Anil Deshmukh, State Home Minister, Maharashtra freepressjounal.in
ಸುದ್ದಿಗಳು

ಪರಮ್ ಬೀರ್ ಸಿಂಗ್ ಆರೋಪ: ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶಮುಖ್

ಸಿಂಗ್ ಮಾಡಿದ ಆರೋಪಗಳು ಸಂಪೂರ್ಣವಾಗಿ ಸುಳ್ಳು ಮತ್ತು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಬೆದರಿಸುವ ಯತ್ನವಾಗಿದೆ ಎಂದು ದೇಶಮುಖ್ ಅವರ ಪತ್ರಿಕಾ ಪ್ರಕಟಣೆ ತಿಳಿಸಿದೆ.

Bar & Bench

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಅವರು ಬರೆದಿದ್ದಾರೆನ್ನಲಾದ ಪತ್ರದಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದ್ದು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮಹಾರಾಷ್ಟ್ರ ಗೃಹಸಚಿವ ಅನಿಲ್‌ ದೇಶಮುಖ್‌ ತಿಳಿಸಿದ್ದಾರೆ.

ಶನಿವಾರ ಸಂಜೆ ಬಿಡುಗಡೆ ಮಾಡಿರುವ ಪತ್ರದಲ್ಲಿ “ಸಿಂಗ್‌ ಆರೋಪಗಳು ಆಧಾರರಹಿತವಾಗಿದ್ದು ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಮೈತ್ರಿಕೂಟ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ದೂಷಿಸುವ ಮತ್ತು ಬೆದರಿಕೆ ಒಡ್ಡುವ ಯತ್ನವಾಗಿದೆ. ಮುಖೇಶ್ ಅಂಬಾನಿ‌ ಅವರ ನಿವಾಸ ʼಆಂಟಿಲಿಯಾʼ ಹೊರಗೆ ಪತ್ತೆಯಾದ ಸ್ಫೋಟಕ ಹೊಂದಿದ್ದ ವಾಹನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಾನು ಸಿಲುಕಿಬೀಳಬಹುದು ಎಂಬ ಕಾರಣಕ್ಕೆ ಸಿಂಗ್ ಈ ಆರೋಪಗಳನ್ನು ಮಾಡಿದ್ದಾರೆ" ಎಂದು ತಿಳಿಸಲಾಗಿದೆ.

ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ಬಳಸಿಕೊಂಡು ಹಣ ಸಂಗ್ರಹಿಸಿದ ಆರೋಪದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಅವರು ಕಮಿಷನರೇಟ್‌ ಹುದ್ದೆಯಿಂದ ತಮ್ಮನ್ನು ತೆಗೆದುಹಾಕುವ ಬಗ್ಗೆ ಅಧಿಕೃತ ಆದೇಶ ನೀಡುವ ಒಂದು ದಿನ ಮೊದಲೇ ತಮ್ಮನ್ನು ಹುದ್ದೆಯಿಂದ ತೆಗೆದುಹಾಕಲಾಗುತ್ತದೆ ಎಂದು ಸಿಂಗ್‌ ಅವರಿಗೆ ತಿಳಿದಿತ್ತು. ನಂತರ, ಅವರು ಸಹಾಯಕ ಪೊಲೀಸ್ ಆಯುಕ್ತ ಸಂಜಯ್ ಪಾಟೀಲ್ ಅವರಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದರು. ಕೆಲವು ಪ್ರಶ್ನೆಗಳೊಂದಿಗೆ ನಿರೀಕ್ಷಿತ ಉತ್ತರಗಳನ್ನು ಪಡೆದರು ಎಂದು ದೇಶಮುಖ್‌ ಆರೋಪಿಸಿದ್ದಾರೆ.

ತಮ್ಮ ವಿರುದ್ಧ ವ್ಯವಸ್ಥಿತವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಿಂಗ್ ಯತ್ನಿಸುತ್ತಿರುವ ದೊಡ್ಡ ತಂತ್ರದ ಭಾಗ ಇದಾಗಿದೆ. ಸಿಂಗ್‌ ಅವರ ವರ್ಗಾವಣೆ ಮತ್ತು ಅದಕ್ಕೆ ಕಾರಣಗಳ ಬಗ್ಗೆ ʼಲೋಕಮತʼಕ್ಕೆ ಸಂದರ್ಶನ ನೀಡಿದ ನಂತರ ತಮ್ಮ ವಿರುದ್ಧ ಅವರು ವಾಟ್ಸಾಪ್‌ನಲ್ಲಿ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಲು ಶುರು ಮಾಡಿದರು. ಅಮಾನತುಗೊಂಡ 16 ವರ್ಷಗಳ ಬಳಿಕ ತಮ್ಮನ್ನು ಕರ್ತವ್ಯಕ್ಕೆ ಪರಿಗಣಿಸಿದ ಕಾರಣಕ್ಕಾಗಿ ವಾಜೆ ಮತ್ತು ಪಾಟೀಲ್‌ ಅವರು ಸಿಂಗ್‌ ಅವರಿಗೆ ಹತ್ತಿರವಾಗಿದ್ದರು ಎಂದು ದೇಶಮುಖ್‌ ತಿಳಿಸಿದ್ದಾರೆ.

ವಾಜೆ ಬಂಧನವಾದಾಗಲೇ ಸಿಂಗ್‌ ಅವರು ಈ ಬಗ್ಗೆ ಯಾಕೆ ಏನನ್ನೂ ಹೇಳಲಿಲ್ಲ ಎಂದು ಪ್ರಶ್ನಿಸಿರುವ ದೇಶಮುಖ್‌ “ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿದ ಗಂಭೀರ ತನಿಖೆ ಮತ್ತು ಎಸ್‌ಯುವಿ ಪ್ರಕರಣಕ್ಕೆ ಸಂಬಂಧಿಸಿರುವ ಮನಸುಖ್‌ ಹಿರೇನ್ ಅವರ ಸಾವಿನಿಂದ ಗಮನ ಬೇರೆಡೆ ಸೆಳೆಯಲು ಪತ್ರವನ್ನು ಬರೆಯಲಾಗಿದೆ. ಆದ್ದರಿಂದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಅವರು ತನಿಖೆ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.