ಜಾರಿ ನಿರ್ದೇಶನಾಲಯ, ದೆಹಲಿ 
ಸುದ್ದಿಗಳು

ಇ ಡಿ ಅಧಿಕಾರಿ ಅಂಕಿತ್ ತಿವಾರಿ ಶಾಸನಬದ್ಧ ಜಾಮೀನು ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಕಳೆದ ಫೆಬ್ರವರಿಯಲ್ಲಿ ತನಗೆ ಶಾಸನಬದ್ಧ ಜಾಮೀನು ನಿರಾಕರಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನು ತಿವಾರಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Bar & Bench

ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ಕಳೆದ ಡಿಸೆಂಬರ್‌ನಲ್ಲಿ ತಮಿಳುನಾಡು ವಿಚಕ್ಷಣಾ ಮತ್ತು ಷ್ಟಾಚಾರ ನಿಗ್ರಹ ನಿರ್ದೇಶನಾಲಯದಿಂದ (ಡಿವಿಎಸಿ) ಬಂಧಿತರಾಗಿದ್ದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿ ಅಂಕಿತ್ ತಿವಾರಿ ಸಲ್ಲಿಸಿದ್ದ ಶಾಸನಬದ್ಧ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ತನಗೆ ಶಾಸನಬದ್ಧ ಜಾಮೀನು ನಿರಾಕರಿಸಿದ ಸ್ಥಳೀಯ ನ್ಯಾಯಾಲಯದ ಆದೇಶ ಪ್ರಶ್ನಿಸಿ ತಿವಾರಿ ಸಲ್ಲಿಸಿದ್ದ ಮನವಿಯನ್ನು ಮಾರ್ಚ್ 15ರಂದು ಹೊರಡಿಸಿದ ಆದೇಶದಲ್ಲಿ, ಮದ್ರಾಸ್ ಹೈಕೋರ್ಟ್‌ ಮಧುರೈ ಪೀಠದ ನ್ಯಾಯಮೂರ್ತಿ ಎಂ ದಂಡಪಾಣಿ ಅವರು ವಜಾಗೊಳಿಸಿದರು.

ಜಾಮೀನು ಕೋರುವ ಅರ್ಜಿದಾರರ ವೈಯಕ್ತಿಕ ಸ್ವಾತಂತ್ರ್ಯ ಮಹತ್ವದ್ದಾಗಿದ್ದರೂ, ಪ್ರಸ್ತುತ ಪ್ರಕರಣದಲ್ಲಿ, ಡಿವಿಎಸಿ ತನ್ನ ತನಿಖೆ ಪೂರ್ಣಗೊಳಿಸಲು ಇನ್ನೂ 55 ದಿನ ಬಾಕಿ ಇರುವಂತೆ ಜನವರಿ 25 ರಂದು ಸುಪ್ರೀಂ ಕೋರ್ಟ್ ಪ್ರಕರಣದ ತನಿಖೆಗೆ ತಾತ್ಕಾಲಿಕವಾಗಿ ತಡೆ ನೀಡಿದ್ದರಿಂದ ಡಿವಿಎಸಿಗೆ ಈವರೆಗೆ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಇಂತಹ ಸಂದರ್ಭಗಳಲ್ಲಿ, ಹೈಕೋರ್ಟ್‌ ಕೈಗಳನ್ನು ಕಟ್ಟಹಾಕಲಾಗಿದ್ದು ತಿವಾರಿ ತಮ್ಮ ಜಾಮೀನು ಅರ್ಜಿಯ ಸಂದರ್ಭದಲ್ಲಿ ಅಂತಹ ತಡೆಯಾಜ್ಞೆಯನ್ನು ಹೇಗೆ ವ್ಯಾಖ್ಯಾನಿಸಬೇಕು ಎಂಬ ಕುರಿತು ಸ್ಪಷ್ಟೀಕರಣ ಪಡೆಯಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಉತ್ತಮ ಎಂದು ನ್ಯಾಯಮೂರ್ತಿ ದಂಡಪಾಣಿ ಹೇಳಿದರು.

₹ 20 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ತಿವಾರಿ ಅವರನ್ನು ಡಿವಿಎಸಿ ಬಂಧಿಸಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಈ ಹಿಂದೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಜನವರಿ 25ರಂದು ಮನವಿಯ ಬಗ್ಗೆ ನೋಟಿಸ್ ನೀಡಿದ್ದ ಸುಪ್ರೀಂ ಕೋರ್ಟ್‌ ಡಿವಿಎಸಿ ತನಿಖೆಗೆ ತಡೆ ನೀಡಿತ್ತು.

ಈ ವರ್ಷದ ಫೆಬ್ರವರಿ 6 ರಂದು ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ವಿಶೇಷ ನ್ಯಾಯಾಲಯ ಶಾಸನಬದ್ಧ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿತ್ತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Ankit Tiwari vs State.pdf
Preview