Justice PN Prakash, Madras High Court 
ಸುದ್ದಿಗಳು

ಸಿಬಿಐ ವಶದಲ್ಲಿದ್ದ 103 ಕೆಜಿ ಚಿನ್ನ ನಾಪತ್ತೆ: ಪೊಲೀಸ್ ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ

"ಇದು ಸಿಬಿಐಗೆ ಅಗ್ನಿಪರಿಕ್ಷೆ ಆಗಿರಬಹುದು. ಆದರೆ ಅದಕ್ಕಾಗಿ ಸಹಾಯ ಮಾಡಲಾಗುವುದಿಲ್ಲ. ಸೀತೆಯಂತೆ ತನ್ನ ಕೈಗಳು ಸ್ವಚ್ಛವಾಗಿದ್ದರೆ ಅದು ಪ್ರಕಾಶಮಾನವಾಗಿ ಹೊರಬರಬಹುದು. ಇಲ್ಲದಿದ್ದರೆ ಪರಿಸ್ಥಿತಿ ಎದುರಿಸಬೇಕಾಗುತ್ತದೆ” ಎಂದಿದೆ ನ್ಯಾಯಾಲಯ.

Bar & Bench

ಸಿಬಿಐ ವಶದಲ್ಲಿದ್ದ 103.84 ಕೆಜಿ ತೂಕದ ಚಿನ್ನ ನಾಪತ್ತೆಯಾಗಿರುವ ಸಂಬಂಧ ತನಿಖೆ ನಡೆಸುವಂತೆ ಸಿಬಿ- ಸಿಐಡಿಗೆ ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ. ರಾಜ್ಯ ಪೊಲೀಸರು ಪ್ರಕರಣದ ತನಿಖೆ ನಡೆಸಬಾರದು ಎಂಬ ಸಿಬಿಐ ಮನವಿಯನ್ನು ತಳ್ಳಿಹಾಕಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಪಿ ಎನ್‌ ಪ್ರಕಾಶ್‌ ತಮ್ಮ ತೀರ್ಪಿನಲ್ಲಿ “ಸ್ಥಳೀಯ ಪೊಲೀಸರು ತನಿಖೆ ನಡೆಸಿದರೆ ಸಿಬಿಐನ ಪ್ರತಿಷ್ಠೆ ಕುಂದುತ್ತದೆ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಾದಿಸಿದರು. ಈ ದೃಷ್ಟಿಕೋನವನ್ನು ನ್ಯಾಯಾಲಯ ಒಪ್ಪಲು ಸಾಧ್ಯವಿಲ್ಲ ಏಕೆಂದರೆ ಕಾನೂನಿನಲ್ಲಿ ಅಂತಹ ಊಹೆಗೆ ಆಸ್ಪದ ಇಲ್ಲ. ಎಲ್ಲಾ ಪೊಲೀಸರ ಮೇಲೆ ವಿಶ್ವಾಸ ಇಡಬೇಕು. ಸಿಬಿಐಗೆ ಮಾತ್ರ ಕೋಡು ಇದೆ. ಸ್ಥಳೀಯ ಪೊಲೀಸರಿಗೆ ಬರೀ ಬಾಲ ಇದೆ ಎಂದು ಯಾರ ಬಾಯಿಯಲ್ಲಾದರೂ ಬಂದರೆ ಅದು ಸುಳ್ಳಾಗದೇ ಇರುವುದಿಲ್ಲ” ಎಂದು ನ್ಯಾಯಾಲಯ ಕುಟುಕಿದೆ.

2012 ರಲ್ಲಿ ನಡೆದ ದಾಳಿ ವೇಳೆ ಸುರಾನಾ ಕಾರ್ಪೊರೇಶನ್ ಲಿಮಿಟೆಡ್ ಹೆಸರಿನ ಕಂಪನಿಯಿಂದ 400.47 ಕೆಜಿ ತೂಕದ ದಾಖಲೆ ಇಲ್ಲದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೊಂಡಿತ್ತು. ಆದರೆ ತನಿಖೆ ಮುಕ್ತಾಯಗೊಳ್ಳುವ ಹೊತ್ತಿಗೆ 296.606 ಕೆಜಿ ಮಾತ್ರ ಸಿಬಿಐ ವಶದಲ್ಲಿರುವುದು ಬೆಳಕಿಗೆ ಬಂದಿತ್ತು. ಎಸ್‌ಸಿಎಲ್‌ನ ಸುರಕ್ಷಿತ ಕಪಾಟುಗಳಲ್ಲಿ ಸಿಬಿಐ ಚಿನ್ನವನ್ನು ಇರಿಸಿ ಬೀಗಮುದ್ರೆ ಹಾಕಿತ್ತು ಎಂದು ತಿಳಿದುಬಂದಿದೆ. 2012ರಲ್ಲಿ ನಡೆದ ದಾಳಿ ಬಳಿಕ ಸಾಕ್ಷಿಗಳ ಸಮ್ಮುಖದಲ್ಲಿ ಲಾಕರ್‌ಗೆ ಬೀಗಮುದ್ರೆ ಹಾಕಲಾಗಿತ್ತು. ಸಿಬಿಐಗೆ ಕೀಲಿಗಳನ್ನು ಹಸ್ತಾಂತರಿಸಲಾಗಿದ್ದರೂ ತನಿಖಾ ಸಂಸ್ಥೆಗೆ ಯಾವಾಗ ಕೀಲಿಯನ್ನು ಪಡೆದೆ ಎಂದು ನೆನಪಿಸಿಕೊಳ್ಳಲು ಆಗುತ್ತಿಲ್ಲʼ ಎಂದು ಪೀಠ ಹೇಳಿದೆ.

