗಳು

ಸೆಂಥಿಲ್ ಬಂಧನ: ಹೇಬಿಯಸ್ ಪ್ರಕರಣ ಮುಕ್ತಾಯಗೊಳಿಸಿದ ಮದ್ರಾಸ್ ಹೈಕೋರ್ಟ್; ತಮ್ಮ ಆದೇಶಕ್ಕೆ ಬದ್ಧ ಎಂದ ನ್ಯಾ. ನಿಶಾ

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯ ಪಕ್ಷಕಾರರು ಮೇಲ್ಮನವಿ ಸಲ್ಲಿಸಿದ್ದು ಸುಪ್ರೀಂ ಕೋರ್ಟ್ ಈಗಾಗಲೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಪೀಠ ಪ್ರಕರಣ ಮುಕ್ತಾಯಗೊಳಿಸಿತು,

Bar & Bench

ಉದ್ಯೋಗ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ತಮ್ಮ ಪತಿ, ತಮಿಳುನಾಡು ಸಚಿವ ವಿ ಸೆಂಥಿಲ್‌ ಅವರ ಬಂಧನ ಪ್ರಶ್ನಿಸಿ ಸೆಂಥಿಲ್‌ ಪತ್ನಿ ಎಸ್‌ ಮೇಘಲಾ ಅವರು ಸಲ್ಲಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ಮಂಗಳವಾರ ಮುಕ್ತಾಯಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯ ಪಕ್ಷಕಾರರು  ಮೇಲ್ಮನವಿ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ಈಗಾಗಲೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ನಿಶಾ ಬಾನು ಮತ್ತು ಡಿ ಭರತ ಚಕ್ರವರ್ತಿ ಅವರು ಮಂಗಳವಾರ ಪ್ರಕರಣವನ್ನು ಮುಕ್ತಾಯಗೊಳಿಸಿದರು.

ಆದ್ದರಿಂದ, ಸೆಂಥಿಲ್ ಬಾಲಾಜಿ ಅವರ ಕಸ್ಟಡಿ ಅವಧಿ ಪ್ರಾರಂಭವಾಗುವ ದಿನಾಂಕ  ಲೆಕ್ಕಹಾಕುವ ಸೀಮಿತ ವ್ಯಾಪ್ತಿಯಲ್ಲೂ ಸಹ, ಯಾವುದೇ ಹೊಸ ಆದೇಶ  ಹೊರಡಿಸದೆ ಇರಲು ಹೈಕೋರ್ಟ್ ಪೀಠ ನಿರ್ಧರಿಸಿತು.

ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಸೆಂಥಿಲ್‌ ಅವರನ್ನು ಇ ಡಿ  ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಹಿನ್ನೆಲೆಯಲ್ಲಿ ಸಚಿವರ ಕಸ್ಟಡಿ ಅವಧಿ ಯಾವಾಗ ಉಂಟಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ಕುರಿತಂತೆ ಯಾವುದೇ ಆದೇಶ ನೀಡುವುದು ಸುಪ್ರೀಂ ಕೋರ್ಟ್‌ಗೆ ಬಿಟ್ಟ ಸಂಗತಿ ಎಂದು ಮಂಗಳವಾರ ಹೈಕೋರ್ಟ್‌ ತಿಳಿಸಿತು.

ಸೆಂಥಿಲ್ ಅವರ ಬಂಧನವನ್ನು ಕಾನೂನುಬಾಹಿರ ಎಂದು ಪರಿಗಣಿಸಿ ಸಚಿವರನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದ ತನ್ನ ತೀರ್ಪಿಗೆ ತಾನು ಈಗಲೂ ಬದ್ಧ ಎಂದು ನ್ಯಾ. ಬಾನು ಈ ಸಂದರ್ಭದಲ್ಲಿ ತಿಳಿಸಿದರು.

ಆದರೂ ನ್ಯಾ. ಚಕ್ರವರ್ತಿ ಅವರು ಈ ಹಿಂದಿನ ವಿಚಾರಣೆ ವೇಳೆ ನಿಶಾ ಅವರ ತೀರ್ಪಿಗೆ ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೇಘಲಾ ಅವರು ಸಲ್ಲಿಸಿದ್ದ ಹೇಬಿಯಾಸ್‌ ಕಾರ್ಪಸ್‌ ಅರ್ಜಿಗೆ ಸಂಬಂಧಿಸಿದಂತೆ ಭಿನ್ನ ತೀರ್ಪು ಹೊರಬಿದ್ದಿತ್ತು.

"ಏನನ್ನೂ ಕೇಳುವ ಪ್ರಶ್ನೆಯೇ ಇಲ್ಲ. ಅವರನ್ನು (ಸೆಂಥಿಲ್ ಬಾಲಾಜಿ) ಬಿಡುಗಡೆ ಮಾಡಬೇಕು ಎಂದು ನಾನು ಈಗಾಗಲೇ ಹೇಳಿದ್ದೇನೆ. ಹಾಗಾಗಿ ಕಸ್ಟಡಿ ದಿನಾಂಕ ಅಥವಾ ಅವಧಿಯ ಬಗ್ಗೆ ನಾನು ಯಾವುದೇ ಆದೇಶವನ್ನು ಹೇಗೆ ರವಾನಿಸಲು ಸಾಧ್ಯ? ನಾನು ನನ್ನ ಆದೇಶಕ್ಕೆ ಬದ್ಧಳಾಗಿರುತ್ತೇನೆ ಎಂದು ಹೇಳಲು ಬಯಸುತ್ತೇನೆ. ಈಗ ಎರಡೂ ಕಡೆಯ ಪಕ್ಷಕಾರರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಹೇಳುವಂಥದ್ದು ಏನೂ ಇಲ್ಲ. ನಾವು ಪ್ರಕರಣವನ್ನು ಏಕೆ ಬಾಕಿ ಇಡಬೇಕು?" ಎಂದು ನಿನ್ನೆ ಪ್ರಕರಣವನ್ನು ಕೈಗೆತ್ತಿಕೊಂಡಾಗ ನ್ಯಾಯಮೂರ್ತಿ ಬಾನು ಹೇಳಿದರು.