Madras Bar Association 
ಸುದ್ದಿಗಳು

ಕುಡಿಯುವ ನೀರಿನ ನಿರಾಕರಣೆ: ರೂ.5 ಲಕ್ಷ ಪರಿಹಾರ ನೀಡಲು ಮದ್ರಾಸ್‌ ವಕೀಲರ ಒಕ್ಕೂಟಕ್ಕೆ ಹೈಕೋರ್ಟ್‌ ಆದೇಶ

ಖಂಡನಾರ್ಹವಾದ ಈ ಘಟನೆಯು 2012ರಲ್ಲಿ ನಡೆದಿದ್ದು, ವರ್ಗದ ಆಧಾರದಲ್ಲಿ ತಾರತಮ್ಯವನ್ನು ಎಸಗುವುದು ಸಹ 'ಅಸ್ಪೃಶ್ಯತೆ' ಆಗಿದೆ. ಇದು ಸಂವಿಧಾನವು ಖಾತರಿ ಪಡಿಸಿರುವ ಹಕ್ಕಿನ ನಿರಾಕರಣೆಯಾಗಿದೆ ಎಂದ ನ್ಯಾಯಾಲಯ.

Bar & Bench

ಒಕ್ಕೂಟದ ಸದಸ್ಯರಲ್ಲ ಎನ್ನುವ ಕಾರಣಕ್ಕೆ ವಕೀಲರೊಬ್ಬರಿಗೆ ಮತ್ತೊಬ್ಬ ವಕೀಲರು ನೀರು ಕುಡಿಯಲು ಬಿಡದೆ ಅಡ್ಡಿಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ₹5 ಲಕ್ಷ ಪರಿಹಾರ ಪಾವತಿಸಲು ಮದ್ರಾಸ್‌ ವಕೀಲರ ಒಕ್ಕೂಟಕ್ಕೆ (ಎಂಬಿಎ) ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದೆ. ಹಿಂದೆಂದೂ ಕಂಡುಕೇಳರಿಯದ ರೀತಿಯ ಆದೇಶವನ್ನು ನೀಡುವ ಮೂಲಕ ವರ್ಗಾಧಾರಿತ ತಾರತಮ್ಯವನ್ನು ಎಸಗುವುದು ಸಹ 'ಅಸ್ಪೃಶ್ಯತೆ' ಎಂದು ಸ್ಪಷ್ಟ ಶಬ್ದಗಳಲ್ಲಿ ನ್ಯಾಯಾಲಯವು ಹೇಳಿದೆ.

ಪ್ರಕರಣದ ಕುರಿತು ಗುರುವಾರ ತೀರ್ಪು ನೀಡಿದ ನ್ಯಾ. ಎಸ್‌ ಎಂ ಸುಬ್ರಮಣಿಯಂ ಅವರ ಪೀಠವು ಪರಿಹಾರದ ಮೊತ್ತವನ್ನು ಪ್ರಕರಣದಲ್ಲಿ ಅರ್ಜಿದಾರ ವಕೀಲರಾದ ಹಿರಿಯ ವಕೀಲ ಎಲಿಫೆಂಟ್‌ ಜಿ ರಾಜೇಂದ್ರನ್‌ ಅವರಿಗೆ ನೀಡುವಂತೆ ಒಕ್ಕೂಟಕ್ಕೆ ಸೂಚಿಸಿತು. ರಾಜೇಂದ್ರನ್‌ ಅವರ ಪುತ್ರ ಕಿರಿಯ ವಕೀಲ ಆರ್‌ ನೀಲ್‌ ರಷನ್‌ ಅವರನ್ನು ಒಕ್ಕೂಟದ ಕಚೇರಿಯಲ್ಲಿ ನೀರು ಕುಡಿಯದಂತೆ ಮತ್ತೊಬ್ಬ ಹಿರಿಯ ವಕೀಲ ಪಿ ಎಚ್‌ ಪಾಂಡಿಯನ್‌ ತಡೆದಿದ್ದರು. ನೀಲ್‌ ರಷನ್‌ ಅವರು ಒಕ್ಕೂಟದ ಸದಸ್ಯತ್ವವನ್ನು ಹೊಂದಿಲ್ಲ ಎನ್ನುವ ಕಾರಣವನ್ನು ನೀಡಿ ಅವರು ನೀರನ್ನು ಕುಡಿಯಲು ಪಾಂಡಿಯನ್‌ ನಿರಾಕರಿಸಿದ್ದರು.