“ವ್ಯತ್ಯಾಸ ಕೆಲವು ಗ್ರಾಂಗಳಷ್ಟಾಗಿದ್ದರೆ ಯಾರಿಗಾದರೂ ಅರ್ಥವಾಗುತ್ತಿತ್ತು. ಆದರೆ ನೂರು ಕೆಜಿಗಿಂತಲೂ ಹೆಚ್ಚು ಚಿನ್ನದಲ್ಲಿ ವ್ಯತ್ಯಾಸ ಕಂಡುಬಂದದ್ದು ಹೇಗೆ ಎಂಬುದು ತಿಳಿಯುತ್ತಿಲ್ಲ. ಗಾಂಜಾ ಪದಾರ್ಥಗಳಂತೆ ಚಿನ್ನದ ತೂಕದಲ್ಲಿ ವ್ಯತ್ಯಾಸ ಆಗುವುದಿಲ್ಲ. ದುರದೃಷ್ಟವಶಾತ್‌ 103.864 ಕಿ.ಗ್ರಾಂ ತೂಕದ ಚಿನ್ನ ಎಲ್ಲಿ ಇದೆ ಎಂಬುದು ಚಿನ್ನದ ಗಟ್ಟಿಯ ದಂಡೆಯಾತ್ರೆಯಲ್ಲಿ ಭಾಗಿಯಾದ ಎಲ್ಲ ಪಕ್ಷದವರಿಗೂ ಸುವರ್ಣ ಪ್ರಶ್ನೆಯಾಗಿ ಉಳಿಯಲಿದೆ” ಎಂದು ನ್ಯಾಯಾಲಯ ತಿಳಿಸಿದೆ. ಇಡೀ ಪ್ರಕರಣವನ್ನು ಹಾಲಿವುಡ್‌ನ ಪ್ರಸಿದ್ಧ ಸಿನಿಮಾ ʼಮೆಕೆನ್ನಾಸ್‌ ಗೋಲ್ಡ್‌ʼಗೆ ಹೈಕೋರ್ಟ್‌ ಹೋಲಿಸಿದೆ.

ಜೊತೆಗೆ ನ್ಯಾಯಮೂರ್ತಿಗಳು "ಇದು ಸಿಬಿಐಗೆ ಅಗ್ನಿಪರಿಕ್ಷೆ ಆಗಿರಬಹುದು. ಆದರೆ ಅದಕ್ಕಾಗಿ ಸಹಾಯ ಮಾಡಲಾಗುವುದಿಲ್ಲ. ಸೀತೆಯಂತೆ ಅದರ ಕೈಗಳು ಸ್ವಚ್ಛವಾಗಿದ್ದರೆ ಅದು ಪ್ರಕಾಶಮಾನವಾಗಿ ಹೊರಬರಬಹುದು. ಇಲ್ಲದಿದ್ದರೆ ಪರಿಸ್ಥಿತಿ ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಸಿಬಿಐ ಮತ್ತು ಸುರಾನಾ ಕಂಪೆನಿಗಳ ಹೊರತಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಕೂಡ ಅರ್ಜಿ ಸಲ್ಲಿಸಿದೆ. ಒಕ್ಕೂಟಕ್ಕೆ ಸುರಾನಾ ಹಣ ನೀಡಬೇಕಿದೆ. ಜೊತೆಗೆ ಸುರಾನಾ ಕಾರ್ಪೊರೇಟ್ ದಿವಾಳಿತನ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ ನಂತರ ಲಿಕ್ವಿಡೇಟರ್ ಆಗಿ ನೇಮಕಗೊಂಡ ಸಿ ರಾಮಸುಬ್ರಮಣ್ಯಂ, ವಾಣಿಜ್ಯ ಮತ್ತು ಕೈಗಾರಿಕಾ ಕೂಡ ಅರ್ಜಿ ಸಲ್ಲಿಸಿವೆ. ಪ್ರಕರಣದಲ್ಲಿ ಸಿಬಿಐ 2012 ಮತ್ತು 2013 ರಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಚಿನ್ನವನ್ನು (ಕಾಗದದ ಮೇಲೆ) ಮೊದಲ ಎಫ್‌ಐಆರ್‌ನಿಂದಎರಡನೇ ಎಫ್‌ಐಆರ್‌ಗೆ ವರ್ಗಾಯಿಸಿ ನಂತರ ಅವೆರಡೂ ಎಫ್‌ಐಆರ್‌ಗಳನ್ನು ಮುಚ್ಚಲಾಗಿದೆ.

ಇದೇ ವೇಳೆ ನ್ಯಾಯಾಲಯ "ಆರು ತಿಂಗಳಲ್ಲಿ ಪ್ರಕರಣದ ತನಿಖೆ ಮುಕ್ತಾಯಗೊಳ್ಳಬೇಕು. ಪೊಲೀಸ್‌ ವರಿಷ್ಠಾಧಿಕಾರಿ ಸ್ಥಾನಮಾನಕ್ಕೆ ಸಮಾನರಾದ ಅಧಿಕಾರಿಯೊಬ್ಬರು ತನಿಖೆ ನಡೆಸಬೇಕು" ಎಂದು ಸಿಬಿ- ಸಿಐಡಿಗೆ ನಿರ್ದೇಶನ ನೀಡಿದೆ.