Subramaniam Swamy and Bombay High Court 
ಸುದ್ದಿಗಳು

ಪಂಢರಾಪುರ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣ ಸಮರ್ಥಿಸಿದ ಮಹಾರಾಷ್ಟ್ರ; ಸುಬ್ರಮಣಿಯನ್‌ ಸ್ವಾಮಿ ಪಿಐಎಲ್‌ಗೆ ಆಕ್ಷೇಪ

ಭಕ್ತರನ್ನು ರಕ್ಷಿಸಲು ಪಂಢರಾಪುರ ದೇವಾಲಯಗಳ ಕಾಯಿದೆ ಅಗತ್ಯ ಎಂದು ಸರ್ಕಾರ ಹೇಳಿದ್ದು, ಸ್ವಾಮಿ ಪಿಐಎಲ್‌ಗೆ ಆಕ್ಷೇಪಿಸಿದೆ. ಆ ದೇವಾಲಯಗಳ ಆಡಳಿತವನ್ನು ಸರ್ಕಾರವು ಸ್ವೇಚ್ಛೆಯಿಂದ ನಿಯಂತ್ರಣಕ್ಕೆ ಪಡೆದಿದೆ ಎಂದು ಸ್ವಾಮಿ ಆಕ್ಷೇಪಿಸಿದ್ದಾರೆ.

Bar & Bench

ಪಂಢರಾಪುರ ದೇವಾಲಯಗಳ ಕಾಯಿದೆ 1973ಅನ್ನು (ಪಿಟಿಎ) ಮಹಾರಾಷ್ಟ್ರ ಸರ್ಕಾರ ಸಮರ್ಥಿಸಿದ್ದು, ಈ ಎಲ್ಲಾ ದೇವಾಲಯಗಳಿಗೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನವಿದೆ. ಹೀಗಾಗಿ, ಭಕ್ತರ ಹಿತಾಸಕ್ತಿ ರಕ್ಷಿಸಲು ಕಾನೂನು ಅಗತ್ಯ ಎಂದು ಹೇಳಿದೆ [ಸುಬ್ರಮಣಿಯನ್‌ ಸ್ವಾಮಿ & ಇತರರು ವರ್ಸಸ್‌ ಮಹಾರಾಷ್ಟ್ರ ಸರ್ಕಾರ].

ಪಂಢರಾಪುರ ದೇವಾಲಯಗಳು ಸಾರ್ವಜನಿಕ ದೇವಸ್ಥಾನಗಳಾಗಿದ್ದು, ವಿಭಿನ್ನ ನಂಬಿಕೆಗಳು ಇರುವ ಜನರಿಗೆ ಮುಕ್ತವಾಗಿದೆ. ಪಿಟಿಎಯಿಂದ ಅವರ ರಕ್ಷಿತ ಧಾರ್ಮಿಕ ಹಕ್ಕುಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.

ಬಿಜೆಪಿ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿರೋಧಿಸಿ ಮಹಾರಾಷ್ಟ್ರ ರಾಜ್ಯ ಸರ್ಕಾರವು ಅಫಿಡವಿಟ್‌ ಹಾಕಿದೆ. ಪಂಢರಾಪುರದಲ್ಲಿನ ದೇವಾಲಯದ ಆಡಳಿತವನ್ನು ನಿರಂಕುಶವಾಗಿ ಸರ್ಕಾರ ವಶಕ್ಕೆ ಪಡೆದಿದೆ ಎಂದು ಪಿಟಿಎ ಪ್ರಶ್ನಿಸಿ ಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದಾರೆ.

ಪಂಢರಾಪುರ ದೇವಾಲಯಗಳಿಗೆ ಸಂಬಂಧಿಸಿದಂತೆ ಪಿಟಿಎ ಮಹತ್ವವಾಗಿದ್ದು, ವಿಭಿನ್ನ ಧರ್ಮೀಯರಿಗೆ ಆ ದೇವಾಲಯ ಮುಕ್ತವಾಗುವ ಮೂಲಕ ವಿಶಿಷ್ಟ ಸ್ಥಾನಗಳಿಸಿರುವುದರಿಂದ ಅದಕ್ಕ ರಾಷ್ಟ್ರೀಯ ಮಹತ್ವವಿದೆ ಎಂದು ಸರ್ಕಾರವು ಅಫಿಡವಿಟ್‌ನಲ್ಲಿ ತಿಳಿಸಿದೆ.

