Senthil Balaji and Madras High Court  
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ತಮಿಳುನಾಡು ಸಚಿವ ಸೆಂಥಿಲ್‌ಗೆ ವೈದ್ಯಕೀಯ ಜಾಮೀನು ನೀಡಲು ಮದ್ರಾಸ್ ಹೈಕೋರ್ಟ್ ನಕಾರ

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ನಲ್ಲಿ ಬಂಧಿತರಾಗಿದ್ದ ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ವಿ ಸೆಂಥಿಲ್ ಬಾಲಾಜಿ ಅವರು ಸಲ್ಲಿಸಿದ್ದ ವೈದ್ಯಕೀಯ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಸೆಂಥಿಲ್‌ ಅವರು ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಎಲ್ಲಾ ಸಾಧ್ಯತೆಗಳಿವೆ ಎಂದು ತಿಳಿಸಿದ ನ್ಯಾ. ಜಿ ಜಯಚಂದ್ರನ್‌ ವೈದ್ಯಕೀಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.

ಅರ್ಜಿದಾರರು ಜಾಮೀನಿನ ಮೇಲೆ ಬಿಡುಗಡೆಯಾದರೆ ಮಾತ್ರ ಅವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯ ಎಂದು ಅವರಿಗೆ ಸಂಬಂಧಿಸಿದ ಆರೋಗ್ಯ ವರದಿ ತಿಳಿಸುವುದಿಲ್ಲ. ಇದಲ್ಲದೆ ಅವರ ಈ ಹಿಂದಿನ ನಡೆ, ಖಾತೆರಹಿತ ಸಚಿವರಾಗಿರುವ ಅವರ ಪ್ರಸ್ತುತ ಸ್ಥಾನಮಾನ, ಆದಾಯ ತೆರಿಗೆ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ ಅವರ ಸಹೋದರ ಅಶೋಕ್‌ ಕುಮಾರ್‌ ತಲೆಮರೆಸಿಕೊಂಡಿರುವುದು ಇವೆಲ್ಲವೂ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಅವರು ನೇರವಾಗಿ ಮತ್ತು ಪರೋಕ್ಷವಾಗಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬ ಅನಿರ್ಬಂಧಿತ ತೀರ್ಮಾನಕ್ಕೆ ಬರಲು ಕಾರಣವಾಗುತ್ತದೆ ಎಂದು ಹೈಕೋರ್ಟ್‌ ನುಡಿದಿದೆ.

ತಮಿಳುನಾಡು ಸಾರಿಗೆ ಇಲಾಖೆಯಲ್ಲಿ ಬಸ್ ನಿರ್ವಾಹಕರು, ಚಾಲಕರು ಹಾಗೂ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ವೇಳೆ ನಡೆದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಳೆದ ಜೂನ್ 14ರಂದು ಜಾರಿ ನಿರ್ದೇಶನಾಲಯ (ಇ ಡಿ) ಸೆಂಥಿಲ್‌ ಅವರನ್ನು ಬಂಧಿಸಿತ್ತು. 2011 ರಿಂದ 2015 ರವರೆಗೆ ಎಐಎಡಿಎಂಕೆ  (ಅವರು ಪ್ರಸ್ತುತ ಡಿಎಂಕೆಯೊಂದಿಗೆ ಗುರುತಿಸಿಕೊಂಡಿದ್ದಾರೆ) ಸರ್ಕಾರದ ವೇಳೆ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಅಕ್ರಮ ನಡೆದಿರುವುದಾಗಿ ಆರೋಪಿಸಲಾಗಿತ್ತು.

ಹಿರಿಯ ವಕೀಲ ಎನ್‌ ಆರ್‌ ಇಳಂಗೋ ಅವರು ಸೆಂಥಿಲ್‌ ಅವರ ಪರ ವಾದ ಮಂಡಿಸಿದರು. ಜಾಮೀನಿನ ಮೇಲೆ ಹೊರಬಂದರೆ ಅವರು ಸಾಕ್ಷ್ಯ ಹಾಳುಮಾಡುವ ಸಾಧ್ಯತೆಯಿದೆ ಎಂಬ ಇ ಡಿ ಆತಂಕ  ಆಧಾರರಹಿತ, ಏಕೆಂದರೆ ಪ್ರಕರಣದ ಎಲ್ಲಾ ಸಾಕ್ಷ್ಯಗಳನ್ನು ಈಗಾಗಲೇ ದಾಖಲಿಸಿಕೊಳ್ಳಲಾಗಿದೆ ಎಂದರು.

ಇಡಿ ಪರ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್ ರಮೇಶ್ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಆರ್‌ಎಲ್ ಸುಂದರೇಶನ್ ಅವರು  ಸೆಂಥಿಲ್‌ ಅವರಿಗೆ ಈಗಾಗಲೇ ಪುಝಲ್ ಕೇಂದ್ರ ಕಾರಾಗೃಹದಲ್ಲಿ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ನೀಡಲಾಗಿದೆ ಎಂದು ಹೇಳಿ ಜಾಮೀನಿಗೆ ಆಕ್ಷೇಪಿಸಿದ್ದರು.