Eknath Shinde and Uddhav Thackeray , Supreme Court 
ಸುದ್ದಿಗಳು

ಉದ್ಧವ್‌ಗೆ ಬಹುಮತ ಇಲ್ಲ ಎಂದು ನಿರ್ಧರಿಸುವಲ್ಲಿ ರಾಜ್ಯಪಾಲರು ಎಡವಿದ್ದಾರೆ ಎಂದ ಸುಪ್ರೀಂ; ಶಿಂಧೆ ಸರ್ಕಾರ ಅಬಾಧಿತ

ಠಾಕ್ರೆ ಅವರು ವಿಶ್ವಾಸ ಮತ ಯಾಚಿಸದೆ ರಾಜೀನಾಮೆ ನೀಡಿದ ಕಾರಣ ಯಥಾಸ್ಥಿತಿಗೆ ಮರಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Nataraju V

ರಾಜಕೀಯ ಪಕ್ಷವೊಂದಕ್ಕೆ ಸದನದಲ್ಲಿ ವಿಶ್ವಾಸಮತ ಯಾಚಿಸುವಂತೆ ಸೂಚಿಸುವ ಸಂದರ್ಭದಲ್ಲಿ ಸ್ಪೀಕರ್‌ ಹಾಗೂ ರಾಜ್ಯಪಾಲರು ಗಣನೆಗೆ ತೆಗೆದುಕೊಳ್ಳಬೇಕಾದ ಪ್ರಮುಖ ಅಂಶಗಳ ಬಗ್ಗೆ ಮಹತ್ವವೆನಿಸುವ ತೀರ್ಪನ್ನು ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಗುರುವಾರ ನೀಡಿದೆ.

ಶಿವಸೇನೆಯ ಶಿಂಧೆ ಬಣದ 34 ಶಾಸಕರ ಕೋರಿಕೆಯ ಮೇರೆಗೆ ಮಹರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ವಿಶ್ವಾಸಮತ ಯಾಚನೆಗೆ ಸೂಚಿಸಿದ್ದು ಸರಿಯಲ್ಲ ಎಂದು ಸಿಜೆಐ ನೇತೃತ್ವದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸದನದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ನಿರ್ಣಯಕ್ಕೆ ಬರಲು ಅಗತ್ಯವಾದ ಯಾವುದೇ ವಾಸ್ತವಿಕ ಮಾಹಿತಿಯನ್ನು ರಾಜ್ಯಪಾಲರು ಹೊಂದಿರಲಿಲ್ಲ ಎಂದು ಪೀಠವು ಸ್ಪಷ್ಟವಾಗಿ ಹೇಳಿತು [ಸುಭಾಷ್ ದೇಸಾಯಿ ವಿರುದ್ಧ ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರ ರಾಜ್ಯಪಾಲರು ಮತ್ತು ಇತರರು].

ಮುಂದುವರೆದು ಠಾಕ್ರೆ ಸರ್ಕಾರದ ಬಹುಮತವನ್ನು ರಾಜ್ಯಪಾಲರು ಅನುಮಾನಿಸುವುದಕ್ಕೆ ಸಾಧ್ಯವಿರಲಿಲ್ಲ. ಕೆಲವು ಶಾಸಕರು ಅತೃಪ್ತಿ ಹೊಂದಿದ್ದಾರೆ ಎನ್ನುವುದಷ್ಟೇ ವಿಶ್ವಾಸಮತ ಯಾಚನೆಗೆ ಸೂಚಿಸಲು ಸಾಕಾಗುವುದಿಲ್ಲ ಎಂದು ನ್ಯಾಯಾಲಯವು ಒತ್ತಿಹೇಳಿತು.

"ಸದಸ್ಯರು ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ ಎನ್ನುವುದನ್ನು ಸೂಚಿಸುವ ಯಾವುದೇ ದಾಖಲೆಗಳಿರಲಿಲ್ಲ. ಉದ್ಧವ್‌ ಠಾಕ್ರೆ ಸರ್ಕಾರದ ಕೆಲವು ನೀತಿ ನಿರ್ಧಾರಗಳೊಂದಿಗೆ ಅವರು ಸಹಮತ ಹೊಂದಿರಲಿಲ್ಲ ಎನ್ನುವುದನ್ನಷ್ಟೇ ಲಭ್ಯ ಸಂವಹನವು ತೋರಿಸುತ್ತದೆ. ಅವರು (ಶಿಂಧೆ ಬಣ) ಈ ವಿಚಾರವಾಗಿ ಚರ್ಚಿಸುತ್ತಾರೆಯೇ ಅಥವಾ ಬೇರೆ ಪಕ್ಷದೊಂದಿಗೆ ವಿಲೀನಗೊಳ್ಳುತ್ತಾರೆಯೇ ಎನ್ನುವುದು ಸ್ಪಷ್ಟವಾಗಿರಲಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಹಾಗಾಗಿ ಉದ್ಧವ್ ಠಾಕ್ರೆ ಅವರು ಸದನದಲ್ಲಿ ಬಹುಮತ ಕಳೆದುಕೊಂಡಿದ್ದಾರೆ ಎಂದು ರಾಜ್ಯಪಾಲರು ನಿರ್ಧರಿಸುವಲ್ಲಿ ತಪ್ಪೆಸಗಿದ್ದಾರೆ ಎಂದು ನ್ಯಾಯಾಲಯ ಹೇಳಿತು.

ರಾಜ್ಯಪಾಲರು ವಸ್ತುನಿಷ್ಠ ಮಾನದಂಡಗಳನ್ನು ಬಳಸಬೇಕು, ವ್ಯಕ್ತಿನಿಷ್ಠ ತೃಪ್ತಿಯನ್ನಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ.

