ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧದ ತನಿಖೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಜೊತೆ ದಾಖಲೆ ಹಂಚಿಕೊಳ್ಳಲು ಮುಂದಾಗದ ಮಹಾರಾಷ್ಟ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ಮಹಾರಾಷ್ಟ್ರ ಸರ್ಕಾರವು ಸಿಬಿಐಗೆ ಏಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿಲ್ಲ. ಯಾವ ದಾಖಲೆಗಳನ್ನು ಹಂಚಿಕೊಳ್ಳಲು ಸರ್ಕಾರ ಸಿದ್ಧವಿದೆ ಎಂದು ತಿಳಿಸುವಂತೆ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಾಮದಾರ್ ಅವರಿದ್ದ ವಿಭಾಗೀಯ ಪೀಠ ಕೇಳಿದೆ.
ಸಿಬಿಐ ಕೋರಿರುವ ದಾಖಲೆಗಳನ್ನು ನೀಡಲು ಸರ್ಕಾರವೇಕೆ ನಿರಾಕರಿಸುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ನ್ಯಾ. ಶಿಂಧೆ ಅವರು ಈ ಹಿಂದೆ ದೇಶಮುಖ್ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿರುವುದಕ್ಕೆ ನಮಗೆ ಸಮಸ್ಯೆಯಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿತ್ತಲ್ಲವೇ ಎಂದರು.
“ಸಿಬಿಐ ತನಿಖೆಯ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು (ರಫೀಕ್) ದಾದಾ (ಸರ್ಕಾರದ ಪರ ವಕೀಲ) ಹೇಳಿದ್ದು ನಮಗೆ ನೆನಪಿದೆ. ರಾಜ್ಯ ಸರ್ಕಾರದ ಅರ್ಜಿ (ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗೆ ವಿರುದ್ದ ದಾಖಲೆಗಳ ಹಂಚಿಕೆ) ಮತ್ತು ಎಸ್‌ಎಲ್‌ಪಿಯನ್ನು ವಜಾ ಮಾಡಲಾಗಿದೆ. ನಮಗೆ ಏನೂ ಅರ್ಥವಾಗುತ್ತಿಲ್ಲ… ನಮ್ಮ ಬಳಿ ಶಬ್ದಗಳು ಉಳಿದಿಲ್ಲ… ಸರ್ಕಾರ ಹೀಗೇಕೆ ಮಾಡುತ್ತಿದೆ… ಅದು ಈ ರೀತಿ?” ಎಂದು ಪೀಠ ಪ್ರಶ್ನಿಸಿದೆ.
ರಾಜ್ಯ ಸರ್ಕಾರವು ದಾಖಲೆಗಳನ್ನು ಹಸ್ತಾಂತರಿಸದೇ ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತಿದೆ ಎಂದು ಸಿಬಿಐ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ಇದಕ್ಕೆ ಅಫಿಡವಿಟ್‌ನಲ್ಲಿ ಉತ್ತರಿಸಿರುವ ಮಹಾರಾಷ್ಟ್ರ ಸರ್ಕಾರವು ಸಿಬಿಐ ಕೋರಿರುವ ದಾಖಲೆಗಳು ತನಿಖೆಗೆ ಯಾವ ರೀತಿಯಲ್ಲೂ ಸಂಬಂಧಿಸಿಲ್ಲ ಎಂದಿದೆ.
