ಶಾಸಕತ್ವ ಅನರ್ಹತೆ ನೋಟಿಸ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಬಣಕ್ಕೆ 48 ಗಂಟೆ ಕಾಲಾವಕಾಶ ನೀಡಿದ್ದು ಸಾಕಾಗಿದ್ದು, ಅದನ್ನು ಅಸಮರ್ಥನೀಯ ಎಂದು ಹೇಳಲಾಗದು ಎಂದು ಮಹಾರಾಷ್ಟ್ರ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ವಿವರಿಸಿದ್ದಾರೆ.
ಶಿವಸೇನೆಯ ಅಜಯ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ನೇಮಕ ಮಾಡಿರುವುದು ಮತ್ತು ಶಿಂಧೆ ಬಣಕ್ಕೆ ಸೇರಿದ 16 ಮಂದಿಗೆ ಜಿರ್ವಾಲ್ ಅನರ್ಹತೆ ನೋಟಿಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಶಿಂಧೆ ಬಣ ಸಲ್ಲಿಸಿರುವ ಮನವಿಗೆ ಜಿರ್ವಾಲ್ ಪ್ರತಿಕ್ರಿಯಿಸಿದ್ದಾರೆ.
ಬಂಡಾಯ ಶಾಸಕರು 24 ಗಂಟೆಯಲ್ಲಿ ಸುಪ್ರೀಂ ಕೋರ್ಟ್ ಕದತಟ್ಟಿರುವಾಗ ಅನರ್ಹತೆ ನೋಟಿಸ್‌ಗೆ 48 ಗಂಟೆಯಲ್ಲಿ ಪ್ರತಿಕ್ರಿಯಿಸಬಹುದಿತ್ತು ಎಂದು ಜಿರ್ವಾಲ್ ಹೇಳಿದ್ದಾರೆ. “ಅನರ್ಹತೆ ನೋಟಿಸ್‌ಗೆ ಪ್ರತಿಕ್ರಿಯಿಸಲು ಅರ್ಜಿದಾರರಿಗೆ 48 ಗಂಟೆ ಕಾಲಾವಕಾಶ ನೀಡಿರುವುದರಲ್ಲಿ ಯಾವುದೇ ಅಕ್ರಮ ಎಸಗಲಾಗಿದೆ ಎನಿಸುವುದಿಲ್ಲ. ಪ್ರತಿಕ್ರಿಯೆ ಸಲ್ಲಿಸಲು 48 ಗಂಟೆ ಕಾಲಾವಕಾಶ ನೀಡಲಾಗಿತ್ತು. ಅರ್ಜಿದಾರರು ನನ್ನನ್ನು ಸಂಪರ್ಕಿಸಿ ಹೆಚ್ಚು ಸಮಯವಕಾಶ ಕೋರಿಲ್ಲ. ಪ್ರತಿವಾದಿಗಳು 24 ಗಂಟೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ನಾನು ಜಾರಿಗೊಳಿಸಿರುವ ನೋಟಿಸ್ ಅನ್ನು ಪ್ರಶ್ನಿಸಿದ್ದಾರೆ. ಹೀಗಿರುವಾಗ, ನೋಟಿಸ್‌ಗೆ ಪ್ರತಿಕ್ರಿಯಿಸಲು 48 ಗಂಟೆ ಕಾಲಾವಕಾಶ ನೀಡಿರುವುದು ಅಸಮರ್ಥನೀಯ ಮತ್ತು ಸ್ವಾಭಾವಿಕ ನ್ಯಾಯ ಉಲ್ಲಂಘನೆಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾನು ವಿಫಲವಾಗಿದ್ದೇನೆ” ಎಂದು ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.
ತಮ್ಮ ವಿರುದ್ಧ ಸೂಕ್ತ ರೀತಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿಲ್ಲವಾದ್ದರಿಂದ ಹಾಲಿ ಪ್ರಕರಣಕ್ಕೆ ನಬಮ್ ರೆಬಿಯಾ ತೀರ್ಪು ಅನ್ವಯಿಸುವುದಿಲ್ಲ ಎಂದು ಜಿರ್ವಾಲ್ ಆಕ್ಷೇಪಣೆಯಲ್ಲಿ ವಿವರಿಸಿದ್ದಾರೆ.
ತಮ್ಮನ್ನು ಪದಚ್ಯುತಗೊಳಿಸುವುದಕ್ಕಾಗಿ ಅವಿಶ್ವಾಸ ನಿರ್ಣಯವನ್ನು ಯಾವುದೇ ಒಬ್ಬ ವಿಧಾನಸಭೆ ಸದಸ್ಯ ನೋಟಿಸ್ ಕಳುಹಿಸಿಲ್ಲ. ಬದಲಿಗೆ ವಕೀಲರೊಬ್ಬರು ಅದನ್ನು ಕಳುಹಿಸಿದ್ದಾರೆ. ಇದು ಸಂವಿಧಾನದ 179(ಸಿ) ಅಡಿ ಸಿಂಧುವಲ್ಲ. ಶಿವಸೇನಾದ ಲೆಟರ್‌ಹೆಡ್‌ನಲ್ಲಿ ಕಳುಹಿಸಲಾದ ಮನವಿಯನ್ನು ಸ್ವೀಕರಿಸಲಾಗಿಲ್ಲ. ಏಕೆಂದರೆ ಅದನ್ನು ಯಾವುದೇ ಶಾಸಕರ ಅಧಿಕೃತ ಈಮೇಲ್ ಐಡಿಯಿಂದ ಕಳುಹಿಸಲಾಗಿಲ್ಲ ಎಂದು ಜಿರ್ವಾಲ್ ವಿವರಿಸಿದ್ದಾರೆ.
“ವಂಚಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂಬುದು ತಮಗೆ ಮನವರಿಕೆ ಆಗುವ ಉದ್ದೇಶದಿಂದ ಪತ್ರದಲ್ಲಿ ಸಹಿ ಮಾಡಿರುವವರು ವೈಯಕ್ತಿಕವಾಗಿ ಹಾಜರಾಗಿ ತಮಗೆ ಮನವರಿಕೆ ಮಾಡದ ಅಥವಾ ನಿರ್ಣಯಕ್ಕೆ ತಾವೇ ಸಹಿ ಮಾಡಿರುವುದಾಗಿ ತಿಳಿಸದ ಹೊರತು, ಆ ನೋಟಿಸ್ ಅನ್ನು ದಾಖಲೆಯಾಗಿ ಸ್ವೀಕರಿಸದೇ ಇರುವುದು ನನ್ನ ಕರ್ತವ್ಯವಾಗಿದೆ” ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ. ಒಂದೊಮ್ಮೆ ತಾನು ಅದನ್ನು ದಾಖಲೆಯಲ್ಲಿ ಸ್ವೀಕರಿಸಿ, ಅದು ನಕಲಿ ಎಂದಾದರೆ ತಾನು ಕರ್ತವ್ಯ ಲೋಪಕ್ಕೆ ಒಳಗಾಗುವ ಸಾಧ್ಯತೆ ಇತ್ತು ಎಂದು ಜಿರ್ವಾಲ್ ವಿವರಿಸಿದ್ದಾರೆ.