Madras High Court, TVK flag, Vijay 
ಸುದ್ದಿಗಳು

ಕರೂರ್‌ ಕಾಲ್ತುಳಿತ ಪ್ರಕರಣ:‌ ಸ್ಥಳದಿಂದ ಪೇರಿಕಿತ್ತ ವಿಜಯ್‌ ಮತ್ತಿತರ ಟಿವಿಕೆ ನಾಯಕರಿಗೆ ಮದ್ರಾಸ್‌ ಹೈಕೋರ್ಟ್‌ ತರಾಟೆ

ಕಾಲ್ತುಳಿತದಂತಹ ಪರಿಸ್ಥಿತಿಯನ್ನು ನಿಭಾಯಿಸಲು ಟಿವಿಕೆ ತುರ್ತು ರಕ್ಷಣೆ ಮತ್ತು ಸಹಾಯದ ಪ್ರಯತ್ನಗಳನ್ನು ಮಾಡಬೇಕಾಗಿತ್ತು ಎಂದು ನ್ಯಾಯಮೂರ್ತಿ ಎನ್ ಸೆಂಥಿಲ್‌ ಕುಮಾರ್‌ ಹೇಳಿದರು

Bar & Bench

ತಮಿಳುನಾಡಿನ ಕರೂರಿನಲ್ಲಿ ಸೆಪ್ಟೆಂಬರ್ 27 ರಂದು ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದ ಸ್ಥಳದಿಂದ 'ಪಲಾಯನ' ಮಾಡಿದ್ದಕ್ಕಾಗಿ, ಅದರ ಸ್ಥಾಪಕ, ನಟ-ರಾಜಕಾರಣಿ ವಿಜಯ್ ಸೇರಿದಂತೆ ಟಿವಿಕೆ ನಾಯಕತ್ವವನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ಕಟುವಾಗಿ ಟೀಕಿಸಿದೆ.ಈ ಘಟನೆಯಲ್ಲಿ 41 ಜನರು ಸಾವನ್ನಪ್ಪಿದರು [ಪಿಎಚ್ ದಿನೇಶ್ ವಿರುದ್ಧ ಗೃಹ ಕಾರ್ಯದರ್ಶಿ, ತಮಿಳುನಾಡು ಸರ್ಕಾರ].

ಕಾಲ್ತುಳಿತದಂತಹ ಪರಿಸ್ಥಿತಿಯನ್ನು ನಿಭಾಯಿಸಲು ಟಿವಿಕೆ ತಕ್ಷಣದ ರಕ್ಷಣೆ ಮತ್ತು ಸಹಾಯದ ಪ್ರಯತ್ನಗಳನ್ನು ಮಾಡಬೇಕಾಗಿತ್ತು ಎಂದು ನ್ಯಾಯಮೂರ್ತಿ ಎನ್ ಸೆಂಥಿಲ್‌ ಕುಮಾರ್‌ ಹೇಳಿದರು.

"... ಸಭೆಯನ್ನು ಆಯೋಜಿಸಿದ ನಾಯಕ ವಿಜಯ್ ಮತ್ತು ಅವರ ರಾಜಕೀಯ ಪಕ್ಷದ ಸದಸ್ಯರು ಘಟನೆಯ ಸ್ಥಳದಿಂದ ಪಲಾಯನ ಮಾಡಿರುವುದು ನಿಜಕ್ಕೂ ವಿಷಾದನೀಯ... ಘಟನೆಯ ನಂತರ ಘಟನಾ ಸ್ಥಳದಿಂದ ಪಲಾಯನಗೈದ ಕಾರ್ಯಕ್ರಮದ ಆಯೋಜಕರು, ವಿಜಯ್ ಮತ್ತು ರಾಜಕೀಯ ಪಕ್ಷದ ಸದಸ್ಯರ ನಡವಳಿಕೆಯನ್ನು ಈ ನ್ಯಾಯಾಲಯವು ಬಲವಾಗಿ ಖಂಡಿಸುತ್ತದೆ" ಎಂದು ನ್ಯಾಯಮೂರ್ತಿಗಳು ಹೇಳಿದರು.

ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಲು ಟಿವಿಕೆ ಯಾವುದೇ "ಜವಾಬ್ದಾರಿಯ ಹೇಳಿಕೆ"ಯನ್ನು ಬಿಡುಗಡೆ ಮಾಡಲು ವಿಫಲವಾಗಿರುವುದು ಅದು ಜನರ ಜೀವದ ಬಗ್ಗೆ ಹಾಗೂ ಸಾರ್ವಜನಿಕ ಹೊಣೆಗಾರಿಕೆಯೆಡೆಗೆ ಟಿವಿಕೆ ಹೊಂದಿರುವ ನಿರ್ಲಕ್ಷ್ವನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಾಲಯವು ಹೇಳಿದೆ.

ವಿಜಯ್ ಅವರು ಸೆಪ್ಟೆಂಬರ್ 30 ರಂದು ಎಕ್ಸ್‌ನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಅದರಲ್ಲಿ ಅವರು ಘಟನೆಯು ಬಗ್ಗೆ ನೋವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ, ಟಿವಿಕೆ ಕಾರ್ಯಕರ್ತರ ವಿರುದ್ಧ ಯಾವುದೇ 'ಸೇಡಿನ ಕ್ರಮಕ್ಕೆ' ಮುಂದಾಗದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು ಎಂಬುದನ್ನು ಇಲ್ಲಿ ಗಮನಿಸಬಹುದು.

ಆದಾಗ್ಯೂ, ನ್ಯಾಯಾಲಯವು ನಿನ್ನೆ ಹೊರಡಿಸಿದ ಆದೇಶದಲ್ಲಿ, ಕರೂರ್‌ ರ‍್ಯಾಲಿ ಆಯೋಜಿಸಿದ್ದ ಟಿವಿಕೆ ನಾಯಕತ್ವ ಮತ್ತು ಸದಸ್ಯರು ದುರಂತ ನಡೆಯುತ್ತಿದ್ದಂತೆ ಕಾಲ್ತುಳಿತದ ಸ್ಥಳದಿಂದ ಹೊರ ನಡೆದಿರುವುದು ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟಿತು.

"ಆಘಾತಕಾರಿ ಸಂಗತಿಯೆಂದರೆ, ರಾಜಕೀಯ ಪಕ್ಷದ ನಾಯಕ ಸೇರಿದಂತೆ ಕಾರ್ಯಕ್ರಮದ ಆಯೋಜಕರು ತಮ್ಮದೇ ಕಾರ್ಯಕರ್ತರು, ಅನುಯಾಯಿಗಳು ಮತ್ತು ಅಭಿಮಾನಿಗಳನ್ನು ತ್ಯಜಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಯಾವುದೇ ಪಶ್ಚಾತ್ತಾಪ, ಜವಾಬ್ದಾರಿ ಅಥವಾ ವಿಷಾದದ ಅಭಿವ್ಯಕ್ತಿಯೂ ಇಲ್ಲ" ಎಂದು ವಿಮರ್ಶಿಸಿತು.

ವಿಜಯ್ ಪ್ರಯಾಣಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾದ ಕಾಲ್ತುಳಿತದ ಸ್ಥಳದಲ್ಲಿ ನಡೆದ ಎರಡು ಅಪಘಾತಗಳಿಗೆ ಸಂಬಂಧಿಸಿದಂತೆ ರಾಜ್ಯವು ಇನ್ನೂ ಕ್ರಿಮಿನಲ್ ಪ್ರಕರಣಗಳನ್ನು ಏಕೆ ದಾಖಲಿಸಿಲ್ಲ ಎಂದೂ ಸಹ ಇದೇ ವೇಳೆ ಪೀಠವು ಪ್ರಶ್ನಿಸಿತು.

