ಮದ್ರಾಸ್ ಹೈಕೋರ್ಟ್, ಅಪ್ಸರಾ ರೆಡ್ಡಿ
ಮದ್ರಾಸ್ ಹೈಕೋರ್ಟ್, ಅಪ್ಸರಾ ರೆಡ್ಡಿ 
ಸುದ್ದಿಗಳು

ತೃತೀಯಲಿಂಗಿ ಹೋರಾಟಗಾರ್ತಿಯ ಅವಹೇಳನ: ₹ 50 ಲಕ್ಷ ಪರಿಹಾರ ನೀಡುವಂತೆ ಯೂಟ್ಯೂಬರ್‌ಗೆ ಮದ್ರಾಸ್ ಹೈಕೋರ್ಟ್ ಆದೇಶ

Bar & Bench

ಸಾಮಾಜಿಕ ಮಾಧ್ಯಮ ಮತ್ತು ಯೂಟ್ಯೂಬ್‌ನಲ್ಲಿ ರಾಜಕಾರಣಿ ಮತ್ತು ತೃತೀಯಲಿಂಗಿ ಹೋರಾಟಗಾರ್ತಿ ಅಪ್ಸರಾ ರೆಡ್ಡಿ ಅವರ ವಿರುದ್ಧ ಮಾನಹಾನಿಕರ ವಸ್ತುವಿಷಯ ಮತ್ತು ವೀಡಿಯೊಗಳನ್ನು ಪ್ರಸಾರ ಮಾಡಿದ್ದಕ್ಕಾಗಿ 50 ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಯೂಟ್ಯೂಬರ್ ಜೋ ಮೈಕೆಲ್ ಪ್ರವೀಣ್ ಅವರಿಗೆ ನಿರ್ದೇಶನ ನೀಡಿದೆ.

ಯೂಟ್ಯೂಬರ್ ಜೋ ಮೈಕೆಲ್ ಪ್ರವೀಣ್ ತನ್ನ ವಿರುದ್ಧ ಪದೇ ಪದೇ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಜನಪ್ರಿಯ ವಾಗ್ಮಿ, ಪತ್ರಕರ್ತೆ ಹಾಗೂ ಎಐಎಡಿಎಂಕೆ ವಕ್ತಾರೆಯೂ ಆಗಿರುವ ಅಪ್ಸರಾ ರೆಡ್ಡಿ ನ್ಯಾಯಾಲಯದಲ್ಲಿ ದೂರಿದ್ದರು.

ಅಪ್ಸರಾ ಅವರು ಸಲ್ಲಿಸಿದ್ದ ಸಾಕ್ಷ್ಯಗಳ್ನನು ಪರಿಶೀಲಿಸಿದ ನ್ಯಾಯಮೂರ್ತಿ ಎನ್‌ ಸತೀಶ್‌ ಕುಮಾರ್‌ ಅವರು ಮೈಕೆಲ್‌ ಹೇಳಿಕೆಗಳು ಮಾನಹಾನಿಕರವಾಗಿದ್ದು ಸತ್ಯಾಂಶ ಪರಿಶೀಲಿಸುವ ಯಾವ ಯತ್ನವನ್ನೂ ಮಾಡದೆ ಪ್ರವೀಣ್‌ ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದಾರೆ ಎಂದು ತಿಳಿಸಿದರು.

ಆರೋಪಿಯ ಹೇಳಿಕೆಗಳನ್ನು ಅದರಲ್ಲಿಯೂ ವೀಡಿಯೊಗಳ ವಸ್ತುವಿಷಯವನ್ನು ಪರಿಶೀಲಿಸಿದಾಗ ಅವು ಯಾವುದೇ ವ್ಯಕ್ತಿಯ ಗೌಪ್ಯತೆಗೆ ಧಕ್ಕೆ ತರುವ ದುರುದ್ದೇಶಪೂರ್ವಕ ಮತ್ತು ಮಾನಹಾನಿಕರ ಕೃತ್ಯವಲ್ಲದೆ ಬೇರೇನೂ ಅಲ್ಲ ಎಂಬುದು ತಿಳಿದು ಬರುತ್ತದೆ. ಯಾವುದೇ ವ್ಯಕ್ತಿಗೆ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡುವ ಹಕ್ಕಿದೆ ಎಂಬ ಕಾರಣಕ್ಕೆ ಆತ ಉಳಿದವರ ಖಾಸಗಿತನದ ಹಕ್ಕನ್ನು ಅತಿಕ್ರಮಿಸುವಂತಿಲ್ಲ. ಪ್ರಸಾರ ಮಾಡುವುದು ಹಕ್ಕಾಗಿದ್ದರೂ ಆ ಹಕ್ಕು ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿದ್ದು ಬೇರೆಯವರ ಖಾಸಗಿತನವನ್ನು ಉಲ್ಲಂಘಿಸುವಂತಿಲ್ಲ ಎಂದಿತು.