ಖಂಡನಾರ್ಹವಾದ ಈ ಘಟನೆಯು 2012ರಲ್ಲಿ ನಡೆದಿದ್ದು, ವರ್ಗದ ಆಧಾರದಲ್ಲಿ ತಾರತಮ್ಯವನ್ನು ಎಸಗುವುದು ಸಹ 'ಅಸ್ಪೃಶ್ಯತೆ' ಆಗಿದೆ. ಇದು ಸಂವಿಧಾನವು ಖಾತರಿ ಪಡಿಸಿರುವ ಹಕ್ಕಿನ ನಿರಾಕರಣೆಯಾಗಿದೆ ಎಂದು ನ್ಯಾಯಾಲಯವು ತನ್ನ ಅದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಇದೇ ವೇಳೆ ನ್ಯಾಯಾಲಯವು ಒಕ್ಕೂಟದ ಸದಸ್ಯತ್ವವನ್ನು ಬಯಸುವ ಎಲ್ಲ ವಕೀಲರಿಗೂ ಸದಸ್ಯತ್ವ ನೋಂದಣಿ ಅರ್ಜಿಯನ್ನು ನೀಡುವಂತೆ ಎಂಬಿಎಗೆ ನಿರ್ದೇಶಿಸಿತು. ಅಲ್ಲದೆ, ಯಾವುದೇ ರೀತಿಯ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯ ಧೋರಣೆಯನ್ನು ಅನುಸರಿಸದೆ ಎಲ್ಲರ ಅರ್ಜಿಗಳನ್ನೂ ಪರಿಗಣಿಸುವಂತೆ ಸೂಚಿಸಿತು.

ಎಂಬಿಎಯು ಗಣ್ಯತೆಯ ಆಧಾರದಲ್ಲಿ ತಾರತಮ್ಯವನ್ನು ಎಸಗುತ್ತದೆ ಎನ್ನುವ ಆರೋಪವನ್ನು ಗಮನಿಸಿದ ನ್ಯಾಯಮೂರ್ತಿಗಳು, ಯಾವುದೇ ವ್ಯಕ್ತಿಗಳು "ವಿವೇಚನಾ ವರ್ಗೀಕರಣ"ದ ಆಧಾರದಲ್ಲಿ ವಿಶೇಷ ಒಕ್ಕೂಟಗಳನ್ನು ರಚಿಸಲು ಸ್ವತಂತ್ರರಾಗಿದ್ದಾರಾದರೂ ಅಂತಹ ಹಕ್ಕನ್ನು ಸಾರ್ವಜನಿಕ ಸ್ಥಳದಲ್ಲಿರುವ ಮತ್ತು ಸಾರ್ವಜನಿಕ ಹಣದ ಸವಲತ್ತನ್ನು ಬಳಸುತ್ತಿರುವ ಎಂಬಿಎಯಂತಹ ಒಕ್ಕೂಟ ಹೊಂದಲಾಗದು ಎಂದು ಸ್ಪಷ್ಟಪಡಿಸಿತು.

