ಎಲ್ಲಾ ಬಗೆಯ ಉದ್ಯೋಗ ಮತ್ತು ಶಿಕ್ಷಣ ರಂಗದಲ್ಲಿ ತೃತೀಯಲಿಂಗಿ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅನುವಾಗುವಂತೆ ಒಂದು ವಾರದೊಳಗೆ ನಿರ್ಣಯ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ [ಮಹಾರಾಷ್ಟ್ರ ಸರ್ಕಾರ ಮತ್ತು ಆರ್ಯಾ ಪೂಜಾರಿ ಇನ್ನಿತರರ ನಡುವಣ ಪ್ರಕರಣ] .
ಅಡ್ವೊಕೇಟ್ ಜನರಲ್ ಡಾ.ಬೀರೇಂದ್ರ ಸರಾಫ್ ಅವರು “2020ರ ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ನಿಯಮಾವಳಿ ಅನುಸಾರ ಒಂದು ವಾರದೊಳಗೆ ಸರ್ಕಾರ ಸಮಿತಿ ರಚಿಸಲಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಕಾನ್‌ಸ್ಟೆಬಲ್‌ಗಳು ಮತ್ತು ಚಾಲಕರ ಹುದ್ದೆಗಳಿಗೆ ತೃತೀಯ ಲಿಂಗಿ ವ್ಯಕ್ತಿಗಳಿಗೆ ದೈಹಿಕ ಮಾನದಂಡಗಳನ್ನು ಸೇರಿಸುವುದಕ್ಕಾಗಿ ಪೊಲೀಸ್ ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ 2020ರ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿಯಮಗಳನ್ನು ರೂಪಿಸುವಂತೆ ಕಳೆದ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. 2019ರ ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕಗಳ ರಕ್ಷಣೆ) ಕಾಯಿದೆ ಜಾರಿಗೆ ತರಲು 2020ರ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಉದ್ಯೋಗದ ಉದ್ದೇಶಗಳಿಗಾಗಿ ತೃತೀಯ ಲಿಂಗಿ ವ್ಯಕ್ತಿಗೆ ಮಾನ್ಯತೆ ನೀಡಲು ಪಾಲಿಸಬಹುದಾದ ಕಾರ್ಯವಿಧಾನವನ್ನು ನಿಯಮಗಳು ಸೂಚಿಸುತ್ತವೆ. ನಿಯಮಗಳಲ್ಲಿ ಎರಡು ವರ್ಷಗಳೊಳಗೆ ಕಾಯಿದೆಯನ್ನು ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿತ್ತು.
ತೃತೀಯಲಿಂಗಿ ಸಮುದಾಯಕ್ಕೆ ಮೀಸಲಾತಿ ನಿಗದಿಗೊಳಿಸದೆ ಮಹಾಟ್ರಾನ್ಸ್ಕೊ ಈ ವರ್ಷದ ಮೇ ತಿಂಗಳಲ್ಲಿ ಹೊರಡಿಸಿದ್ದ ನೇಮಕಾತಿ ಜಾಹೀರಾತುಗಳಲ್ಲಿ ಬದಲಾವಣೆ ತರುವಂತೆ ಕೋರಿ ವಿನಾಯಕ ಕಾಶಿದ್ ಎಂಬವವರು ಸಲ್ಲಿಸಿದ್ದ ಅರ್ಜಿಯಲ್ಲಿ ಅಡ್ವೊಕೇಟ್ ಜನರಲ್ ಸರಾಫ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಸಂದೀಪ್ ಮರ್ನೆ ಅವರಿದ್ದ ಪೀಠಕ್ಕೆ ಮನವಿ ಮಾಡಿದ್ದರು.