ಈ ವಿಷಯದಲ್ಲಿ ರಾಜ್ಯದ ತನಿಖೆ ಸರಿಯಾಗಿ ನಡೆದಿಲ್ಲ ಎಂದು ನ್ಯಾಯಮೂರ್ತಿ ಸೆಂಥಿಲ್‌ ಕುಮಾರ್ ಅತೃಪ್ತಿ ವ್ಯಕ್ತಪಡಿಸಿದರು.

"ಈ (ರಾಜ್ಯ ಸರ್ಕಾರದ) ತನಿಖೆಯ ಪ್ರಗತಿ ಅಥವಾ ಸ್ವಾತಂತ್ರ್ಯದ ಬಗ್ಗೆ ಈ ನ್ಯಾಯಾಲಯ ತೃಪ್ತಿ ಹೊಂದಿಲ್ಲ" ಎಂದು ಅವರು ಹೇಳಿದರು. ಆದ್ದರಿಂದ, ನ್ಯಾಯಾಲಯವು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಆದೇಶಿಸಿತು.

ಆದರೆ, ಎಸ್‌ಐಟಿ ತನಿಖೆಯ ಕುರಿತಾಗಿ ನ್ಯಾಯಾಲಯದ ಮುಂದೆ ದಾವೆದಾರರು ನಿರ್ದೇಶನವನ್ನು ಕೋರಿರಲಿಲ್ಲ. ದಾವೆದಾರರಾದ ಪಿ ಎಚ್ ​​ದಿನೇಶ್ ಎಂಬುವರು, ರೋಡ್‌ ಶೋಗಳ ವೇಳೆ ಅನುಸರಿಸಬೇಕಾದ ಸುರಕ್ಷತಾ ಪ್ರೋಟೋಕಾಲ್ ಅನ್ನು ಜಾರಿಗೆ ತರಲು ನಿರ್ದೇಶನಗಳನ್ನು ಕೋರಿದ್ದರು.

"ಪ್ರಸ್ತುತ ರಿಟ್ ಅರ್ಜಿಯಲ್ಲಿನ ಪ್ರಾರ್ಥನೆ ಸೀಮಿತವಾಗಿದ್ದರೂ, ಅಸಾಧಾರಣ ಸನ್ನಿವೇಶಗಳಿಂದಾಗಿ ರಿಟ್ ಅರ್ಜಿಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ, ಇದು ಅಸಾಧಾರಣ ಕ್ರಮಗಳನ್ನು ಅಗತ್ಯವಾಗಿಸುತ್ತದೆ. ಈ ನ್ಯಾಯಾಲಯವು ಕಣ್ಣು ಮುಚ್ಚಿ ಮೂಕ ಪ್ರೇಕ್ಷಕನಾಗಿ ಉಳಿಯಲು ಮತ್ತು ತನ್ನ ಸಾಂವಿಧಾನಿಕ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪ್ರಕರಣದ ಕುರಿತು ತನಿಖೆ ನಡೆಸಲು ರಚಿಸಿರುವ ಎಸ್‌ಐಟಿಯ ನೇತೃತ್ವವನ್ನು ಪೊಲೀಸ್ ಮಹಾನಿರ್ದೇಶಕ (ಉತ್ತರ ವಲಯ) ಆಸ್ರಾ ಗಾರ್ಗ್‌ ವಹಿಸಲಿದ್ದಾರೆ. ತಂಡದ ಇತರ ಸದಸ್ಯರಾಗಿ ನಾಮಕ್ಕಲ್ ಪೊಲೀಸ್ ವರಿಷ್ಠಾಧಿಕಾರಿ ವಿಮಲಾ (ಐಪಿಎಸ್) ಮತ್ತು ಸಿಎಸ್‌ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮಲಾದೇವಿ ಇರಲಿದ್ದಾರೆ. ಗಾರ್ಗ್‌ ಅವರು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಸದಸ್ಯರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ನ್ಯಾಯಾಲಯವು ಹೇಳಿದೆ.