ತನ್ನ ಆದೇಶದಲ್ಲಿ ನ್ಯಾಯಾಲಯವು, "ವಕೀಲರ ಗುಂಪಿನೊಳಗೆ ಗಣ್ಯ ಸಮೂಹವೊಂದನ್ನು ಸೃಷ್ಟಿಸುವುದು 'ಸಂಘ, ಸಂಸ್ಥೆಗಳನ್ನು ರಚಿಸಿಕೊಳ್ಳುವ ಹಕ್ಕಿನ' ವ್ಯಾಪ್ತಿಗೆ ಬರುತ್ತದೆ. ಆದರೆ, ಅಂತಹ ಒಕ್ಕೂಟವನ್ನು ಸಾರ್ವಜನಿಕ ಸ್ಥಳ, ಸಾರ್ವಜನಿಕ ತೆರಿಗೆಯನ್ನು ಒಳಗೊಳ್ಳದಂತೆ ಹೈಕೋರ್ಟ್‌ ಕಟ್ಟಡದ ಆವರಣದ ಆಚೆಗೆ ರಚಿಸಿಕೊಳ್ಳಬಹುದಾಗಿದೆ. ಸಾರ್ವಜನಿಕ ಸಂಸ್ಥೆಯ ಆವರಣದೊಳಗೆ ಅಂತಹ ತಾರತಮ್ಯಕ್ಕೆ ಅನುಮತಿ ಇರುವುದಿಲ್ಲ. ಹಾಗೆ ಮಾಢುವುದು ಕೇವಲ ಹೃದಯವನ್ನು ನುಚ್ಚುನೂರು ಮಾಡುವ ವಿಚಾರ ಮಾತ್ರವೇ ಅಲ್ಲ ಈ ಭವ್ಯ ದೇಶದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಅಗಿದೆ. ಹಾಗಾಗಿ, ಸಾರ್ವಜನಿಕ ಆವರಣದಲ್ಲಿ, ಸಾರ್ವಜನಿಕ ಹಣವನ್ನು ಬಳಸಿಕೊಂಡು ಪ್ರತ್ಯೇಕ ವಕೀಲ ವರ್ಗವೊಂದನ್ನು ಸೃಷ್ಟಿಸುವ ಕೆಲಸಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಲಾಗದು. ಹೈಕೋರ್ಟ್‌ ಆವರಣದೊಳಗೆ ಪ್ರವೇಶಿಸುವ ಯಾವುದೇ ವಕೀಲರಿಗೆ ಸಾರ್ವಜನಿಕ ಕಟ್ಟಡದಲ್ಲಿ, ಸಾರ್ವಜನಿಕ ಹಣದಲ್ಲಿ ಒದಗಿಸಲಾದ ಮೂಲಸೌಕರ್ಯಗಳನ್ನು ಬಳಸುವುದಕ್ಕೆ ಮತ್ತು ತಮ್ಮಿಷ್ಟದ ಒಕ್ಕೂಟದ ಸದಸ್ಯರಾಗುವುದಕ್ಕೆ ಲಭ್ಯತೆ ಇರಬೇಕು," ಎಂದು ಹೈಕೋರ್ಟ್‌ ಹೇಳಿತು.

ಈ ಪ್ರಕರಣವು 2012ರಲ್ಲಿ ಘಟಿಸಿದ್ದು, ಕಿರಿಯ ವಕೀಲ ನೀಲ್‌ ರಷನ್‌ ಅವರಿಗೆ ನೀರನ್ನು ನಿರಾಕರಿಸಿದ್ದ ಪಾಂಡಿಯನ್‌ ಅವರು ಈ ನಡುವೆ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣನ್ನು ಕೈಬಿಡಬೇಕು ಎಂದು ಒಕ್ಕೂಟವು ನ್ಯಾಯಾಲಯವನ್ನು ಕೋರಿತ್ತು. ಆದರೆ ನ್ಯಾಯಾಲಯವು 'ಸಾಮಾಜಿಕ ಸಮಸ್ಯೆಗಳು ವ್ಯಕ್ತಿಯ ಸಾವಿನೊಂದಿಗೆ ಮುಕ್ತಾಯವಾಗುವುದಿಲ್ಲ' ಎಂದು ಸ್ಪಷ್ಟವಾಗಿ ಹೇಳಿತು.

ಅಂತಿಮವಾಗಿ ಒಕ್ಕೂಟದ ಸದಸ್ಯರಾದ ಹಾಗೂ ಸಂತ್ರಸ್ತ ನೀಲ್‌ ರಷನ್‌ ಅವರ ತಂದೆಯೂ, ಅರ್ಜಿದಾರರೂ ಅದ ರಾಜೇಂದ್ರ ಅವರಿಗೆ ₹5 ಲಕ್ಷ ಪರಿಹಾರವನ್ನು ಪಾವತಿಸುವಂತೆ ಎಂಬಿಎಗೆ ಸೂಚಿತು.