ಸುದ್ದಿಗಳು

ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಮಗು ಜನನ: ಉಚಿತ ಶಿಕ್ಷಣ, ಜೀವನಾಂಶ ಒದಗಿಸಲು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕವೂ ಗರ್ಭಧರಿಸಿದ ಮಹಿಳೆಗೆ ₹ 3 ಲಕ್ಷ ಪರಿಹಾರ ನೀಡುವಂತೆ ನ್ಯಾ. ಬಿ ಪುಗಳೇಂದಿ ಅವರು ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದರು.

Bar & Bench

ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ₹ 3 ಲಕ್ಷ ಪರಿಹಾರ ನೀಡುವಂತೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದೆ [ವಾಸುಕಿ ಮತ್ತು ಕಾರ್ಯದರ್ಶಿ ನಡುವಣ ಪ್ರಕರಣ] .

ಮುಂದುವರೆದು, ಮಗುವಿಗೆ ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಬೇಕು. ಮಗು ಪದವೀಧರನಾಗುವವರೆಗೆ ಇಲ್ಲವೇ ಆತನಿಗೆ 21 ವರ್ಷ ವಯಸ್ಸಾಗುವವರೆಗೆ ಆತನನ್ನು ಬೆಳೆಸುವ ಖರ್ಚು ಪೂರೈಸುವುದಕ್ಕಾಗಿ ವಾರ್ಷಿಕ ₹ 1.2 ಲಕ್ಷ ಜೀವನಾಂಶ ನೀಡಬೇಕು ಎಂದೂ ನ್ಯಾಯಮೂರ್ತಿ ಬಿ ಪುಗಳೇಂದಿ ಅವರು ಏಪ್ರಿಲ್ 28ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದ್ದಾರೆ.

ಕುಟುಂಬ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ಮಹಿಳೆ ಮುಂದಾಗಿದ್ದು ತಮ್ಮ ಕಡೆಯಿಂದ ಯಾವುದೇ ನಿರ್ಲಕ್ಷ್ಯ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಾಧಿಕಾರಿಗಳ ಕರ್ತವ್ಯವಾಗಿತ್ತು ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಕುಟುಂಬ ಯೋಜನೆ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಹೊತ್ತ ವೈದ್ಯಾಧಿಕಾರಿಗಳು ಸಂಪೂರ್ಣ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸದೆ ತೋರಿದ ನಿರ್ಲಕ್ಷ್ಯದಿಂದಾಗಿ ರಾಷ್ಟ್ರೀಯ ಮಹತ್ವದ ಯೋಜನೆಗೆ ಧಕ್ಕೆಯಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

ಸರ್ಕಾರ ಈ ಸಂಬಂಧ ₹ 25 ಲಕ್ಷ ಪರಿಹಾರ ನೀಡಬೇಕೆಂದು ಕೋರಿ ಮಹಿಳೆ ಸಲ್ಲಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ದೂರುದಾರ ಮಹಿಳೆ ಗೃಹಿಣಿಯಾಗಿದ್ದು ಪತಿ ಕೃಷಿ ಕೂಲಿ ಕಾರ್ಮಿಕರಾಗಿದ್ದಾರೆ. ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು 2014ರಲ್ಲಿ ಆಕೆ ತೂತ್ತುಕುಡಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೂ 2015ರಲ್ಲಿ ಆಕೆ ಮತ್ತೆ ಗರ್ಭ ಧರಿಸಿದ್ದರು. ಇದನ್ನು ಪ್ರಶ್ನಿಸಿದಾಗ ʼಅನಗತ್ಯʼ ಭ್ರೂಣ ತೆಗೆಸಿಕೊಳ್ಳುವಂತೆ ವೈದ್ಯರು ಗರ್ಭಪಾತದ ಸಲಹೆ ನೀಡಿದ್ದರು. ಆದರೆ ದಂಪತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮೂರನೇ ಮಗುವನ್ನು ಸಾಕಲು ತನ್ನ ಬಳಿ ಸಾಕಷ್ಟು ಹಣವಿಲ್ಲ. ಸಂತಾನಹರಣ ಚಿಕಿತ್ಸೆ ಯಶಸ್ವಿಯಾಗದೇ ಇರುವುದಕ್ಕೆ ಆಸ್ಪತ್ರೆ ಮತ್ತು ವೈದ್ಯರು ಹೊಣೆ ಎಂದು ಆಕೆ ದೂರಿದ್ದರು.

ಆದರೆ ಈ ವಾದ ಅಲ್ಲಗಳೆದ ರಾಜ್ಯ ಸರ್ಕಾರ ವೈದ್ಯರ ಸಲಹೆ ಮತ್ತು ಔಷಧಗಳನ್ನು ಪಡೆಯಲು ಮಹಿಳೆ ಬಹುಶಃ ವಿಫಲರಾಗಿದ್ದಾರೆ. ಇಲ್ಲಿ ಯಾವುದೇ ಕರ್ತವ್ಯ ಲೋಪ ನಡೆದಿಲ್ಲ ಇಲ್ಲವೇ ಅರ್ಜಿದಾರರಿಗೆ ಯಾವುದೇ ನಷ್ಟ ಉಂಟಾಗಿಲ್ಲ, ಅದನ್ನು ಸರಿದೂಗಿಸಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಸರ್ಕಾರದ ವಾದ ಒಪ್ಪಲು ಒಲವು ತೋರದ ನ್ಯಾಯಾಲಯ “ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ವೈದ್ಯರು ನಡೆಸಿದ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಉಳಿದ ವಿಷಯಗಳು ಗೌಣವಾಗಿವೆ. ಅರ್ಜಿದಾರರ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ ಹಾಗೂ ಇತರ ಸಂದರ್ಭಗಳನ್ನು ಪರಿಗಣಿಸಿ, ಮೂರನೇ ಮಗುವನ್ನು ಬೆಳೆಸುವುದಕ್ಕೆ ಸಹಾಯ ಮಾಡಲು ಮಹಿಳೆಗೆ ಪರಿಹಾರ ಹಾಗೂ ಆರ್ಥಿಕ ಸಹಾಯ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತು.