Lawyers and Madras High Court  
ಸುದ್ದಿಗಳು

ಕಿರಿಯ ವಕೀಲರಿಗೆ ಮಾಸಿಕ 15ರಿಂದ 20 ಸಾವಿರ ರೂ ಸ್ಟೈಪೆಂಡ್‌: ವಕೀಲರ ಪರಿಷತ್ತು, ಸಂಘಗಳಿಗೆ ಮದ್ರಾಸ್‌ ಹೈಕೋರ್ಟ್‌ ಆದೇಶ

Bar & Bench

ತಮ್ಮಲ್ಲಿ ನೋಂದಣಿ ಮಾಡಿಕೊಂಡಿರುವ ಎಲ್ಲಾ ಕಿರಿಯ ವಕೀಲರಿಗೆ ₹ 15,000ದಿಂದ ₹ 20,000ವರೆಗೆ ಕನಿಷ್ಠ ಮಾಸಿಕ ಸ್ಟೈಪೆಂಡ್‌ ನೀಡಬೇಕು ಎಂದು ತಮಿಳುನಾಡು ಮತ್ತು ಪುದುಚೇರಿಯ ವಕೀಲರ ಪರಿಷತ್ತು ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವಕೀಲರ ಸಂಘಗಳಿಗೆ ಮದ್ರಾಸ್ ಹೈಕೋರ್ಟ್ ಬುಧವಾರ ಆದೇಶ ನೀಡಿದೆ.

ಚೆನ್ನೈ, ಮಧುರೈ ಹಾಗೂ ಕೊಯಮತ್ತೂರಿನಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ಕಿರಿಯ ವಕೀಲರಿಗೆ ಕನಿಷ್ಠ ₹20,000 ಮಾಸಿಕ ಸ್ಟೈಫಂಡ್ ನೀಡುವಂತೆ ಎಲ್ಲಾ ಸಂಘಗಳಿಗೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ವಕೀಲರ ಪರಿಷತ್ತಿಗೆ ನ್ಯಾಯಮೂರ್ತಿಗಳಾದ ಎಸ್.ಎಂ.ಸುಬ್ರಮಣ್ಯಂ ಮತ್ತು ಸಿ.ಕುಮಾರಪ್ಪನ್ ಅವರನ್ನೊಳಗೊಂಡ ಪೀಠ ಸೂಚಿಸಿದೆ.

ಅದೇ ರೀತಿ, ತಮಿಳುನಾಡು ಮತ್ತು ಪುದುಚೇರಿಯಲ್ಲಿನ ಉಳಿದ ನಗರಗಳಲ್ಲಿ ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ಕಿರಿಯ ವಕೀಲರಿಗೆ ಕನಿಷ್ಠ ಮಾಸಿಕ ₹ 15,000 ಸ್ಟೈಫಂಡ್ ನೀಡಬೇಕು ಎಂದು ಅದು ಹೇಳಿದೆ.

ರಾಜ್ಯದ ಮೂಲ ಜೀವನ ವೆಚ್ಚ ಮತ್ತು ಪ್ರಚಲಿತ ವೆಚ್ಚ ಸೂಚ್ಯಂಕ ಪರಿಗಣಿಸಿ ಕನಿಷ್ಠ ಸ್ಟೈಪೆಂಡ್‌ ಲೆಕ್ಕ ಹಾಕಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ತಮಿಳುನಾಡು ವಕೀಲರ ಪರಿಷತ್‌ ಪರ ವಾದ ಮಂಡಿಸಿದ ನ್ಯಾಯವಾದಿ ಸಿ ಕೆ ಚಂದ್ರಶೇಖರ್, ಕಿರಿಯ ವಕೀಲರಿಗೆ ವೇತನ ನೀಡುವುದಕ್ಕೆ ಪರಿಷತ್ತಿನ ಒಪ್ಪಿಗೆ ಇದೆ. ಆದರೆ ಅಂತಹ ಸುತ್ತೋಲೆ ಹೊರಡಿಸಲು ಎರಡು ತಿಂಗಳ ಕಾಲಾವಕಾಶ ನೀಡಬೇಕೆಂದು ಹೇಳಿದರು. ಆದರೆ, ನಾಲ್ಕು ವಾರಗಳಲ್ಲಿ ಸುತ್ತೋಲೆಗಳನ್ನು ಹೊರಡಿಸಿ ಜುಲೈ 10 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಪೀಠ ಪರಿಷತ್ತಿಗೆ ಸೂಚಿಸಿತು.

ಪುದುಚೇರಿ ವಕೀಲರ ಕಲ್ಯಾಣ ನಿಧಿಗೆ ಹಣ ಮಂಜೂರು ಮಾಡಲು ಪುದುಚೇರಿ ಸರ್ಕಾರಕ್ಕೆ ಆದೇಶ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿತು.

ಹಿರಿಯ ವಕೀಲರು ತಮ್ಮ ಬಳಿ ಕೆಲಸ ಮಾಡುವ ಕಿರಿಯ ವಕೀಲರಿಗೆ ಕನಿಷ್ಠ ಸ್ಟೈಫಂಡ್ ಕೂಡ ನೀಡುತ್ತಿಲ್ಲ. ಇದು ಶೋಷಣೆ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಪೀಠ ಜೂನ್ 6ರಂದು ಹೊರಡಿಸಿದ ಮತ್ತೊಂದು ಆದೇಶದಲ್ಲಿ ತಿಳಿಸಿತ್ತು.