Udhayanidhi Stalin, Madras High Court  Udhayanidhi Stalin (Facebook)
ಸುದ್ದಿಗಳು

ಅಧಿಕೃತ ಕಾರ್ಯಕ್ರಮಗಳಲ್ಲಿ ಉದಯನಿಧಿ ಜೀನ್ಸ್, ಟಿ-ಶರ್ಟ್ ತೊಡುಗೆ: ರಾಜ್ಯ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನೋಟಿಸ್

ರಾಜ್ಯದಲ್ಲಿ ರಾಜಕಾರಣಿಗಳು ಮತ್ತು ಸಾರ್ವಜನಿಕ ಸೇವಕರಿಗೆ ಇರಬೇಕಾದ ವಸ್ತ್ರ ಸಂಹಿತೆ ಕುರಿತಂತೆ ಸರ್ಕಾರಿ ಆದೇಶ ಹೊರಡಿಸಲಾಗಿದೆಯೇ ಎಂದು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ಅವರನ್ನು ಕೇಳಿದೆ.

Bar & Bench

ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗುವಾಗ ಹಾಗೂ ಅಧಿಕೃತ ಕರ್ತವ್ಯ ನಿರ್ವಹಿಸುವಾಗ ಔಪಚಾರಿಕ ವಸ್ತ್ರ ಸಂಹಿತೆ ಪಾಲಿಸುವಂತೆ ನಿರ್ದೇಶನ ನೀಡಲು ಕೋರಿದ್ದ ಪಿಐಎಲ್‌ಗೆ ಪ್ರತಿಕ್ರಿಯೆ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳವಾರ ನೋಟಿಸ್ ನೀಡಿದೆ.

ಒಂದು ವಾರದೊಳಗೆ ಉತ್ತರವನ್ನು ಸಲ್ಲಿಸುವಂತೆ  ನ್ಯಾಯಮೂರ್ತಿಗಳಾದ ಡಿ ಕೃಷ್ಣ ಕುಮಾರ್ ಮತ್ತು ಪಿ ಬಿ ಬಾಲಾಜಿ ಅವರಿದ್ದ ಪೀಠ ಸೂಚಿಸಿದೆ. ಇದೇ ವೇಳೆ ರಾಜ್ಯದಲ್ಲಿ ರಾಜಕಾರಣಿಗಳು ಮತ್ತು ಸಾರ್ವಜನಿಕ ಸೇವಕರಿಗೆ ಇರಬೇಕಾದ ವಸ್ತ್ರ ಸಂಹಿತೆ ಕುರಿತಂತೆ ಸರ್ಕಾರಿ ಆದೇಶ ಹೊರಡಿಸಲಾಗಿದೆಯೇ ಎಂದು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ಅವರನ್ನು ಕೇಳಿತು. 

ಅಧಿಕೃತ ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕ ಹುದ್ದೆಯಲ್ಲಿರುವವರಿಗೆ ಔಪಚಾರಿಕ ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚಿಸಿ ತಮಿಳುನಾಡು ಸರ್ಕಾರ  2019ರಲ್ಲಿ ಹೊರಡಿಸಿದ್ದ ಆದೇಶವನ್ನು ಉದಯನಿಧಿ ಅವರು ಅಧಿಕೃತ ಕಾರ್ಯಕ್ರಮಗಳಲ್ಲಿ ಟಿ ಶರ್ಟ್, ಜೀನ್ಸ್ ಹಾಗೂ ಕ್ಯಾಶುವಲ್ ಪಾದರಕ್ಷೆ ರೀತಿಯ "ಅನೌಪಚಾರಿಕ ಉಡುಗೆ" ಧರಿಸುವ ಮೂಲಕ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ವಕೀಲ ಎಂ ಸತ್ಯಕುಮಾರ್ ಪಿಐಎಲ್ ಸಲ್ಲಿಸಿದ್ದರು.

ಸರ್ಕಾರಿ ಸಭೆಗಳಲ್ಲಿ ಸಾರ್ವಜನಿಕ ಹುದ್ದೆಯಲ್ಲಿರುವವರು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಚಿಹ್ನೆ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದ್ದರೂ ಅಧಿಕೃತ ಕಾರ್ಯಕ್ರಮಗಳಲ್ಲಿ ಉದಯ ನಿಧಿ ಅವರು ಧರಿಸುತ್ತಿದ್ದ ಬಹುತೇಕ ಟಿ ಶರ್ಟ್‌ಗಳಲ್ಲಿ ಡಿಎಂಕೆ ಚಿಹ್ನೆ ಇರುತ್ತಿತ್ತು ಎಂದೂ ಅರ್ಜಿ ಆರೋಪಿಸಿತ್ತು.