Dhanush, Nayanatara and Madras High Court  
ಸುದ್ದಿಗಳು

ನಯನತಾರಾ-ಧನುಷ್ ಪ್ರಕರಣ: ನೆಟ್‌ಫ್ಲಿಕ್ಸ್‌ ಮನವಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ನಯನತಾರಾ ಮತ್ತಿತರರ ವಿರುದ್ಧ ಸಲ್ಲಿಸಲಾದ ಮೂಲ ಮೊಕದ್ದಮೆಗೆ ಸಂಬಂಧಿಸಿದಂತೆ ಧನುಷ್ ಮಾಲೀಕತ್ವದ ವಂಡರ್‌ಬಾರ್‌ ಫಿಲ್ಮ್ಸ್ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ಫೆಬ್ರವರಿ 5ರಂದು ನಡೆಯಲಿದೆ.

Bar & Bench

'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪದ ಮೇಲೆ ನಟಿ ನಯನತಾರಾ ಮತ್ತಿತರರ ವಿರುದ್ಧ ನಟ ಧನುಷ್ ಅವರ ನಿರ್ಮಾಣ ಸಂಸ್ಥೆ ವಂಡರ್‌ಬಾರ್ ಫಿಲ್ಮ್ಸ್ ಹೂಡಿರುವ ಸಿವಿಲ್ ಮೊಕದ್ದಮೆಯನ್ನು ತಿರಸ್ಕರಿಸುವಂತೆ ಕೋರಿ ನೆಟ್‌ಫ್ಲಿಕ್ಸ್ ಪರವಾಗಿ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ವುಂಡರ್‌ಬಾರ್ ಫಿಲ್ಮ್ಸ್‌ಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲು ಮತ್ತು ನೆಟ್‌ಫ್ಲಿಕ್ಸ್ ನೋಂದಾಯಿತ ಕಚೇರಿಗಳು ಮುಂಬೈನಲ್ಲಿದ್ದರೂ ಅದನ್ನು ಪಕ್ಷಕಾರರಾಗಿ ವಾದಿಸಲು ಅನುಮತಿಸಿ ನ್ಯಾಯಾಲಯ ಈ ಹಿಂದೆ ನೀಡಿದ್ದ ಅನುಮತಿ ಹಿಂಪಡೆಯಬೇಕೆಂಬ ಮನವಿಯನ್ನು ಕೂಡ ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ವಜಾಗೊಳಿಸಿದರು.

ನಯನತಾರಾ ಮತ್ತಿತರರ ವಿರುದ್ಧ ಸಲ್ಲಿಸಲಾದ ಮೂಲ ಮೊಕದ್ದಮೆಗೆ ಸಂಬಂಧಿಸಿದಂತೆ ಧನುಷ್ ಮಾಲೀಕತ್ವದ ವಂಡರ್‌ಬಾರ್‌ ಫಿಲ್ಮ್ಸ್ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ಫೆಬ್ರವರಿ 5ರಂದು ನಡೆಯಲಿದೆ.

ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪದ ಮೇಲೆ ನಯನತಾರಾ ವಿರುದ್ಧ ಮೊಕದ್ದಮೆ ಹೂಡಲು ವಂಡರ್‌ಬಾರ್‌ಗೆ ನ್ಯಾಯಾಲಯವು ಈ ಹಿಂದೆ ನೀಡಿದ್ದ ಅನುಮತಿಯನ್ನು ತಿರಸ್ಕರಿಸುವುದರ ಕುರಿತಾದ ಹಾಗೂ ಇಡೀ ದಾವೆಯನ್ನೇ ತಿರಸ್ಕರಿಸುವುದಕ್ಕೆ ಸಂಬಂಧಿಸಿದ  ಎರಡು ಅರ್ಜಿಗಳನ್ನು ಲಾಸ್ ಗ್ಯಾಟೋಸ್ ಪ್ರೊಡಕ್ಷನ್ಸ್ (ನೆಟ್‌ಫ್ಲಿಕ್ಸ್ ಭಾರತದಲ್ಲಿ ಹೂಡಿಕೆ ಮಾಡುವ ಘಟಕ) ಸಲ್ಲಿಸಿತ್ತು.