“ಶಾಸಕರು ಸರ್ಕಾರ ತೊರೆಯಲು ಬಯಸಿದ್ದರು ಎಂದು ಒಂದು ವೇಳೆ ಭಾವಿಸಿದರೂ, ಅದು ಕೇವಲ ಅತೃಪ್ತಿಯನ್ನು ಮಾತ್ರ ಬಿಂಬಿಸುತ್ತದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯ ಅಥವಾ ಪಕ್ಷ- ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಮಾಧ್ಯಮವಾಗಿ ವಿಶ್ವಾಸಮತ ಯಾಚಿಸುವಂತೆ ಸೂಚಿಸಲು ಬಳಸಲಾಗುವುದಿಲ್ಲ. ಸರ್ಕಾರವನ್ನು ಬೆಂಬಲಿಸದಿರುವುದಕ್ಕೂ ಮತ್ತು ಕೆಲವು ರಾಜಕೀಯ ಪಕ್ಷದ ಸದಸ್ಯರು ಅತೃಪ್ತರಾಗಿದ್ದಾರೆ ಎಂಬುದಕ್ಕೂ ವ್ಯತ್ಯಾಸ ಇದೆ”ಎಂದು ನ್ಯಾಯಾಲಯ ಹೇಳಿದೆ.

ರಾಜ್ಯಪಾಲರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ  ಪಕ್ಷಗಳ ನಡುವಿನ ವಿವಾದದಲ್ಲಿ ಪಾತ್ರ ವಹಿಸುವಂತಿಲ್ಲ. ಕೆಲ ಸದಸ್ಯರು ಶಿವಸೇನೆ ತೊರೆಯಲು ಬಯಸುತ್ತಾರೆ ಎಂಬುದನ್ನು ಆಧರಿಸಿ ಅವರು ಕಾರ್ಯನಿರ್ವಹಿಸಬಾರದಿತ್ತು. ಇದರರ್ಥ ಆ ಶಾಸಕರು ಸರ್ಕಾರಕ್ಕೆ ತಮ್ಮ ಬೆಂಬಲ ಹಿಂಪಡೆದಿದ್ದಾರೆ ಎಂದಲ್ಲ ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠವು ನಬಮ್ ರೆಬಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರ ತೀರ್ಪಿನಲ್ಲಿ ನೀಡಲಾದ ಸ್ಪೀಕರ್ ಅಧಿಕಾರಕ್ಕೆ ಸಂಬಂಧಿಸಿದ ವಿಷಯವನ್ನು ವಿಸ್ತೃತ ಪೀಠದ ಪರಿಗಣನೆಗೆ ಶಿಫಾರಸ್ಸು ಮಾಡಿದೆ.

ನಬಮ್ ರೆಬಿಯಾ ತೀರ್ಪು ತನ್ನ ವಿರುದ್ಧ ಅನರ್ಹತೆಯ ನೋಟಿಸ್ ಬಾಕಿ ಉಳಿದಿರುವ ಸ್ಪೀಕರ್‌, ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ಬಗ್ಗೆ ನಿರ್ಣಯ ಕೈಗೊಳ್ಳಬಹುದೇ ಎಂಬುದನ್ನು ನಿರ್ಧರಿಸುವುದಿಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.

"ಸ್ಪೀಕರ್ ಅವರನ್ನು ಪದಚ್ಯುತಿ ಮಾಡಲು ನೀಡಿದ ನೋಟಿಸ್ ಸದಸ್ಯರ ಅನರ್ಹತೆಯನ್ನು ನಿರ್ಧರಿಸುವುದನ್ನು ತಡೆಯುತ್ತದೆಯೇ?." ಎಂಬ ಪ್ರಶ್ನೆಗೆ ವಿಸೃತ ಪೀಠ ಉತ್ತರ ಕಂಡುಕೊಳ್ಳಬೇಕು ಎಂದು ಅದು ತಿಳಿಸಿದೆ.

ಬಹುಮುಖ್ಯವಾಗಿ, ಶಾಸಕಾಂಗ ಪಕ್ಷವು (ಅಂದರೆ ಸದನದಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷದ ಬಹುಪಾಲು ಶಾಸಕರು) ಪಕ್ಷದ ಮುಖ್ಯ ಸಚೇತಕರನ್ನು (ವಿಪ್‌) ನೇಮಿಸುವ ಅಧಿಕಾರ ಹೊಂದಿಲ್ಲ. ಅದು ಸಂಬಂಧಪಟ್ಟ ರಾಜಕೀಯ ಪಕ್ಷದ ಕೆಲಸ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಶಾಸಕಾಂಗ ಪಕ್ಷವು ಮುಖ್ಯ ಸಚೇತಕರನ್ನು ನೇಮಿಸುವುದೆಂದರೆ ಅದು ತನ್ನ ರಾಜಕೀಯ ಪಕ್ಷದೊಂದಿಗೆ ಹೊಂದಿರುವ ಕರುಳಬಳ್ಳಿಯನ್ನು ಕತ್ತರಿಸಿದಂತೆ ಎಂದು ಪೀಠವು ವಿವರಿಸಿದೆ.

ಹಾಗಾಗಿ, ಶಿವಸೇನೆಯ ಶಿಂಧೆ ಬಣದಿಂದ ಸದನದಲ್ಲಿ ಪಕ್ಷದ ವಿಪ್ ಆಗಿ ನೇಮಕಗೊಂಡಿದ್ದ ಭರತ್‌ಶೇಟ್‌ ಗೊಗವಾಳೆ ಅವರನ್ನು ನೇಮಕವನ್ನು ಕಾನೂನುಬಾಹಿರ ಎಂದು ನ್ಯಾಯಾಲಯ ತೀರ್ಪು ನೀಡಿದೆ.