University Grants Commission
University Grants Commission 
ಸುದ್ದಿಗಳು

ದೂರಶಿಕ್ಷಣ: ಹೊರರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ರಾಜ್ಯ ವಿವಿಗಳ ಮೇಲಿನ ನಿರ್ಬಂಧ ಎತ್ತಿಹಿಡಿದ ಮದ್ರಾಸ್‌ ಹೈಕೋರ್ಟ್‌

Bar & Bench

ರಾಜ್ಯ ಸರ್ಕಾರದ ಅನುದಾನದಲ್ಲಿ ಕಾರ್ಯನಿರ್ವಹಿಸುವ ರಾಜ್ಯದ ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳು ದೂರ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವಾಗ ಅವುಗಳು ಸಂಬಂಧಿತ ರಾಜ್ಯಗಳ ವ್ಯಾಪ್ತಿಯನ್ನು ಮೀರುವಂತಿಲ್ಲ ಎಂಬ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಬಂಧನೆಯನ್ನು ಈಚೆಗೆ ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದಿದೆ [ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ವರ್ಸ್‌ ಅಣ್ಣಾಮಲೈ ವಿಶ್ವವಿದ್ಯಾಲಯ].

ದೂರಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಬಂಧನೆಗಳನ್ನು ವಿಧಿಸುವ ಸಂಬಂಧ ತಾನು 2012ರಲ್ಲಿ ಮಾಡಿದ್ದ ಆದೇಶವನ್ನು ವಜಾಗೊಳಿಸಿದ್ದ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಯುಜಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಆರ್‌ ಸುಬ್ರಮಣಿಯನ್‌ ಮತ್ತು ಕೆ ಕುಮಾರೇಶ್‌ ಬಾಬು ಅವರ ನೇತೃತ್ವದ ಮದ್ರಾಸ್‌ ಹೈಕೋರ್ಟ್‌ನ ವಿಭಾಗೀಯ ಪೀಠವು ಮಾನ್ಯ ಮಾಡಿದೆ.

ಇದೇ ವೇಳೆ ನ್ಯಾಯಾಲಯವು, ಇಂತಹ ವಿಶ್ವವಿದ್ಯಾಲಯಗಳು ನಡೆಸುವ ಚಟುವಟಿಕೆಗಳು ಅವುಗಳಿರುವ ರಾಜ್ಯಕ್ಕೆ ಸೀಮಿತವಾಗಿದ್ದು, ಹೊರ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲವಾದ ಪಕ್ಷದಲ್ಲಿ ಅವುಗಳ ಶೈಕ್ಷಣಿಕ ಕೋರ್ಸ್‌ಗಳಿಗೆ ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದೆ.

“ರಾಜ್ಯ ಕಾಯಿದೆಗಳ ಅಡಿ ಸ್ಥಾಪನೆಯಾಗಿರುವ ನಿರ್ದಿಷ್ಟ ವ್ಯಾಪ್ತಿ ಹೊಂದಿರುವ ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳು ಆ ಪ್ರದೇಶಕ್ಕೆ ತಮ್ಮ ಕಾರ್ಯನಿರ್ವಹಣೆಯನ್ನು ಸೀಮಿತಗೊಳಿಸಬೇಕು. ಈ ವಿಶ್ವವಿದ್ಯಾಲಯಗಳು ನಡೆಸುವ ಕೋರ್ಸ್‌ಗಳಿಗೆ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು ಎಂದು ನಾವು ಹೇಳುತ್ತಿಲ್ಲ. ಆದರೆ, ರಾಜ್ಯ ವಿಶ್ವವಿದ್ಯಾಲಯಗಳ ಚಟುವಟಿಕೆಯು ರಾಜ್ಯದ ವ್ಯಾಪ್ತಿ ಮೀರಬಾರದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ರಾಜ್ಯದ ಕಾನೂನಿನ ಅನ್ವಯ ರೂಪುಗೊಂಡಿರುವ ವಿಶ್ವವಿದ್ಯಾಲಯಗಳು ಮತ್ತು ಇತರೆ ಖಾಸಗಿ ವಿಶ್ವವಿದ್ಯಾಲಯಗಳು ಹೊರರಾಜ್ಯದ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬಹುದಾದರೂ, ಅವುಗಳ ಇತರ ಚಟುವಟಿಕೆಗಳಾದ ದೂರ ಶಿಕ್ಷಣ ಕಲಿಕಾ ಕೇಂದ್ರಗಳ ಸ್ಥಾಪನೆ, ಕಲಿಕಾರ್ಥಿಗಳಿಗೆ ಸಹಾಯ ಕೇಂದ್ರಗಳ ಸ್ಥಾಪನೆ, ಪರೀಕ್ಷೆಯ ನಿರ್ವಹಣೆ ಇತ್ಯಾದಿಗಳು ರಾಜ್ಯದೊಳಗೆ ಮಾತ್ರವೇ ಇರಬೇಕು ಎಂದು ನ್ಯಾಯಾಲಯ ಹೇಳಿದೆ.

ದೂರ ಶಿಕ್ಷಣ ಕಾರ್ಯಕ್ರಮಗಳ ನಿರ್ವಹಣೆಗೆ ನಿಯಮಾವಳಿಗಳನ್ನು ರೂಪಿಸುವ ವಿಶ್ವವಿದ್ಯಾಲಯ ಅನುದಾನ ಆಯೋಗದ ಹಕ್ಕು ಮತ್ತು ಪ್ರಾಮುಖ್ಯತೆಯನ್ನು ನ್ಯಾಯಾಲಯವು ತೀರ್ಪಿನಲ್ಲಿ ಎತ್ತಿಹಿಡಿದಿದೆ. ಈ ನ್ಯಾಯಾಲಯದ ಮಧ್ಯಂತರ ಆದೇಶಗಳಿಗೆ ಅನುಸಾರವಾಗಿ ಈಗಾಗಲೇ ಕೋರ್ಸ್‌ಗಳನ್ನು ಮುಗಿಸಿರುವ ವಿದ್ಯಾರ್ಥಿಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯ ಸೇರಿದಂತೆ ಹಲವು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಯುಜಿಸಿಯ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ 2013ರಲ್ಲಿ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಯುಜಿಸಿ ಮೇಲ್ಮನವಿ ಸಲ್ಲಿಸಿತ್ತು.