ಸುದ್ದಿಗಳು

ಎಲ್ಲರಿಗೂ ಹಿಂದಿ ಅಥವಾ ಇಂಗ್ಲಿಷ್‌ ತಿಳಿದಿರಬೇಕೆಂದು ಕೇಂದ್ರ ನಿರೀಕ್ಷಿಸುವಂತಿಲ್ಲ: ಮದ್ರಾಸ್‌ ಹೈಕೋರ್ಟ್‌

ಎಲ್ಲಾ ಅಧಿಸೂಚನೆಗಳನ್ನೂ ಆಯಾ ರಾಜ್ಯ ಭಾಷೆಗಳಲ್ಲಿ ಕೇಂದ್ರ ಸರ್ಕಾರವು ಹೊರಡಿಸಬೇಕು ಎಂದು ಈ ನ್ಯಾಯಾಲಯವು ನಿರೀಕ್ಷಿಸುತ್ತದೆ. ಇಲ್ಲದೆ ಹೋದರೆ, ಅಧಿಸೂಚನೆಯ ಮೂಲ ಉದ್ದೇಶಕ್ಕೇ ಸೋಲಾಗಲಿದೆ.

Bar & Bench

ಎಲ್ಲ ರಾಜ್ಯಗಳ ಪ್ರಾದೇಶಿಕ ಭಾಷೆಗಳನ್ನು ಕೇಂದ್ರ ಸರ್ಕಾರ ಗೌರವಿಸಬೇಕು. ಎಲ್ಲರಿಗೂ ಹಿಂದಿ ಅಥವಾ ಇಂಗ್ಲಿಷ್‌ ತಿಳಿದಿರಬೇಕು ಎಂದು ಅದು ನಿರೀಕ್ಷಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ ಹೇಳಿದೆ.

ಪರಿಸರದ ಮೇಲೆ ಪರಿಣಾಮ ಬೀರುವಂತಹ ಚಟುವಟಿಕೆಗಳ ಕುರಿತಾದ ಅಧಿಸೂಚನೆಗಳ ವಿಚಾರ ಬಂದಾಗ ಕೇಂದ್ರ ಸರ್ಕಾರವು ಕೇವಲ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರವೇ ಸಂವಹನ ನಡೆಸಬಾರದು. ಅಂತಹ ಅಧಿಸೂಚನೆಗಳನ್ನು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಹೊರಡಿಸಬೇಕು. ಇಲ್ಲವಾದರೆ, ಅಂತಹ ಅಧಿಸೂಚನೆಗಳನ್ನು ಹೊರಡಿಸುವುದರ ಉದ್ದೇಶವೇ ವಿಫಲವಾಗುತ್ತದೆ ಎಂದು ನ್ಯಾ. ಎನ್‌ ಕಿರುಬಾಕರನ್‌ ಮತ್ತು ಬಿ ಪುಗಳೇಂದಿ ನೇತೃತ್ವದ ಮದ್ರಾಸ್‌ ಹೈಕೋರ್ಟ್ ಪೀಠವು ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಮುಂದುವರೆದು ಪೀಠವು, “ಎಷ್ಟೇ ಆದರೂ, ಭಾಷೆಗಳು ಜನರ ಸಂವಹನದ ಮಾಧ್ಯಮಗಳಾಗಿವೆ. ಪ್ರತಿಯೊಂದು ರಾಜ್ಯದಲ್ಲಿಯೂ ಅಲ್ಲಿನ ಜನರಿಂದ ಆಡಲ್ಪಡುವ, ಬಳಸಲ್ಪಡುವ ಭಾಷೆಗಳು ಕಾನೂನಿನ ಮುಂದೆ ಸರಿಸಮಾನವಾಗಿವೆ. ಯಾವುದೇ ಭಾಷೆಯೂ ಮೇಲಲ್ಲ, ಯಾವುದೇ ಭಾಷೆಯೂ ಕೀಳಲ್ಲ,” ಎಂದು ಪೀಠವು ಅಭಿಪ್ರಾಯಪಟ್ಟಿತು.

ಪ್ರತಿಯೊಂದು ರಾಜ್ಯದಲ್ಲಿಯೂ ಅಲ್ಲಿನ ಜನರಿಂದ ಆಡಲ್ಪಡುವ, ಬಳಸಲ್ಪಡುವ ಭಾಷೆಗಳು ಕಾನೂನಿನ ಮುಂದೆ ಸರಿಸಮಾನವಾಗಿವೆ. ಯಾವುದೇ ಭಾಷೆಯೂ ಮೇಲಲ್ಲ, ಯಾವುದೇ ಭಾಷೆಯೂ ಕೀಳಲ್ಲ.
ಮದ್ರಾಸ್‌ ಹೈಕೋರ್ಟ್‌

ಕನ್ಯಾಕುಮಾರಿ ವನ್ಯಜೀವಿ ಅಭಯಾರಣ್ಯದ ಪರಿಸರ ಸಂವೇದಿ ಪ್ರದೇಶದ ವ್ಯಾಪ್ತಿಯನ್ನು 0-10 ಕಿ.ಮೀ ಗಳಿಂದ 0-3 ಕಿ.ಮೀ ಗೆ ಇಳಿಸುವ ಸಂಬಂಧ ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತ್ತು. ಅಧಿಸೂಚನೆ ಹೊರಡಿಸಿದ ಬೆನ್ನಿಗೇ ಕೋವಿಡ್‌ ಸಾಂಕ್ರಾಮಿಕತೆಯ ಕಾರಣದಿಂದಾಗಿ ಲಾಕ್‌ಡೌನ್‌ ಹೇರಲ್ಪಟ್ಟಿದ್ದು ಹಾಗೂ ಅಧಿಸೂಚನೆಯು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುವುದು ಈ ಎರಡು ಅಂಶಗಳ ಪರಿಣಾಮ ಅಧಿಸೂಚನೆ ಹೊರಡಿಸಿದ 60 ದಿನಗಳೊಳಗೆ ಆಕ್ಷೇಪಣೆಯನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಈ ಕುರಿತು ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ತಿಳಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ನಡೆಸಿದ ಪೀಠವು ಅಧಿಸೂಚನೆಯು ಕೇವಲ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿರುವುದರ ಸಂಬಂಧ ಮೇಲಿನ ಅಂಶಗಳನ್ನು ಕೇಂದ್ರ ಸರ್ಕಾರಕ್ಕೆ ಒತ್ತಿ ಹೇಳಿತು.