“ವಿಭಿನ್ನ ನಂಬಿಕೆಗಳು ಮತ್ತು ತತ್ವ ಪಾಲಿಸುವ ಎಲ್ಲರಿಗೂ ಸಾರ್ವಜನಿಕ ದೇವಾಲಯಗಳು ಎಂದು ಪರಿಗಣಿತವಾಗಿರುವ ಪಂಢರಾಪುರ ದೇವಾಲಯಗಳು ಮುಕ್ತವಾಗಿವೆ. ಅವುಗಳನ್ನು ನಿರ್ದಿಷ್ಟ ಧಾರ್ಮಿಕ ಪಂಥಕ್ಕೆ ಸೇರಿದವು ಎಂದು ಪರಿಗಣಿಸಿಲ್ಲ. ಪಂಢರಾಪುರ ದೇವಾಲಯಗಳು ರಾಜ್ಯದಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದು, ದೇವಾಲಯದ ಹಿತಾಸಕ್ತಿ, ಆಸ್ತಿ ಮತ್ತು ಧರ್ಮದತ್ತಿಯನ್ನು ರಕ್ಷಿಸಬೇಕಿದೆ. ಇದಲ್ಲದೇ ಬಹುಸಂಖ್ಯೆಯ ಭಕ್ತರು ಮತ್ತು ಯಾತ್ರಾರ್ಥಿಗಳನ್ನು ಪುರೋಹಿತಶಾಹಿ ವರ್ಗಗಳ ಹಿಡಿತದಿಂದ ಮುಕ್ತಗೊಳಿಸಬೇಕಿದೆ” ಎಂದು ಅಫಿಡವಿಟ್‌ನಲ್ಲಿ ಒತ್ತಿ ಹೇಳಲಾಗಿದೆ.

ದೇವಾಲಯಗಳಿಗೆ ಸೇರಿದ ಪುರೋಹಿತ ವರ್ಗಗಳ ವಿರುದ್ಧ ಹಲವಾರು ದೂರುಗಳನ್ನು ಸ್ವೀಕರಿಸಲಾಗಿದೆ. ಇದರಿಂದಾಗಿ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಪುರೋಹಿತ ವರ್ಗಗಳ ಎಲ್ಲಾ ಪಾರಂಪರಿಕ ಹಕ್ಕುಗಳು ಮತ್ತು ಸವಲತ್ತುಗಳನ್ನು ರದ್ದುಗೊಳಿಸಲು ರಾಜ್ಯವು ಪಿಟಿಎ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಸರ್ಕಾರ ಹೇಳಿದೆ.

ಸಾರ್ವಜನಿಕ ಹಿತಾಸಕ್ತಿ, ಆರ್ಥಿಕ ಮತ್ತು ಜಾತ್ಯತೀತ ಚಟುವಟಿಕೆ ರಕ್ಷಿಸಲು ಕಾಯಿದೆ ಜಾರಿಗೊಳಿಸಲಾಗಿದೆ. ಆದರೆ, ಜನರ ಧಾರ್ಮಿಕ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡಲಾಗಿಲ್ಲ. ಪಿಟಿಎ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು  2007ರಲ್ಲಿ ಪ್ರಶ್ನಿಸಲಾಗಿದ್ದು, ಪ್ರಕರಣವು ವಾಸ್ತವಿಕ ವಿಚಾರಗಳ ಕುರಿತ ವಿವಾದವಾಗಿದ್ದರಿಂದ ಅದನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಪುರೋಹಿತ ವರ್ಗವು ದೇವಸ್ಥಾನದ ಮೇಲೆ ಹಕ್ಕು ಸಾಧಿಸಿ ಸಲ್ಲಿಸಿದ್ದ ಸಿವಿಲ್‌ ದಾವೆಯನ್ನು ಸೊಲ್ಲಾಪುರ ವಿಚಾರಣಾಧೀನ ನ್ಯಾಯಾಲಯವು ತಿರಸ್ಕರಿಸಿತ್ತು. ಇದನ್ನು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿವೆ ಎಂದು ರಾಜ್ಯ ಸರ್ಕಾರ ವಿವರಿಸಿದೆ.