Narendra Modi, Dhruv Rathee Facebook
ಸುದ್ದಿಗಳು

ಧ್ರುವ್ ರಾಠಿಯ ಪ್ರಧಾನಿ ಮೋದಿ ವಿರೋಧಿ ವಿಡಿಯೋ ಹಂಚಿಕೊಂಡ ಆರೋಪ: ಮಹಾರಾಷ್ಟ್ರ ವಕೀಲರೊಬ್ಬರ ವಿರುದ್ಧ ಎಫ್ಐಆರ್

ಲೋಕಸಭೆ ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಬನ್ಸೋಡೆ ಅವರು ರಾಠಿ ಅವರ 'ಮೈಂಡ್ ಆಫ್ ಡಿಕ್ಟೇಟರ್' ವೀಡಿಯೊವನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದರು ಎಂದು ಪೊಲೀಸರಿಗೆ ತಿಳಿಸಲಾಗಿದೆ.

Bar & Bench

ಲೋಕಸಭಾ ಚುನಾವಣೆಯ ಐದನೇ ಹಂತದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಯೂಟ್ಯೂಬರ್ ಧ್ರುವ್ ರಾಠಿ ಅವರ ವಿಡಿಯೋವನ್ನು ಹಂಚಿಕೊಂಡ ಆರೋಪದ ಮೇಲೆ ಮಹಾರಾಷ್ಟ್ರದ ವಕೀಲರೊಬ್ಬರ ವಿರುದ್ಧ ಈಚೆಗೆ ಎಫ್‌ಐಆರ್‌ ದಾಖಲಿಸಲಾಗಿದೆ.

ಮತ್ತೊಬ್ಬ ವಕೀಲ ಜಯಂತ್ ವಾಲಿಂಜ್ಕರ್ ಅವರು ಮೀರಾ ಭಯಂದರ್ ವಸಾಯಿ ವಿರಾರ್ (ಎಂಬಿವಿವಿ) ಪೊಲೀಸರಿಗೆ ಬರೆದ ಪತ್ರ ಆಧರಿಸಿ ನ್ಯಾಯವಾದಿ ಆದೇಶ್ ಬನ್ಸೋಡೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ವಸಾಯ್ ನ್ಯಾಯಾಲಯ ವಕೀಲರ ಸಂಘದ ವಾಟ್ಸಾಪ್ ಗ್ರೂಪ್‌ನಲ್ಲಿ 'ಮೈಂಡ್ ಆಫ್ ಡಿಕ್ಟೇಟರ್' ಶೀರ್ಷಿಕೆಯ ಧ್ರುವ್‌ ರಾಠಿ ಅವರ ವಿಡಿಯೋವನ್ನು ಬನ್ಸೋಡೆ ಹಂಚಿಕೊಂಡಿದ್ದಾರೆ ಎಂದು ವಾಲಿಂಜ್ಕರ್ ಅವರು  ಪೊಲೀಸರಿಗೆ ತಿಳಿಸಿದ್ದಾರೆ. ಬನ್ಸೋಡೆ ಅವರು  'ನಿಮ್ಮ ಮತ ಚಲಾಯಿಸುವ ಮೊದಲು ಈ ವೀಡಿಯೊವನ್ನು ವೀಕ್ಷಿಸಿ' ಎಂಬ ಸಂದೇಶದೊಂದಿಗೆ ಮೇ 20ರಂದು ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಹಂಚಿಕೊಂಡಿದ್ದಾರೆ ಎಂದು ದೂರಲಾಗಿದೆ.

ಈ ಮಾಹಿತಿ ಆಧರಿಸಿ ಎಂಬಿವಿವಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. "ಆರೋಪಿಗಳು ಹಂಚಿಕೊಂಡ ವಿಡಿಯೋ ಮತ್ತು ಬನ್ಸೋಡೆ ಅವರ ಸಂದೇಶ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಬಗ್ಗೆ ಸುಳ್ಳು ಮಾಹಿತಿ ನೀಡಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತದೆ. ಆ ಮೂಲಕ ಪೊಲೀಸ್ ಆಯುಕ್ತರ ನಿರ್ಬಂಧಕಾಜ್ಞೆಗಳನ್ನು ಉಲ್ಲಂಘಿಸಲಾಗಿದೆ" ಎಂದು ಎಫ್‌ಐಆರ್  ತಿಳಿಸಿದೆ.