ಸೆರೆ ಹಿಡಿಯಲಾದ ಆನೆಗಳು ಇರುವ ದೇವಸ್ಥಾನಗಳು, ಆನೆ ಪಾರ್ಕ್‌ಗಳಲ್ಲಿ ಆನೆಗಳನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಔಪಚಾರಿಕತೆ ಕಡಿಮೆ ಇರುವ ಮುಕ್ತ ಪ್ರದೇಶದಲ್ಲಿ ವಿಚಾರಣೆ ನಡೆಸುವ ಸುಳಿವನ್ನು ಮದ್ರಾಸ್ ಹೈಕೋರ್ಟ್ ಗುರುವಾರ ನೀಡಿದೆ.
ಶ್ರೀರಂಗಂನ ರಂಗನಾಥಸ್ವಾಮಿ ದೇವಾಲಯದಲ್ಲಿ ಅಮಾನವೀಯವಾಗಿ ಆನೆಗಳನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ರಂಗರಾಜನ್ ನರಸಿಂಹನ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ ಡಿ ಆದಿಕೇಶವಲು ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
“ವಾಸ್ತವ ಸ್ಥಿತಿಯನ್ನು ಅರಿಯಲು ಈ ಪೀಠವು ಒಂದು ಆನೆ ಪಾರ್ಕ್‌ಗೆ ತೆರಳಿ ಅಲ್ಲಿಯೇ ವಿಚಾರಣೆ ನಡೆಸಲಿದೆ. ಅವುಗಳ ಕ್ಷೇಮವನ್ನು ನೋಡಿಕೊಳ್ಳಬೇಕಿದ್ದು, ಪರಿಸ್ಥಿತಿಯನ್ನು ಅಲ್ಲಿ ನಾವು ನೋಡಬೇಕಿದೆ. ಕೆಲವು ಸಂದರ್ಭದಲ್ಲಿ ಸಮಿತಿ ಅಥವಾ ಯಾವುದೇ ಒಬ್ಬ ವ್ಯಕ್ತಿಯನ್ನು ನಂಬಲಾಗದು. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಸಿಕೊಂಡು ಒಂದು ಭಾನುವಾರ ನಾವು ಈ ಕೆಲಸ ಮಾಡೋಣ. ಅಂದು ಅಲ್ಲಿಗೆ ತೆರಳಿ ಸ್ಥಿತಿಗತಿಯನ್ನು ಪರಿಶೀಲಿಸಿದಾಗ ವಾಸ್ತವ ಸ್ಥಿತಿಗತಿಯನ್ನು ಅರಿಯಲು ಸಾಧ್ಯವಾಗಲಿದೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಆನೆಗಳ ಹಿತಾಸಕ್ತಿ ಕಾಯುವ ವಿಶಾಲ ದೃಷ್ಟಿಯ ಹಿನ್ನೆಲೆಯಲ್ಲಿ ಮುಕ್ತವಾದ ಸ್ಥಳದಲ್ಲಿ, ಪ್ರಾಣಿಗಳ ಸಮ್ಮುಖದಲ್ಲಿ ದೇವಸ್ಥಾನ ಅಥವಾ ಬೇರೆ ಕಡೆ ಕಡಿಮೆ ಔಪಚಾರಿಕತೆ ಇರುವ ಕಡೆ ವಿಚಾರಣೆ ನಡೆಸಲಾಗುವುದು ಎಂದು ಗುರುವಾರ ಹೊರಡಿಸಲಾದ ಮಧ್ಯಂತರ ಆದೇಶದಲ್ಲಿಯೂ ಪೀಠ ಹೇಳಿದೆ. ಮುಕ್ತ ಸ್ಥಳದಲ್ಲಿ ನಡೆಯುವ ವಿಚಾರಣೆಯಲ್ಲಿ ಇಚ್ಛೆಯುಳ್ಳವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ ಎಂದು ಪೀಠ ಹೇಳಿದೆ.