ಮುಂದುವರೆದು, ಇಂತಹ ಹೇಳಿಕೆಗಳು ಅದರಲ್ಲಿಯೂ ಯೂಟ್ಯೂಬ್‌ ರೀತಿಯ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದಾಗ ಯಾವುದೇ ವ್ಯಕ್ತಿಯ ಪಾತ್ರ, ನಡೆ ಹಾಗೂ ವೈಯಕ್ತಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಹೇಳಿಕೆಗಳನ್ನು ಸತ್ಯಾಂಶ ಆಧರಿಸದೆ ಪ್ರಸಾರ ಮಾಡಲಾಗಿದೆ. ಇವು ಮಾನಹಾನಿಕಾರಕ ಸ್ವರೂಪ ಹೊಂದಿವೆ. ಈ ದೃಷ್ಟಿಯಿಂದ ಪ್ರತಿವಾದಿ ಪ್ರವೀಣ್‌ ನಷ್ಟ ಪಾವತಿಸಲು ಬಾಧ್ಯಸ್ಥನಾಗಿರುತ್ತಾರೆ ಎಂದು ನ್ಯಾಯಾಲಯ ಆದೇಶಿಸಿತು.

ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್

ತಾನು ನಿಯತಕಾಲಿಕವೊಂದರಲ್ಲಿ ಸಂಪಾದಕಳಾಗಿ ಕೆಲಸ ಮಾಡುತ್ತಿದ್ದಾಗ ಪ್ರವೀಣ್‌ ಜಂಟಿಯಾಗಿ ವೀಡಿಯೊ ಕಾರ್ಯಕ್ರಮವೊಂದನ್ನು ನಡೆಸುವ ಬಯಕೆ ವ್ಯಕ್ತಪಡಿಸಿದ್ದ. ಆದರೆ ಅದಕ್ಕೆ ನಿರಾಕರಿಸಿದಾಗ ಪ್ರವೀಣ್‌ ಕೋಪಗೊಂಡು ತನ್ನ ವಿರುದ್ಧ ಗಾಳಿಸುದ್ದಿಗಳನ್ನು, ಕೆಟ್ಟ ಸಂಗತಿಗಳನ್ನು ಹರಡಲಾರಂಭಸಿದ. ಪ್ರವೀಣ್‌ ಅವರ ಮಾನಹಾನಿಕರ ಹೇಳಿಕೆಗಳಿಂದಾಗಿ ತನ್ನ ಅನೇಕ ಕಾರ್ಯಕ್ರಗಳು ರದ್ದಾದವು. ಇದು ಮಾನಸಿಕ ಒತ್ತಡ ಮತ್ತು ಯಾತನೆ ಉಂಟುಮಾಡಿತು. ತನಗಾದ ನಷ್ಟಕ್ಕೆ ಪ್ರವೀಣ್‌ 1.25 ಕೋಟಿ ರೂ ಪರಿಹಾರ ನೀಡಬೇಕೆಂದು ಅಪ್ಸರಾ ನ್ಯಾಯಾಲಯವನ್ನು ವಿನಂತಿಸಿದ್ದರು.

ಪ್ರವೀಣ್ ಅವರ ಕೃತ್ಯ ಅಪ್ಸರಾ ಅವರಿಗೆ ಧಕ್ಕೆ ತಂದಿದ್ದು ಅವಮಾನ ಉಂಟು ಮಾಡಿವೆ ಎಂದು ಹೇಳಿದ ನ್ಯಾಯಾಲಯ ಇದಕ್ಕೆ ಪರಿಹಾರವಾಗಿ ರೂ. 50 ಲಕ್ಷವನ್ನು ಅಪ್ಸರಾ ಅವರಿಗೆ ಪಾವತಿಸುವಂತೆ ಪ್ರವೀಣ್‌ಗೆ ಸೂಚಿಸಿತು.

ಇತ್ತ ಯೂಟ್ಯೂಬ್‌ ಒಡೆತನ ಹೊಂದಿರುವ ಪ್ರಕರಣದ ಎರಡನೇ ಪ್ರತಿವಾದಿಯಾದ ಗೂಗಲ್‌ ಆಕೆಯ ವಿರುದ್ಧದ ಮಾನಹಾನಿಕರ ಹೇಳಿಕೆಗಳನ್ನು ತೆಗೆದದ್ದರಿಂದ ಗೂಗಲ್‌ ವಿರುದ್ಧ ಮಾಡಿದ್ದ ಆರೋಪಗಳಿಂದ ಅಪ್ಸರಾ ಹಿಂದೆ ಸರಿದಿದ್ದರು.

ಆದರೂ ಮುಂದೆ ಇಂತಹ ದುರುದ್ದೇಶಪೂರ್ವಕ ವಸ್ತುವಿಷಯ ಪ್ರಸಾರಮಾಡದಂತೆ ಗೂಗಲ್‌ಗೆ ನ್ಯಾಯಾಲಯ ಎಚ್ಚರಿಕೆ ನೀಡಿತು.