ಲಾಸ್ ಗಟೋಸ್ ಪರ ಹಾಜರಾದ ಹಿರಿಯ ವಕೀಲ ಆರ್ ಪಾರ್ಥಸಾರಥಿ ಅವರು ವಂಡರ್‌ಬಾರ್‌ ಸಲ್ಲಿಸಿರುವ ಮೊಕದ್ದಮೆಯನ್ನು ತಿರಸ್ಕರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ವಂಡರ್‌ಬಾರ್‌ನ ನೋಂದಾಯಿತ ಕಚೇರಿ ಚೆನ್ನೈನಲ್ಲಿ ಇರದೆ ಕಾಂಚೀಪುರಂ ಜಿಲ್ಲೆಯಲ್ಲಿ ಇರುವುದರಿಂದ ದಾವೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ಗೆ ಯಾವುದೇ ಅಧಿಕಾರವಿಲ್ಲ ಎಂದು ಈ ಹಿಂದಿನ ವಿಚಾರಣೆ ವೇಳೆ ಹೇಳಿದ್ದರು.

ಆದ್ದರಿಂದ 1957 ರ ಹಕ್ಕುಸ್ವಾಮ್ಯ ಕಾಯಿದೆಯ ಸೆಕ್ಷನ್ 62 ಇಲ್ಲವೇ ನಿರ್ಮಾಣ ಕಂಪನಿ ಕಾಂಚೀಪುರಂ ಜಿಲ್ಲಾ ನ್ಯಾಯಾಲಯವನ್ನು ಅಥವಾ  ನೆಟ್‌ಫ್ಲಿಕ್ಸ್‌ ನೋಂದಾಯಿತ ಕಚೇರಿ ಇರುವ ಸ್ಥಳದ ನ್ಯಾಯವ್ಯಾಪ್ತಿ ಹೊಂದಿರುವ ಬಾಂಬೆ ಹೈಕೋರ್ಟ್‌ಅನ್ನು ಸಂಪರ್ಕಿಸಬೇಕು ಎಂದಿದ್ದರು.

ವಂಡರ್‌ಬಾರ್ ಫಿಲ್ಮ್ಸ್‌ಗಾಗಿ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ವಂಡರ್‌ಬಾರ್ ಫಿಲ್ಮ್ಸ್‌ನೊಂದಿಗೆ ಚಲನಚಿತ್ರ ಕುರಿತು ನಯನತಾರಾ ಒಪ್ಪಂದಕ್ಕೆ ಸಹಿ ಹಾಕಿದಾಗ, ಅವರ ಮತ್ತು ವಂಡರ್‌ಬಾರ್‌ನ ನೋಂದಾಯಿತ ಕಚೇರಿಗಳನ್ನು ಚೆನ್ನೈನಲ್ಲಿದ್ದವು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ತನ್ನ ಹಾಗೂ ತನ್ನ ಪತಿಯೊಂದಿಗೆ ಧನುಷ್‌ಗೆ ವೈಯಕ್ತಿಕ ದ್ವೇಷವಿದೆ ಎಂದು ನವೆಂಬರ್ 16 ರಂದು ನಯನತಾರಾ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದರು. ಸಾಕ್ಷ್ಯಚಿತ್ರ ಬಿಡುಗಡೆಯಾದ ಬಳಿಕ ಧನುಷ್‌ ₹ 10 ಕೋಟಿ ಪರಿಹಾರ ಕೇಳಿ ತನಗೆ ಲೀಗಲ್‌ ನೋಟಿಸ್‌ ನೀಡಿರುವುದು ಆಘಾತ ತಂದಿದೆ ಎಂದು ಆಕೆ ಹೇಳಿಕೊಂಡಿದ್ದರು.