ಸೆರೆ ಹಿಡಿಯಲಾದ ಆನೆಗಳ ಖಾಸಗಿ ಮಾಲೀಕತ್ವಕ್ಕೆ ತೆರೆ ಬೀಳಬೇಕು ಎಂದು ಪೀಠ ಹೇಳಿದ್ದು, “ಗಾಯ, ಊನತೆ ಹೊರತುಪಡಿಸಿ ಅದರಲ್ಲೂ ಅರಣ್ಯ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲೇ ಅವುಗಳ ಶುಶ್ರೂಷೆ ಮಾಡಬೇಕೆ ವಿನಾ ಅವುಗಳನ್ನು ವಶಕ್ಕೆ ಪಡೆಯುವುದು ಅಥವಾ ಅವುಗಳನ್ನು ಪಳಗಿಸುವುದನ್ನು ನಿಲ್ಲಿಸಬೇಕು” ಎಂಬ ತನ್ನ ಹಿಂದಿನ ನಿಲುವನ್ನು ಪೀಠವು ಪುನರುಚ್ಚರಿಸಿತು.
ಆನೆಗಳು ಮತ್ತು ಮಾವುತರನ್ನು ಪ್ರತ್ಯೇಕಿಸುವಂತಿಲ್ಲ ಎಂದು ಕಾನೂನಿನಲ್ಲಿ ಹೇಳಲಾಗಿದ್ದರೂ ದೇವಾಲಯದ ಕಾಂಕ್ರೀಟ್ ಕೊಠಡಿಯಲ್ಲಿ ಮಾವುತನಿಲ್ಲದೆ ಆನೆಗಳನ್ನು ಕೂಡಿ ಹಾಕಲಾಗಿದೆ ಎಂಬ ಅರ್ಜಿದಾರರ ಕಳಕಳಿಯನ್ನು ಪೀಠವು ಪರಿಗಣಿಸಿದೆ.
“ತನ್ನ ಸಾಕುಪ್ರಾಣಿಯನ್ನಾಗಿ ಮನುಷ್ಯನನ್ನು ಇಟ್ಟುಕೊಳ್ಳಲು ಹುಲಿ ಒಂದೊಮ್ಮೆ ಬಯಸಿದರೆ ಹೇಗೆ. ಒಂದೊಮ್ಮೆ ನನ್ನ ಬಂಗಲೆಯಿಂದ ನನ್ನನ್ನು ಹೊರದಬ್ಬುವಾಗ ಹುಲಿಯು ಅದೆಷ್ಟೇ ಪ್ರೀತಿ ತೋರಿದರೂ ಅದು ನನಗೆ ಇಷ್ಟವಾಗುವುದೇ?” ಎಂದು ಮುಖ್ಯ ನ್ಯಾಯಮೂರ್ತಿ ಮಾರ್ಮಿಕವಾಗಿ ಪ್ರಶ್ನಿಸಿದರು.
“ಪ್ರಾಣಿಯನ್ನು ಹಾಸಿಗೆ ಅಥವಾ ಹವಾನಿಯಂತ್ರಿತ ರೂಮಿನಲ್ಲಿ ಇಟ್ಟರೂ ಶ್ವಾನಕ್ಕೆ ಅದು ಬೇಕಾಗದಿರಬಹುದು. ಅದಕ್ಕೆ ತನ್ನದೇ ಆದ ಕಾಡಿನ ಗುಣವಿರುತ್ತದೆ. ಶ್ವಾನಕ್ಕೆ ಮತ್ತೇನೋ ಬೇಕಿರುತ್ತದೆ” ಎಂದರು.
“ಪರಿಸ್ಥಿತಿ ಹೇಗಿದೆಯೋ ನಮಗೆ ಗೊತ್ತಿಲ್ಲ. ಆದರೆ, ಧರ್ಮದ ಹೆಸರಿನಲ್ಲಿ ಕಾಡಿಗೆ ಹೊಂದಿಕೊಂಡಿರುವ ಆನೆಗಳನ್ನು ಸಂಪನ್ಮೂಲವಿದ್ದರೂ ಇಡೀ ದಿನ ಕಾಂಕ್ರೀಟ್ ಪ್ರದೇಶದಲ್ಲಿ ಬಂಧಿಸಿಡುವುದಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಶ್ರೀರಂಗಂ ದೇವಸ್ಥಾನವನ್ನು ಪ್ರತಿನಿಧಿಸುತ್ತಿರುವ ವಕೀಲರು “ಪ್ರತಿ ದಿನ ಆನೆಗಳು ನದಿಯ ಬಳಿಗೆ ವಾಯುವಿಹಾರಕ್ಕೆ ತೆರಳುತ್ತವೆ. ಅರ್ಜಿದಾರರು ಹೇಳಿರುವಂತೆ ಅವುಗಳನ್ನು ಕೊಠಡಿಗೆ ಸೀಮಿತಗೊಳಿಸಲಾಗುತ್ತಿಲ್ಲ. ಇದೆಲ್ಲವನ್ನೂ ನ್ಯಾಯಾಲಯಕ್ಕೆ ದಾಖಲೆಯಲ್ಲಿ ಸಲ್ಲಿಸಲಾಗುವುದು” ಎಂದರು.