“ಸಿಬಿಐ ಕೋರುತ್ತಿರುವ ಅಪ್ರಸ್ತುತವಾದ ದಾಖಲೆಗಳನ್ನು ನೀಡಲು ಮಾತ್ರ ನಿರಾಕರಿಸಲಾಗುತ್ತಿದೆ. ಈ ಮೂಲಕ ನ್ಯಾಯಾಲಯದ ಆದೇಶಗಳನ್ನು ಸದರಿ ಪ್ರಕರಣ ಮಾತ್ರವಲ್ಲದೇ ಸಂಬಂಧಿತ ಇತರೆ ಪ್ರಕರಣಗಳಲ್ಲೂ ದಾಖಲೆ ಮತ್ತು ಮಾಹಿತಿ ಹಂಚಿಕೊಳ್ಳುವಂತೆ ಒತ್ತಡ ಹಾಕುತ್ತಿದೆ. ವಾಸ್ತವದಲ್ಲಿ ಈ ಮಾಹಿತಿ ಪಡೆಯಲು ಕಾನೂನಾತ್ಮಕವಾಗಿ ಸಿಬಿಐ ಅರ್ಹವಾಗಿಲ್ಲ” ಎಂದು ಹಿರಿಯ ವಕೀಲ ರಫೀಕ್ ದಾದಾ ಹೇಳಿದ್ದಾರೆ.
ಸಿಬಿಐ ಮನವಿಯಲ್ಲಿ ಉಲ್ಲೇಖಿಸಲಾಗಿರುವ ಪ್ರಸ್ತುತ ಮತ್ತು ಅಗತ್ಯ ಪದಗಳನ್ನು ರಾಜ್ಯ ಸರ್ಕಾರವು ಅಂಥ ಪದಗಳು "ಅನಿಯಮಿತ, ಅನಿಯಂತ್ರಿತ ಮತ್ತು ಊಹಿಸಲಾಗದ ಅಧಿಕಾರವನ್ನು" ಸಿಬಿಐಗೆ ನೀಡಬಹುದು ಎಂದಿದೆ.
ಪೀಠವು “ಸಿಬಿಐ ಮಾಹಿತಿ ಹಂಚಿಕೊಳ್ಳುತ್ತದೆ ಎಂದು ನಾವೇಕೆ ಅನುಮಾನಿಸಬೇಕು.. ಎರಡೂ ಸಂಸ್ಥೆಗಳು ಸರ್ಕಾರದ್ದೇ ಆಗಿವೆ. ತನಿಖೆಗಾಗಿ ರಾಜ್ಯ ಮತ್ತು ಕೇಂದ್ರ ಮಾಹಿತಿ ಹಂಚಿಕೊಳ್ಳುವ ಅನೇಕ ಸಂದರ್ಭಗಳುಂಟು. ದಾಖಲೆಗಳು ಸಾರ್ವಜನಿಕ ವಲಯದಲ್ಲಿವೆ ಎಂದಾದರೆ ಅದನ್ನು ಹಂಚಿಕೊಳ್ಳುವುದರಿಂದ ಸಮಸ್ಯೆ ಏನು? ಸಿಬಿಐ ಏನನ್ನಾದರೂ ಕೇಳಬಹುದು. ಆದರೆ, ಎರಡು ತೀರ್ಪುಗಳಲ್ಲಿ ಈ ನ್ಯಾಯಾಲಯ ಏನನ್ನು ಹೇಳಿದೆಯೋ ಅದನ್ನು ಹಂಚಿಕೊಳ್ಳಲು ಆರಂಭಿಸಿ” ಎಂದು ಪೀಠ ಹೇಳಿದೆ.
ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಅವರು “ದಾಖಲೆಗಳನ್ನು ಹಂಚಿಕೊಳ್ಳಲು ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಿದೆ. ಇದರಲ್ಲಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಎದ್ದು ಕಾಣುತ್ತಿದೆ” ಎಂದಿದ್ದಾರೆ.
ದೇಶಮುಖ್ ಅವರು ಗೃಹ ಸಚಿವರಾಗಿದ್ದಾಗ ನಡೆದಿರುವ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಯ ಬಗೆಗಿನ ದಾಖಲೆಗಳನ್ನು ನೀಡುವಂತೆ ಸಿಬಿಐ ಮನವಿಯಲ್ಲಿ ಕೋರಿದೆ. ಇದನ್ನು ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದನ್ನು ವಜಾಗೊಳಿಸಲಾಗಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿತ್ತು. ನ್ಯಾಯಾಲಯದ ಆದೇಶವನ್ನು ಚಾಚೂ ತಪ್ಪದೇ ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ಆದೇಶಿಸಿದೆ.