Madras High Court 
ಸುದ್ದಿಗಳು

ಬಿಜೆಪಿ ಸಂಘಟನಾ ಕಾರ್ಯದರ್ಶಿ ವಿರುದ್ಧದ ಎಫ್‌ಐಆರ್ ರದ್ದತಿಗೆ ಮದ್ರಾಸ್ ಹೈಕೋರ್ಟ್ ನಕಾರ: ಸಮನ್ಸ್ ನೀಡದಂತೆ ಆದೇಶ

ತನಿಖೆಯ ನೆಪದಲ್ಲಿ ವಿಷಯಾಂತರಕ್ಕೆ ಅನುಮತಿ ನೀಡಲಾಗದು ಎಂದ ನ್ಯಾಯಾಲಯ, ಇನ್ನು‌‌ ಮುಂದೆ ತನ್ನ ಅನುಮತಿ ಪಡೆದ ನಂತರವೇ ವಿನಾಯಗನ್‌ಗೆ ಸಿಬಿಸಿಐಡಿ ಸಮನ್ಸ್ ನೀಡಬೇಕು ಎಂದು ಆದೇಶಿಸಿದೆ.

Bar & Bench

ಲೋಕಸಭೆ ಚುನಾವಣೆಗೂ ಮುನ್ನ ಕಳೆದ ಏಪ್ರಿಲ್‌ನಲ್ಲಿ ರೈಲಿನಿಂದ ₹ 3.99 ಕೋಟಿ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಕೇಶವ ವಿನಾಯಗನ್ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ.

ಆದರೂ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಯಗನ್ ಅವರಿಗೆ ಆಗಾಗ ಸಮನ್ಸ್ ಜಾರಿ ಮಾಡುವ ಮೂಲಕ ತೊಂದರೆ ನೀಡದಂತೆ ತಮಿಳುನಾಡು ಅಪರಾಧ ದಳ‌ ಅಪರಾಧ ತನಿಖಾ ವಿಭಾಗಕ್ಕೆ (ಸಿಬಿಸಿಐಡಿ) ನ್ಯಾ‌ ಜಿ ಜಯಚಂದ್ರನ್ ನಿರ್ಬಂಧ ವಿಧಿಸಿದರು.

ತನಿಖೆಯ ನೆಪದಲ್ಲಿ ವಿಷಯಾಂತರ ಮಾಡುವುದಕ್ಕೆ ಅನುಮತಿ ನೀಡಲಾಗದು ಎಂದು ಜೂನ್ 6ರ ಆದೇಶದಲ್ಲಿ ಹೇಳಿರುವ ನ್ಯಾಯಾಲಯ ಇನ್ನು‌ ಮುಂದೆ ತನ್ನ ಅನುಮತಿ ಪಡೆದ ನಂತರವೇ ವಿನಾಯಗನ್ ಅವರಿಗೆ ಸಿಬಿಸಿಐಡಿ ಸಮನ್ಸ್ ನೀಡಬಹುದು ಎಂದು ಆದೇಶಿಸಿತು.

ವಿನಾಯಗನ್ ಅವರ ತನಿಖೆ ಸಮರ್ಥಿಸುವಂತಹ ಸಾಕ್ಷ್ಯಗಳು ಇದ್ದರೆ ಮಾತ್ರ ಸಮನ್ಸ್ ಜಾರಿಗಾಗಿ ತನಿಖಾ ಸಂಸ್ಥೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ಏಪ್ರಿಲ್ 27ರಂದು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಸಾಗುತ್ತಿದ್ದ ರೈಲಿನಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಮತ್ತು ರೈಲ್ವೆ ಪೊಲೀಸರು ಮೂವರು ವ್ಯಕ್ತಿಗಳಿಂದ ₹3.99 ಕೋಟಿ ವಶಪಡಿಸಿಕೊಂಡಿದ್ದರು.

ಈ ಪೈಕಿ ಒಬ್ಬಾತ ಬಿಜೆಪಿ ಜೊತೆ ನಂಟು ಹೊಂದಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ವಿನಯಗನ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತನಿಖೆಯನ್ನು ತರುವಾಯ ಸಿಬಿಸಿಐಡಿಗೆ ವರ್ಗಾಯಿಸಲಾಗಿತ್ತು. ವಿನಾಯಗನ್ ತನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್‌ ಮೊರೆ ಹೋಗುದ್ದರು.

ವಿನಾಯಗನ್ ಪರ ವಕೀಲರ ವಾದ ಪುರಸ್ಕರಿಸಿದ ಪೀಠ ಅವರ ವಿರುದ್ಧ ಸಾಕ್ಷ್ಯಗಳು ಇಲ್ಲ ಮತ್ತು ಈಗಾಗಲೇ ಅವರು ತನಿಖೆಗೆ ಹಾಜರಾಗುತ್ತಿರುವುದರಿಂದ ಅವರಿಗೆ ಪೊಲೀಸರು ಅಡ್ಡಿಪಡಿಸಲು ಯಾವುದೇ ಕಾರಣಗಳಿಲ್ಲ ಎಂದಿದೆ.

ಆದರೆ ಇದೇ ವೇಳೆ ಅವರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಅದು ನಿರಾಕರಿಸಿತು.