“ವನ್ಯ ಪ್ರಾಣಿಗಳ ಬಗ್ಗೆ ಸಹಾನುಭೂತಿ ಹೊಂದಬೇಕಿದೆ. ಪೀಠವು ಸಮಯ ವ್ಯರ್ಥ ಮಾಡುತ್ತಿಲ್ಲ. ನಾವು ತೋರುವ ಕರುಣೆಗೆ ಯಾವುದೇ ನಿರ್ದೇಶನ ಪರ್ಯಾಯವಾಗುವುದಿಲ್ಲ. ಕಠಿಣವಾದದ್ದು ಸೇರಿದಂತೆ ಹತ್ತು ನಿರ್ದೇಶನಗಳನ್ನು ನಾವು ಹೊರಡಿಸಬಹುದು…. ನಿಮ್ಮೆಲ್ಲರಿಗೂ ನಾವು ಕೋರುವುದೇನೆಂದರೆ ಇದು ಎದುರಾಳಿಯ ವಿಚಾರವಲ್ಲ. ಇದು ಆನೆ ವರ್ಸಸ್ ದೇವಸ್ಥಾನದ ವಿಚಾರವಲ್ಲ… ಅವುಗಳಿಗೆ ಅಗತ್ಯವಾದ ಶುಶ್ರೂಷೆ ಸಿಗುವ ವಾತಾವರಣವನ್ನು ನಾವು ಸೃಷ್ಟಿಸಬೇಕು” ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.
“ಸಾಕಷ್ಟು ಮಂದಿ ಆನೆಗಳನ್ನು ಪ್ರೀತಿಸಬಹುದು, ಅದರಲ್ಲೂ ಕೆಲವು ಅಪವಾದಗಳಿವೆ. ನೀವು ಪ್ರೀತಿಸಿದರೂ, ಏನು ಅಗತ್ಯ ಎಂಬುದರ ಬಗ್ಗೆ ನೀವು ಸುಶಿಕ್ಷಿತರಲ್ಲದಿದ್ದರೂ ನಿಮ್ಮ ಪ್ರೀತಿಯು ಬೇರೆಯದೇ ಪರಿಣಾಮ ಉಂಟು ಮಾಡಬಹುದು” ಎಂದರು.
“ಸೆರೆ ಹಿಡಿಯಲಾದ ಆನೆಗಳ ದೈನಂದಿನ ಪ್ರಕ್ರಿಯೆ ಹೇಗಿರಬೇಕು ಎಂಬುದರ ಕುರಿತು ತಜ್ಞರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸಲಹೆ ಪಡೆದುಕೊಂಡು ಧಾರ್ಮಿಕ ಮತ್ತು ದತ್ತಿ ಇಲಾಖೆ ಜೊತೆ ಸಮನ್ವಯ ಸಾಧಿಸಬೇಕು. ಬಹುಹಿಂದೆಯೇ ಸೆರೆ ಹಿಡಿಯಲಾದ ಆನೆಗಳನ್ನು ಮತ್ತೆ ಕಾಡಿಗೆ ಅಟ್ಟಲಾಗದು ಎಂಬುದು ದಿಟವಾದರೂ ದೇವಸ್ಥಾನಗಳು ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ದೊಡ್ಡ ಪ್ರಾಣಿಗಳನ್ನು ನಿಯಮಬದ್ಧವಾಗಿ ನೋಡಿಕೊಳ್ಳಲಾಗುತ್ತಿದೆ ಎಂಬುದನ್ನು ಖಾತರಿಪಡಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ವಿವಿಧ ದೇವಾಲಯಗಳಲ್ಲಿರುವ ಆನೆಗಳಿಗೆ ಸಂಬಂಧಿಸಿದಂತೆ ಎಷ್ಟು ಮಾವುತರು ಇದ್ದಾರೆ ಎಂಬ ಅಂಶವನ್ನು ಒಳಗೊಂಡು ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಪ್ರಧಾನ ಅರಣ್ಯ ರಕ್ಷಕರಿಗೆ ಆದೇಶಿಸಿರುವ ಪೀಠವು ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.