Maharashtra Political Crisis
Maharashtra Political Crisis 
ಸುದ್ದಿಗಳು

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಹಾಗೂ ದೆಹಲಿ ಅಧಿಕಾರ ಸಂಘರ್ಷ ಪ್ರಕರಣಗಳ ಕುರಿತಾದ ತೀರ್ಪನ್ನು ನಾಳೆ ನೀಡಲಿದೆ ಸುಪ್ರೀಂ

Bar & Bench

ಕಳೆದ ವರ್ಷ ಸಾಕಷ್ಟು ಸದ್ದು ಮಾಡಿದ್ದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಗುರುವಾರ, ಮೇ 11ರಂದು ತೀರ್ಪು ನೀಡಲಿದೆ. ಇದೇ ವೇಳೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಅಧಿಕಾರ ನಿಯಂತ್ರಣ ಕುರಿತಂತೆಯೂ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳಲಿದೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು

ಶಾಸಕರು ಪಕ್ಷಾಂತರ ಮಾಡಿದಾಗ ರಾಜ್ಯಪಾಲರು ಮತ್ತು ಸ್ಪೀಕರ್‌ ಚಲಾಯಿಸಬಹುದಾದ ಅಧಿಕಾರ ಸೇರಿದಂತೆ ಹಲವು ವಿಷಯಗಳ ಕುರಿತ ವಾದವನ್ನು ಪೀಠ ಆಲಿಸಿತ್ತು. ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಪರಿಣಾಮ ಶಿವಸೇನೆ ಇಬ್ಭಾಗವಾಗಿ ಮುಖ್ಯಮಂತ್ರಿ ಗಾದಿಯಿಂದ ಉದ್ಧವ್‌ ಕೆಳಗಿಳಿದು ಏಕ್‌ನಾಥ್‌ ಶಿಂಧೆ ನೇತೃತ್ವದ ಶಿವಸೇನೆ ಬಣ ಬಿಜೆಪಿಯ ಬೆಂಬಲದೊಂದಿಗೆ ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿತ್ತು.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್. ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ  ಎಸ್ ನರಸಿಂಹ ಅವರಿದ್ದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಪ್ರಕರಣದ ವಿಚಾರಣೆ ನಡೆಸಿತ್ತು.

ದೆಹಲಿ ಅಧಿಕಾರ ಸಂಘರ್ಷ

Justice Hima Kohli, Justice MR Shah, CJI DY Chandrachud, Justice Krishna Murari and Justice PS Narasimha

ಅಧಿಕಾರಿಗಳ ವರ್ಗಾವಣೆ ಮತ್ತು ನಿಯುಕ್ತಿಯ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ನಡುವಿನ ಸಂಘರ್ಷದ ಕುರಿತಂತೆ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸಲಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಈ ವರ್ಷದ ಜನವರಿ 18ರಂದು ತೀರ್ಪು ಕಾಯ್ದಿರಿಸಿತ್ತು.

ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ (ಎನ್‌ಸಿಟಿ) ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳನ್ನು ಒಳಗೊಂಡಿರುವ ಸಂವಿಧಾನದ 239ಎಎ ವಿಧಿಯನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ವ್ಯಾಖ್ಯಾನಿಸುವ ಮೂಲಕ 2018ರಲ್ಲಿ ಪ್ರಕರಣ ಮುನ್ನೆಲೆಗೆ ಬಂದಿತ್ತು. ಆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ದೆಹಲಿಯ ಸಚಿವ ಸಂಪುಟ ಸಮಿತಿಯ ಸಲಹೆಯ ಹೊರತಾಗಿ ಎಲ್‌ಜಿಯವರು ಸ್ವತಂತ್ರವಾಗಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು. ರಾಷ್ಟ್ರ ರಾಜಧಾನಿ ವಲಯದ ಸರ್ಕಾರದೊಂದಿಗೆ ಎಲ್‌ಜಿ ಅವರು ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದು ತಿಳಿಸಿತ್ತು.