LGBTQ, Madras High Court 
ಸುದ್ದಿಗಳು

ಸಲಿಂಗ ಜೋಡಿ ಹಕ್ಕು ರಕ್ಷಣೆ: ಕೌಟುಂಬಿಕ ಸಹಚರ್ಯ ಒಪ್ಪಂದಕ್ಕೆ ಮಾನ್ಯತೆ ನೀಡುವಂತೆ ಮದ್ರಾಸ್ ಹೈಕೋರ್ಟ್ ಆಗ್ರಹ

ಅಂತಹ ಸವಲತ್ತು ಎಲ್‌ಜಿಬಿಟಿಕ್ಯೂಐಎ + ಸಮುದಾಯದ ಸದಸ್ಯರ ಹಕ್ಕುಗಳನ್ನು ರಕ್ಷಿಸಲಿದ್ದು ತೊಂದರೆ ಅಥವಾ ಕಿರುಕುಳವಿಲ್ಲದೆ ಬದುಕಲು ಅವರಿಗೆ ಅನುವು ಮಾಡಿಕೊಡುತ್ತದೆ ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಹೇಳಿದರು.

Bar & Bench

ಸಲಿಂಗ ಸಂಬಂಧಗಳಿಗೆ ಅನುಮೋದನೆಯ ಮುದ್ರೆ ಒತ್ತುವ ಮತ್ತು ಸಮಾಜದಲ್ಲಿ ಅಂತಹ ಸಂಬಂಧಗಳ ವ್ಯಕ್ತಿಗಳ ಸ್ಥಾನಮಾನ ಹೆಚ್ಚಿಸುವ ಕೌಟುಂಬಿಕ ಸಹಚರ್ಯ ಒಪ್ಪಂದಗಳನ್ನು ನೋಂದಾಯಿಸಿಕೊಳ್ಳಲು ಕಾರ್ಯವಿಧಾನ ರೂಪಿಸುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಅಂತಹ ಸವಲತ್ತು ಸಮುದಾಯದ ಸದಸ್ಯರ ಹಕ್ಕುಗಳನ್ನು ರಕ್ಷಿಸಲಿದ್ದು  ತೊಂದರೆ ಅಥವಾ ಕಿರುಕುಳವಿಲ್ಲದೆ ಬದುಕಲು ಅವರಿಗೆ ಅನುವು ಮಾಡಿಕೊಡುತ್ತದೆ ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಹೇಳಿದರು.

ಸುಪ್ರಿಯೋ ಅಲಿಯಾಸ್ ಸುಪ್ರಿಯಾ‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿನಲ್ಲಿ “ಸಲಿಂಗ ಮನೋಧರ್ಮದ ವ್ಯಕ್ತಿಗಳು ತಮ್ಮಿಷ್ಟದ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಹೊಂದಿದ್ದು ಅಂತಹ ಹಕ್ಕುಗಳನ್ನು ಅನುಭವಿಸುವುದಕ್ಕಾಗಿ ಅವರಿಗೆ ರಕ್ಷಣೆ ನೀಡಬೇಕು” ಎಂದು ಹೇಳಿರುವುದನ್ನು ಪೀಠ ಪ್ರಸ್ತಾಪಿಸಿತು.

“…ಸುಪ್ರಿಯೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಂತೆ ಅಂತಹ ವ್ಯಕ್ತಿಗಳು ಸಮಾಜದಲ್ಲಿ ತೊಂದರೆ ಅಥವಾ ಕಿರುಕುಳವಿಲ್ಲದೆ ಬದುಕುವುದಕ್ಕಾಗಿ ಅವರಿಗೆ ರಕ್ಷಣೆ ನೀಡಬೇಕಿದೆ. ಕೌಟುಂಬಿಕ ಸಹಚರ್ಯ ಒಪ್ಪಂದಕ್ಕೆ ಅನುಮತಿ ನೀಡಿದರೆ ಅಂತಹ ಸಂಬಂಧಕ್ಕೆ ಕನಿಷ್ಠ ಗೌರವ ಮತ್ತು ಸ್ಥಾನಮಾನ ದೊರೆಯುತ್ತದೆ” ಎಂದು ನ್ಯಾಯಾಲಯ ನುಡಿದಿದೆ.

ಆದ್ದರಿಂದ, ಈಗಾಗಲೇ ಎಲ್‌ಜಿಬಿಟಿಕ್ಯೂಐಎ+ ಸಮುದಾಯಕ್ಕಾಗಿ ನೀತಿಯೊಂದನ್ನು ಜಾರಿಗೊಳಿಸುತ್ತಿರುವ ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಇಲಾಖೆಯು ಕೌಟುಂಬಿಕ ಸಹಚರ್ಯದ ಒಪ್ಪಂದಗಳನ್ನು ನೋಂದಾಯಿಸುವ ವ್ಯವಸ್ಥೆ ಬಗ್ಗೆ ಪರಿಗಣಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.  

ತಮ್ಮ ಸಂಬಂಧಿಕರಿಂದ ತಮಗೆ ರಕ್ಷಣೆ ನೀಡುವಂತೆ ಸ್ತ್ರೀ ಸಲಿಂಗ ಜೋಡಿ ಮಾಡಿದ್ದ ಮನವಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮಧ್ಯಪ್ರವೇಶ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ಪ್ರಕರಣದ ವಿಚಾರಣೆ ನಡೆದಾಗಲೆಲ್ಲಾ ನ್ಯಾಯಾಲಯ ಎಲ್‌ಜಿಬಿಟಿಕ್ಯೂಐಎ + ಕಲ್ಯಾಣಕ್ಕೆ ಪೂರಕವಾಗಿ ವಿವಿಧ ಆದೇಶಗಳನ್ನು ನೀಡುತ್ತ ಬಂದಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Madras_High_Court_Order___17_11_23.pdf
Preview